ಎಕ್ಸಿಟ್ ಪೋಲ್ ಹೊರಬರುತ್ತಿದ್ದಂತೆ ಮೋದಿ ಫೋಟೊ ತೆಗೆದುಹಾಕಿದ ಮಾಧ್ಯಮಗಳು- ಸಾಮಾಜಿಕ ತಾಣಗಳಲ್ಲಿ ಟ್ರೋಲ್
ಬೆಂಗಳೂರು, ಮೇ 12: ಮೇ 10 ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಮತದಾನವು ಮುಕ್ತಾಯಗೊಂಡಿತು. ಶೇ 73.19 ಮತದಾರರು ಮತ ಚಲಾಯಿಸಿದ್ದಾರೆ. ಇದಾದ ಬಳಿಕ ಬಂದ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುಂದಿರುವುದು ಕಂಡುಬಂದಿದೆ. ಕೆಲ ಸಮೀಕ್ಷೆಗಳು ಅತಂತ್ರ ಫಲಿತಾಂಶ ಹೊರಬೀಳಬಹುದೆಂದು ಅಭಿಪ್ರಾಯ ಪಟ್ಟಿವೆ. ಇನ್ನು ಕೆಲ ಸಮೀಕ್ಷೆಗಳು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಹೇಳುತ್ತಿದೆ.
ಆರು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮುನ್ನಡೆ
ಇಂಡಿಯಾ 'ಟುಡೇ-ಆಕ್ಸಿಸ್ ಮೈ ಇಂಡಿಯಾ' ಎಕ್ಸಿಟ್ ಪೋಲ್, ಕಾಂಗ್ರೆಸ್ 122-140 ಸ್ಥಾನಗಳನ್ನು ಪಡೆಯುವ ಮೂಲಕ ಸರಳ ಬಹುಮತದ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದಿದೆ. ಬಿಜೆಪಿ 62-80 ಮತ್ತು ಜೆಡಿಎಸ್ 20-25 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

'ಇಂಡಿಯಾ ಟಿವಿ-ಸಿಎನ್‌ಎಕ್ಸ್' ಎಕ್ಸಿಟ್ ಪೋಲ್ ಕೂಡ ಕಾಂಗ್ರೆಸ್ 110-120 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಹೊಂದಲಿದೆ ಎಂದು ಭವಿಷ್ಯ ನುಡಿದಿದೆ. ಬಿಜೆಪಿಗೆ 80-90 ಸ್ಥಾನಗಳು, ಜೆಡಿಎಸ್‌ಗೆ 20-24 ಸ್ಥಾನಗಳು ಬರಲಿವೆ.
'ನ್ಯೂಸ್ 24-ಟುಡೇಸ್ ಚಾಣಕ್ಯ' ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಅದು 120 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ಬಿಜೆಪಿ 92 ಮತ್ತು ಜೆಡಿಎಸ್ ಕೇವಲ 12 ಸ್ಥಾನಗಳನ್ನು ಪಡೆಯಬಹುದು ಎಂದು ಅದು ಹೇಳಿದೆ.
'ಟೈಮ್ಸ್ ನೌ-ಇಟಿಜಿ ರಿಸರ್ಚ್' ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ 85, ಕಾಂಗ್ರೆಸ್‌ಗೆ 113 ಮತ್ತು ಜೆಡಿಎಸ್‌ಗೆ 23 ಸ್ಥಾನಗಳು ಬರಲಿವೆ ಎಂದು ತಿಳಿಸಿವೆ.
'ಝೀ ನ್ಯೂಸ್ ಮ್ಯಾಟ್ರಿಜ್' ಸಮೀಕ್ಷೆಯಲ್ಲಿ ಬಿಜೆಪಿ 79-94, ಕಾಂಗ್ರೆಸ್ 103- 118 ಮತ್ತು ಜೆಡಿಎಸ್ 25 ರಿಂದ 33 ಸ್ಥಾನಗಳು ಬರಬಹುದು ಎಂದು ಹೇಳಿದೆ.

