Karnataka Rain: ವಾರಾಂತ್ಯದಲ್ಲಿ ಮಳೆಯ ಕೃಪೆ ಯಾವ ಜಿಲ್ಲೆಗಳಿಗೆ?
ರಾಜ್ಯದ ಹಲವು ಭಾಗಗಳಿಗೆ ಮಳೆ ಕೈಕೊಟ್ಟಿದೆ, 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸುತ್ತಿದೆ. ವರುಣ ದೇವ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಮೇಲೆ ಕೃಪೆ ತೋರಿದ್ದು ಉತ್ತಮ ಮಳೆಯಾಗುತ್ತಿದೆ. ವಾರಾಂತ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ 1 ಮತ್ತು 2ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಚದುರಿದಂತೆ ವ್ಯಾಪಕ ಮಳೆ ಸುರಿಯಲಿದೆ ಎಂದು ರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ. ನಂತರ ಒಂದು ವಾರಗಳ ಕಾಲ ಮೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ.

ಉಡುಪಿ ಜಿಲ್ಲೆಗೆ ಮುಂದಿನ 5 ದಿನಗಳ ಭಾರಿ ಮಳೆಯಾಗಲಿದ್ದು ಜುಲೈ 3 ರವರೆಗೆ ಯೆಲ್ಲೋ ಅಲರ್ಟ್ ನೀಡಿದ್ದರೆ, ನಂತರ ಎರಡು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಜನರಿಗೆ ಕೊಂಚ ನೆಮ್ಮದಿ ತಂದಿದೆ.
ಮಲೆನಾಡು ಜಿಲ್ಲೆಗಳಿಗೂ ಭಾರಿ ಮಳೆ
ಇನ್ನು ರಾಜ್ಯದ ಮಲೆನಾಡು ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಶಿರಸಿ, ಸಿದ್ಧಪುರ, ಆಗುಂಬೆ, ಕುದುರೆಮುಖ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನೂ 2 ದಿನ ಈ ಭಾಗದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಹಲವು ಕಡೆ ಉತ್ತಮ ಮಳೆ
ತಡವಾಗಿ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗಲಿದೆ. ರಾಯಚೂರು, ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ, ಯಾದಗಿರಿ, ಧಾರವಾಡ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿಗೆ ಮಳೆ ಕಡಿಮೆ
ದಕ್ಷಿಣ ಒಳನಾಡಿನ ಜಿಲ್ಲೆಗೆ ಮಳೆ ಕೊರತೆ ಮುಂದುವರೆಯಲಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಚಾಮರಾಜನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಬೆಂಗಳೂರಿನಲ್ಲೂ ಸಾಧಾರಣ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಕೂಡ ಮಳೆ ಕಡಿಮೆಯಾಗಿದ್ದು ಶನಿವಾರ ಮತ್ತು ಭಾನುವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಿಬಿಎಂಪಿ ಉತ್ತರ, ಬಿಬಿಎಂಪಿ ದಕ್ಷಿಣ, ಬಿಬಿಎಂಪಿ ಪಶ್ಚಿಮ, ಬಿಬಿಎಂಪಿ ಪೂರ್ವ ವಲಯ, ಮಹದೇವಪುರ, ದಾಸರಹಳ್ಳಿ, ಯಲಹಂಕದಲ್ಲಿ ಅಲ್ಲಲ್ಲಿ ಚದುರಿದಂತೆ ಲಘು ಮಳೆಯಾಗಲಿದೆ. ಬೊಮ್ಮನಹಳ್ಳಿ ಮತ್ತು ರಾಜರಾಜೇಶ್ವರಿ ನಗರ ಲಯಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications