ಆಗಸ್ಟ್ 05: ಬಿಜೆಪಿ ಸೇರಿದ ಬಿಎಸ್‌ಪಿ ಉಚ್ಚಾಟಿತ ಶಾಸಕ ಸೇರಿದಂತೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ವರದಿ!
ಬೆಂಗಳೂರು, ಆ. 05: ಬಿಎಸ್‌ಪಿ ಬಿಟ್ಟು ಬಿಜೆಪಿ ಸೇರಿದ ಕೊಳ್ಳೇಗಾಲದ ಶಾಸಕ ಎನ್. ಮಹೇಶ್, ಇಬ್ಬರು ಮಾಜಿ ಸಚಿವರ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ, ಈ ದಾಳಿಯ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪ, ಮೇಕೆದಾಟು ಯೋಜನೆಗೆ ಮಾಜಿ ಐಪಿಎಸ್ ಅಧಿಕಾರಿಯ ವಿರೋಧ, ಆ ವಿರೋಧ ಖಂಡಿಸಿ ರಾಜ್ಯ ನಾಯಕರ ತಿರುಗೇಟು ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳು ಕರ್ನಾಟಕದ ರಾಜಕಾರಣಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದಿವೆ.
ಚಾಮರಾಜನಗರ ಕೊಳ್ಳೆಗಾಲ ಕ್ಷೇತ್ರದ ಬಿಎಸ್‌ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಕೊನೆಗೂ ಬಿಜೆಪಿ ಸೇರಿದ್ದಾರೆ. ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್. ಮಹೇಶ್ ಬಿಜೆಪಿ ಸೇರಿದರು. ಅವರನ್ನು ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರುಗಳು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಂಡರು.
ಜೊತೆಗೆ ಇಬ್ಬರು ಮಾಜಿ ಸಚಿವರ ಮನೆಗಳ ಮೇಲೆ ಜಾರಿ ನಿರ್ದೇಶನಾಯಲದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮಾಡಿದರು. ಈ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದರು. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಸಮಗ್ರ ಮಾಹಿತಿ ಮುಂದಿದೆ! ಮೊದಲಿಗೆ ಓದೋಣ 'ಇಡಿ ದಾಳಿ' ಸುದ್ದಿಯನ್ನು!

ಜಮೀರ್ ಅಹ್ಮದ್ ಆಸ್ತಿಗಳ ಮೇಲೆ ಇಡಿ ದಾಳಿ
ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ರೋಷನ್ ಬೇಗ್ ಅವರ ನಿವಾಸಗಳ ಮೇಲೆ 'ಇಡಿಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದರು. ಮೊದಲಿಗೆ ಅದನ್ನು ಐಟಿ ಇಲಾಖೆ ದಾಳಿ ಎಂದು ತಿಳಿಯಲಾಗಿತ್ತು ಅದಾದ ಬಳಿಕ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮಾಡಿದ್ದಾರೆ ಎಂದು ತಿಳಿದು ಬಂದಿತು.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಗ್ಗೆಯೆ ಶಾಕ್ ಕೊಟ್ಟರು. ಗುರುವಾರ ಬೆಳಗ್ಗೆ 6 ಗಂಟೆ ವೇಳೆಗೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ರಾಜಕೀಯದ ಜೊತೆಗೆ ಟ್ರಾವೆಲ್ಸ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ನಿವಾಸ, ಕಚೇರಿ, ಫ್ಲ್ಯಾಟ್ ಸೇರಿದಂತೆ ಏಕಕಾಲಕ್ಕೆ 6 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದರು.
ಐಎಂಎ ಹಗರಣದ ಆರೋಪಿ ಮನ್ಸೂರ್ ಅಲಿ ಖಾನ್ ವಿಚಾರಣೆ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಹೆಸರು ಹೇಳಿದ್ದರಿಂದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರು ಎಂದು ತಿಳಿದು ಬಂತು.

ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೂ ಇಡಿ ದಾಳಿ
ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಆಸ್ತಿಗಳ ಮೇಲೆ ಇಡಿ ದಾಳಿ ನಡೆದ ವೇಳೆಯಲ್ಲಿಯೇ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಬೇಲ್ ಮೇಲೆ ಬಿಡುಗಡೆ ಆಗಿರುವ ಬೇಗ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಐಎಂಎ ಸಕ್ಷಮ ಪ್ರಾಧಿಕಾರ ಸರ್ಕಾರಕ್ಕೆ ಅನುಮತಿ ಕೋರಿತ್ತು. ಅದರ ಬೆನ್ನಲ್ಲಿ ಇವತ್ತು ಇಡಿ ದಾಳಿ ನಡೆದಿದೆ.
ಐಎಂಎ ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್‌ರನ್ನು ಸಿಬಿಐ ಬಂಧಿಸಿ ಬಿಡುಗಡೆ ಮಾಡಿದೆ. ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ನಿಂದ ನಾನೂರು ಕೋಟಿ ರೂಪಾಯಿ ಪಡೆದ ಆರೋಪ ರೋಷನ್ ಬೇಗ್ ಮೇಲೆ ಬಂದಿದೆ. ಜೊತೆಗೆ ಮಾಜಿ ಸಚಿವ ಬೇಗ್ ಜೊತೆಗೆ ಆಗಿದ್ದ ಮಾತುಕತೆ ವಿವರಗಳನ್ನು ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಪೊಲೀಸರಿಗೆ ಕೊಟ್ಟದ್ದರು ಎಂಬ ಮಾಹಿತಿಯಿದೆ. ಜೊತೆಗೆ ಬಹುಕೋಟಿ ಹಗರಣ ಆಗಿರುವುದಿಂದ ಸಿಬಿಐ ತನಿಖೆಯ ಬಳಿಕ ಇಡಿ ಇಲಾಖೆಗೆ ಪ್ರಕರಣ ವರ್ಗಾವಣೆಯಾಗಿದ್ದು, ಮುಂದುವರೆದ ಭಾಗವಾಗಿ ಇಡಿ ಇಲಾಖೆ ದಾಳಿ ಮಾಡಿ ತನಿಖೆ ನಡೆಸಿದೆ ಎಂದು ತಿಳಿದು ಬಂದಿದೆ.

ಇಡಿ ದಾಳಿ ಕುರಿತು ರಾಜಕೀಯ ನಾಯಕರ ಪ್ರತಿಕ್ರಿಯೆ
ಈ ಇಬ್ಬರೂ ನಾಯಕರ ಮೇಲೆ ಇಡಿ ಇಲಾಖೆ ನಡೆಸಿರುವ ದಾಳಿಯನ್ನು ಬಿಜೆಪಿ ನಾಯಕರು ಕಾನೂನು ಕ್ರಮ ಎಂದಿದ್ದರೆ, ಕಾಂಗ್ರೆಸ್ ನಾಯಕರು ದಾಳಿಯನ್ನು ಖಂಡಿಸಿದ್ದಾರೆ. ಇನ್ನು ಎರಡೂ ಪಕ್ಷಗಳಿಗೆ ಸೇರಿರದ ಮಾಜಿ ಸಚಿವ ರೋಷನ್ ಬೇಗ್ ಪ್ರತಿಕ್ರಿಯೆಗೆ ಸಿಕ್ಕಿಲ್ಲ.