ಟಿವಿ9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್ ಸಮೀಕ್ಷೆಯು, ಬಿಜೆಪಿಗೆ 88 ರಿಂದ 98 ಸ್ಥಾನಗಳು, ಕಾಂಗ್ರೆಸ್‌ಗೆ 99 ರಿಂದ 109 ಮತ್ತು ಜೆಡಿಎಸ್‌ಗೆ 21 ರಿಂದ 26 ಸ್ಥಾನಗಳು ಬರಬಹುದು ಎಂದು ತಿಳಿಸಿವೆ.
ಎರಡು ಸಮೀಕ್ಷೆಗಳಲ್ಲಿ ಬಿಜೆಪಿ ಮುನ್ನಡೆ
'ನ್ಯೂಸ್ ನೇಷನ್-ಸಿಜಿಎಸ್' ಎಕ್ಸಿಟ್ ಪೋಲ್ ಬಿಜೆಪಿ 114 ಸ್ಥಾನಗಳನ್ನು ಗಳಿಸುವ ಮೂಲಕ ಬಹುಮತದ ಗಡಿಯನ್ನು ದಾಟಲಿದೆ ಎಂದು ಹೇಳಿದೆ. ಕಾಂಗ್ರೆಸ್ 86 ಮತ್ತು ಜೆಡಿಎಸ್ 21 ಗೆಲ್ಲುತ್ತದೆ ಎಂದು ಅದು ತಿಳಿಸಿದೆ.
'ಏಷಿಯಾನೆಟ್ ಸುವರ್ಣ-ಜನ್ ಕಿ ಬಾತ್' ಎಕ್ಸಿಟ್ ಪೋಲ್ ಬಿಜೆಪಿಗೆ 94 ರಿಂದ 117 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 91 ರಿಂದ 106 ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿಸಿದೆ. ಜೆಡಿಎಸ್ 14 ರಿಂದ 24 ಸ್ಥಾನಗಳನ್ನು ಹೊಂದಬಹುದು ಎಂದು ಅಂದಾಜಿಸಲಾಗಿದೆ.
ಎರಡು ಸಮೀಕ್ಷೆಗಳಲ್ಲಿ ಅತಂತ್ರ ಫಲಿತಾಂಶ
'ಎಬಿಪಿ ನ್ಯೂಸ್-ಸಿ ವೋಟರ್' ಎಕ್ಸಿಟ್ ಪೋಲ್ ಬಿಜೆಪಿ 83 ರಿಂದ 95 ಸ್ಥಾನಗಳನ್ನು ಗೆಲ್ಲಲಿದೆ, ಕಾಂಗ್ರೆಸ್ 100-112 ಮತ್ತು ಜೆಡಿಎಸ್ 21 ರಿಂದ 29 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.

'ಪಿ-ಮಾರ್ಕ್-ರಿಪಬ್ಲಿಕ್' ಸಮೀಕ್ಷೆಯ ಪ್ರಕಾರ ಬಿಜೆಪಿ 85 ರಿಂದ 100 ಸ್ಥಾನಗಳನ್ನು ಗೆಲ್ಲಲಿದೆ, ಕಾಂಗ್ರೆಸ್ 94 ರಿಂದ 108 ಮತ್ತು ಜೆಡಿಎಸ್ 24 ರಿಂದ 32 ಸ್ಥಾನಗಳನ್ನು ಗೆಲ್ಲುತ್ತದೆ.
ಚುನಾವಣಾ ಸಮೀಕ್ಷೆಯಲ್ಲಿ ಕಾಂಗ್ರೆಸ್ 103 ಸ್ಥಾನಗಳನ್ನು ಮತ್ತು ಬಿಜೆಪಿ 94 ಸ್ಥಾನಗಳನ್ನು ಹೊಂದಿದೆ. ಸುಮಾರು 25 ಶಾಸಕರನ್ನು ಹೊಂದಿರುವ ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗಬಹುದು. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮೋದಿ ಪ್ರಚಾರದ ಹೊರತಾಗಿಯು ಬಿಜೆಪಿ ಪರ ಇಲ್ಲ ಸಮೀಕ್ಷೆ
ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ಮಾಡಿದ್ದರು. ರೋಡ್ ಶೋ, ಸಾರ್ವಜನಿಕ ರ್ಯಾಲಿಗಳಲ್ಲಿ ಮಾತನಾಡಿದ್ದರು. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಬಿಜೆಪಿ ನಾಯಕರು ನಂಬಿದ್ದರು. ಆದರೆ, ಸಮೀಕ್ಷೆಗಳು ಅವರ ನಂಬಿಕೆಯನ್ನು ಉಲ್ಟಾ ಮಾಡಿವೆ. ಇದು ಬಿಜೆಪಿಗೆ ಆಘಾತ ನೀಡಿದೆ ಎಂಬ ಮಾತುಗಳು ಕೇಳಿಬಂದಿವೆ.
ಮೋದಿ ಪೋಟೊ ತೆಗೆದುಹಾಕಿದ ಮಾಧ್ಯಮಗಳು
ಇಷ್ಟು ದಿನ ಪ್ರಧಾನಿ ಮೋದಿ ವರ್ಸ್‌ಸ್ ರಾಹುಲ್ ಗಾಂಧಿ ಫೋಟೋಗಳನ್ನು ಸ್ಕ್ರೀನ್ ಮೇಲೆ ಹಾಕುತ್ತಿದ್ದ ಮಾಧ್ಯಮಗಳು ಈಗ ಮೋದಿ ಬದಲಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಫೋಟೋವನ್ನು ಹಾಕಿವೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ. ಮಾಧ್ಯಮಗಳು ಇಬ್ಬುಗೆ ನೀತಿಯನ್ನು ಅನುಸರಿಸುತ್ತಿವೆ ಎಂದು ಕೆಲ ಟ್ವೀಟಿಗರು ಟ್ರೋಲ್ ಮಾಡಿದ್ದಾರೆ.












Click it and Unblock the Notifications