Karnataka Rains: ಮತದಾನಕ್ಕೆ ಅಡ್ಡಿಯಾಗಲಿದೆಯೇ ಮಳೆರಾಯ; ಮೇ 10 ರಿಂದ 12ವರೆಗೂ ಭಾರೀ ಮಳೆ ಮುನ್ಸೂಚನೆ!
ಬೆಂಗಳೂರು, ಮೇ 09: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಒಂದು ಹಂತದಲ್ಲಿ ನಡೆಯಲಿದೆ. ಹವಾಮಾನ ಇಲಾಖೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನ ನೀಡಿದ್ದು, ಮಳೆ ಮುನ್ಸೂಚನೆ ನಡುವೆಯೂ ಚುನಾವಣಾ ಆಯೋಗ ಮೇ 10ರಂದು ನಡೆಯಲಿರುವ ಮತದಾನಕ್ಕೆ ಸಕಲ ಸಿದ್ಧತೆ ನಡೆಸಿದೆ.
ಈಗಾಗಲೇ ಕಳೆದ 10 ದಿನಗಳಿಂದ ರಾಜ್ಯಾದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ 10 ರಿಂದ 12 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನೂ ಪಶ್ಚಿಮ ಬಂಗಾಳಕೊಲ್ಲಿಯ ಮೋಚಾ ಎಂಬ ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಇನ್ನೂ ಐದು ದಿನ ಮಳೆಯ ಪ್ರಮಾಣ ಅಧಿಕವಾಗಲಿದೆ ಎಂದು ಹವಾಮಾನ ವಿಜ್ಞಾನಿ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.
ಇತ್ತ ಮೇ 10 ರಂದು ರಾಜ್ಯದಲ್ಲಿ ಒಂದು ಹಂತದ ಮತದಾನಕ್ಕೆ ವ್ಯಾಪಕ ಮಳೆ ಮುನ್ಸೂಚನೆ ನಡುವೆಯೂ ಚುನಾವಣಾ ಆಯೋಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಶಾಂತಿಯುತ ಚುನಾವಣೆಗೆ ಸಕಲ ರೀತಿಯಲ್ಲೂ ಸಿದ್ದತೆಯನ್ನ ನಡೆಸಿದೆ. ಇನ್ನೂ ಮಳೆಯಿಂದ ವಿದ್ಯುನ್ಮಾನ ಮತಯಂತ್ರಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಿದ್ದೇವೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳಿಗೆ ಪ್ಲಾಸ್ಟಿಕ್ ಕವರ್‌ಗಳಿಂದ ಮುಚ್ಚಿ ಮತಗಟ್ಟೆಗಳಿಗೆ ಸಾಗಿಸಲಿದ್ದೇವೆ. ಅಲ್ಲದೇ ಚುನಾವಣೆಗೆ ಸಕಲ ರೀತಿಯಲ್ಲೂ ಯಾವುದೇ ತೊಂದರೆಯಾದಗಂತೆ ಮುನ್ನೆಚ್ಚರಿಕೆ ಕ್ರಮವನ್ನ ವಹಿಸಿದ್ದೇವೆ ಎಂದು ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.












Click it and Unblock the Notifications