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರ ಮೇಲಿನ ಇಡಿ ದಾಳಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇ.ಡಿ. ಅಧಿಕಾರಿಗಳು ಜಮೀರ್ ಅವರಿಗೆ ನೋಟೀಸ್ ಜಾರಿ ಮಾಡಿ, ಅವರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಈಗಿನ ಸಂದರ್ಭದಲ್ಲಿ ದಾಳಿ ಅಗತ್ಯ ಇರಲಿಲ್ಲ. ಯಾವ ರೀತಿ ಈ ಕಿರುಕುಳ ನೀಡಲಾಗುತ್ತದೆ ಎಂಬುದು ನನಗೂ ಗೊತ್ತಿದೆ. ಜೊತೆಗೆ ಮಾಜಿ ಸಚಿವ ರೋಷನ್ ಬೇಗ್ ಏಳು ಬಾರಿ ಶಾಸಕರಾಗಿದ್ದವರು ಏನಾಗಿದ್ದಾರೆ ಎಂಬ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ನಿರ್ದಿಷ್ಟ ವರ್ಗಕ್ಕೆ ತೊಂದರೆ ನೀಡಲು ಈ ರೀತಿ ದಾಳಿಗಳು ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ದೆಹಲಿಯಲ್ಲಿ ಡಿಕೆಶಿ ಆರೋಪಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಜಮೀರ್ ಅಹಮದ್ ಅವರ ಮನೆಯ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಐಟಿ, ಇಡಿ ಬಳಸಿಕೊಂಡು ಕಿರುಕುಳ ನೀಡುವ ಬಿಜೆಪಿಯ ವರ್ತನೆ ಖಂಡನೀಯ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಿಜೆಪಿ ಪಾಳೆಯ ಸೇರಿದ ಕೊಳ್ಳೆಗಾಲ ಶಾಸಕ ಎನ್. ಮಹೇಶ್!
ಇನ್ನು ನಿರೀಕ್ಷೆಯಂತೆ ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಅವರು ಬಿಜೆಪಿ ಸೇರಿರುವುದು ಇಂದಿನ ಮತ್ತೊಂದು ಪ್ರಮುಖ ರಾಜಕೀಯ ಬೆಳವಣಿಗೆ. ಒಂದಕ್ಕೊಂದು ಹೊಂದಾಣಿಕೆಯಾದ ರಾಜಕೀಯ ಸಿದ್ದಾಂತ ಹೊಂದಿರುವ ಪಕ್ಷಗಳ ಮಧ್ಯೆ ನಡೆದ ರಾಜಕೀಯ ಸಂಘರ್ಷದ ಫಲಿತಾಂಶದಂತೆ ಈ ಸೇರ್ಪಡೆ ಕಂಡು ಬಂದಿದೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎನ್ ಮಹೇಶ್ ಅವರನ್ನು ಬಿಜೆಪಿ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. ಶಾಸಕ ಮಹೇಶ್ ಗುರುವಾರ ಬಿಜೆಪಿ ಸೇರುವುದು ಮೊದಲೇ ನಿರ್ಧಾರವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಮಹೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಶಾಸಕ ಎನ್ ಮಹೇಶ್ ಅವರನ್ನು ಬಿಜೆಪಿಗೆ ಬರ ಮಾಡಿಕೊಂಡು ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ನಾಡಿನ ಉದ್ದಗಲದಲ್ಲಿ ಪರಿಶಿಷ್ಟರು ಇದ್ದಾರೆ. ಶಾಸಕ ಮಹೇಶ್ ಸೇರ್ಪಡೆಯಿಂದ ಎಲ್ಲರೂ ಪಕ್ಷದತ್ತ ವಾಲುತ್ತಾರೆ. ಪರಿಶಿಷ್ಠರನ್ನು ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು. ಪಕ್ಷ ದಲಿತರ ಹಿಂದೆ ಇದೆ ಎಂಬ ಸಂದೇಶ ಹೋಗಬೇಕು. ಈ ವೇದಿಕೆಯಲ್ಲಿ ಎಲ್ಲರೂ ಗಣ್ಯರೇ ಇದ್ದಾರೆ. ಮಹೇಶ್ ಅವರೆಲ್ಲರ ಪ್ರೀತಿ ಗಳಿಸಿದ್ದಾರೆ. ದಲಿತ ನಾಯಕ ಸೇರಿದ್ದಾನೆಂಬುದು ಬೊಮ್ಮಾಯಿಗೆ ಗೊತ್ತಿದೆ. ಅವರು ಇದನ್ನು ಗಮನದಲ್ಲಿಟ್ಟು ಕೊಳ್ಳುತ್ತಾರೆ. ಮಹೇಶ್ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ. ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ ಎಂದು ಹೇಳಿದರು.

ಮಹೇಶ್‌ಗೆ ಸಚಿವ ಸ್ಥಾನದ ಭರವಸೆ ಸಿಕ್ಕಿದೆಯಾ?
