Amit Shah Karnataka: ಏ.21, 22ರಂದು ರಾಜ್ಯಕ್ಕೆ ಚುನಾವಣಾ ಚಾಣಕ್ಯನ ಆಗಮನ; ಈ ನಗರಗಳಲ್ಲಿ ರೋಡ್ ಶೋ
ಕರ್ನಾಟಕ, ಏಪ್ರಿಲ್ 19: ಕರ್ನಾಟಕದಲ್ಲಿ ಕಡು ಬಿಸಿಲಿನ ಜೊತೆ 2023ರ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಇತರೆ ಪಕ್ಷಗಳ ಹಲವು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಕೆಗೆ ನಾಳೆ (ಏಪ್ರಿಲ್ 20) ಕೊನೆಯ ದಿನವಾಗಿದೆ.
ವಿಧಾನಸಭೆ ಚುನಾವಣೆಗಾಗಿ ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಗಲಿದೆ. ಇದೇ ವೇಳೆ ಕೇಂದ್ರ ಗೃಹ ಸಚಿವ ಹಾಗೂ ಚುನಾವಣಾ ಚಾಣಕ್ಯ ಎಂದೇ ಬಿಂಬಿತವಾಗಿರುವ ಅಮಿತ್ ಶಾ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಇದೇ ಏಪ್ರಿಲ್ 21 ಮತ್ತು 22ರಂದು ದಾವಣಗೆರೆ ಮತ್ತು ದೇವನಹಳ್ಳಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಸ್ವಂತ ಬಲದಿಂದ ಸರ್ಕಾರ ರಚಿಸಲು ಪಣತೊಟ್ಟಿರುವ ಬಿಜೆಪಿ ಹೈಕಮಾಂಡ್, ಟಿಕೆಟ್ ನೀಡುವಿಕೆಯಲ್ಲಿ ಗುಜರಾತ್ ಮತ್ತು ಉತ್ತರಪ್ರದೇಶ ನೀತಿ ಅನುಸರಿಸಿದೆ. ಕುಟುಂಬ ರಾಜಕಾರಣಕ್ಕೆ ಬ್ರೇಕ್, ಹೊಸ ಮುಖಗಳಿಗೆ ಮಣೆ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ.

ಗುರುವಾರ (ಏಪ್ರಿಲ್ 20) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಗೆಲುವಿಗಾಗಿ ರಾಜಕೀಯ ಪಕ್ಷಗಳು ಪ್ರಚಾರ ಮತ್ತು ಕಾರ್ಯತಂತ್ರ ರೂಪಿಸಸಲಿವೆ. ಎರಡು ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ, ಮಧ್ಯ ಕರ್ನಾಟಕದ ಕೆಲವು ಮಠಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ರಾಜ್ಯ ನಾಯಕರೊಂದಿಗೆ ಸೇರಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಂತ್ರ ರೂಪಿಸಲಿದ್ದಾರೆ.
ಇನ್ನು ಅಮಿತ್ ಶಾ ಭೇಟಿ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮಕಲಿದ್ದಾರೆ. ಏಪ್ರಿಲ್ 25ರ ಬಳಿಕ 25 ರಿಂದ 30 ರೋಡ್ ಶೋ, ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.
ಕರ್ನಾಟಕ ವಿಧಾನಸಭೆ ದಿನಾಂಕ ಘೋಷಣೆಗೂ ಮುನ್ನ 7 ಬಾರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಇದೀಗ ಪ್ರದೇಶಗಳನ್ನು ಬಿಟ್ಟು ರಾಜ್ಯದ ಉಳಿದ ಕಡೆ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಲ್ಲಿ ಬಿಜೆಪಿ ಸಂಘಟನೆ ಕಡಿಮೆ ಇರುವ ಮತ್ತು ಬಿಜೆಪಿ ಬಂಡಾಯ ನಾಯಕರ ಕ್ಷೇತ್ರಗಳು ಸೇರಿವೆ ಎನ್ನಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಹುಬ್ಬಳ್ಳಿ-ಧಾರವಾಡ ಪ್ರದೇಶಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಪ್ರಚಾರ ಮಾಡಲಿದ್ದಾರೆ. ಕೆಲವೇ ದಿನಗಳಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ವೇಳಾಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗುತ್ತದೆ.

ಬಿಜೆಪಿ ಸ್ಟಾರ್ ಪ್ರಚಾರಕರು (ಕೇಂದ್ರ ನಾಯಕರು)
ಬಿಜೆಪಿಯು ಚುನಾವಣಾ ಆಯೋಗಕ್ಕೆ ನೀಡಿರುವ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿತೀನ್ ಗಡ್ಕರಿ, ಧರ್ಮೇಂದ್ರ ಪ್ರಧಾನ್, ಯೋಗಿ ಆದಿತ್ಯನಾಥ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಮನ್ಸುಖ್ ಮಾಂಡವೀಯ, ಕೆ ಅಣ್ಣಾಮಲೈ, ಅರುಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಹೀಮಂತ್ ಬಿಸ್ವಾ ಶರ್ಮಾ, ದೇವೇಂದ್ರ ಫಡ್ನವೀಸ್, ಅರುಣ್ ಸಿಂಗ್ ಅವರಿದ್ದಾರೆ.
ಬಿಜೆಪಿ ಸ್ಟಾರ್ ಪ್ರಚಾರಕರು (ರಾಜ್ಯ ನಾಯಕರು)
ರಾಜ್ಯ ಬಿಜೆಪಿ ಪ್ರಮುಖ ನಾಯಕರಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಪ್ರಲ್ಹಾದ್ ಜೋಷಿ, ಸದಾನಂದ ಗೌಡ, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಆರ್. ಅಶೋಕ್, ಡಿಕೆ ಅರುಣಾ, ಸಿ.ಟಿ. ರವಿ, ಪ್ರಭಾಕರ್ ಕೋರೆ, ಶೋಭಾ ಕರಂದ್ಲಾಜೆ, ಎ ನಾರಾಯಣಸ್ವಾಮಿ, ಭಗವಂತ್ ಖೂಬಾ, ಅರವಿಂದ್ ಲಿಂಬಾವಳಿ, ಬಿ. ಶ್ರೀರಾಮುಲು, ಕೋಟಾ ಶ್ರೀನಿವಾಸ್ ಪೂಜಾರಿ, ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಜಾಧವ್, ಛಲವಾದಿ ನಾರಾಯಣಸ್ವಾಮಿ, ಎನ್ ರವಿಕುಮಾರ್, ಜಿ.ವಿ. ರಾಜೇಶ್, ಜಗ್ಗೇಶ್, ಶೃತಿ, ತಾರಾ ಅನುರಾಧ ಅವರು ಸ್ಟಾರ್ ಪ್ರಚಾರಕರಾಗಿ ಭಾಗವಹಿಸಲಿದ್ದಾರೆ.












Click it and Unblock the Notifications