ಬಿಜೆಪಿ ಸೇರಿದ ಪರಿಶಿಷ್ಟ ಜಾತಿಗೆ ಸೇರಿರುವ ಎನ್. ಮಹೇಶ್ ಅವರಿಗೆ ಸಚಿವಸ್ಥಾನದ ಭರವಸೆ ಸಿಕ್ಕಿದೆ ಎಂಬ ಮಾಹಿತಿಯಿದೆ. ಜೊತೆಗೆ ಮಹೇಶ್ ಪಕ್ಷಕ್ಕೆ ಸೇರಿದ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಮಹೇಶ್ ಪಕ್ಷಕ್ಕೆ ಸೇರ್ಪಡೆಯಾವ ಮೂಲಕ ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೇರೆ ಬೇರೆ ಪಾರ್ಟಿಯಿಂದ ನಾಯಕರು ಬರುತ್ತಿದ್ದಾರೆ. ಪ್ರಧಾನಿ ಮೋದಿ, ಯಡಿಯಹೂರಪ್ಪ ಅವರ ಅಭಿವೃದ್ಧಿ ಪಥ ಇಲ್ಲಿಗೆ ತಂದಿದೆ. ದೆಹಲಿಯಲ್ಲಿ ಶಾಸಕ ಮಹೇಶ್ ಭೇಟಿ ಮಾಡಿದ್ದರು. ನನ್ನ ಜೊತೆ ಪಕ್ಷದ ಬಗ್ಗೆ ಮಾತನಾಡಿದ್ದರು. ತತ್ವ, ಸಿದ್ಧಾಂತಗಳನ್ನು ಒಪ್ಪಿದ್ದರು. ಅವರ ಸೇರ್ಪಡೆ ಪಕ್ಷಕ್ಕೆ ಬಲ ತುಂಬಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎನ್. ಮಹೇಶ್, "ನಾನು ಬಿಜೆಪಿಯನ್ನು ಸೇರುತ್ತಿದ್ದೇನೆ. ಹಾಗೆ ಮಾಡಲು ಅಭಿವೃದ್ಧಿಯೆ ಕಾರಣ. ದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸೇರುತ್ತಿದ್ದೇನೆ. ಇದಕ್ಕೆ ಮತ್ತೊಂದು ಪ್ರೇರಕ ಶಕ್ತಿ ಡಾ. ಅಂಬೇಡ್ಕರ್. ಏಳು ಬೀಳುಗಳನ್ನು ಕಂಡು ರಾಷ್ಟ್ರವನ್ನು ಬಿಜೆಪಿ ಅಭಿವೃದ್ಧಿ ಕೊಂಡೊಯ್ಯುತ್ತಿದೆ. ನನಗೆ ಆತ್ಮಸ್ಥೈರ್ಯ ತುಂಬಿದವರು ಮಾಜಿ ಸಿಎಂ ಯಡಿಯೂರಪ್ಪ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 12 ವರ್ಷಗಳಿಂದ ಪರಿಚಯದವರು. ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರನ್ನ ದೆಹಲಿಯಲ್ಲಿ ಭೇಟಿ ಮಾಡಿದ್ದೆ. ಮೈಸೂರಲ್ಲಿ ವಿಜಯಣ್ಣ ಪಕ್ಷ ಸಂಘಟಿಸ್ತಿದ್ದಾರೆ. ಅವರು ನನಗೆ ಮತ್ತೊಂದು ಶಕ್ತಿ. ಹೀಗಾಗಿ ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಕಾರಣ ನೀಡಿದರು.
Recommended Video

ಮೇಕೆದಾಟು ಕುರಿತು ಅಣ್ಣಾಮಲೈ ಧರಣಿ ಕಂಡಿಸಿದ ನಾಯಕರು
ಇನ್ನು ಮೇಕೆದಾಟು ಯೋಜನೆ ಖಂಡಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ಮಾಡುತ್ತಿರುವ ಅಲ್ಲಿನ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಡೆಯನ್ನು ರಾಜಗ್ಯ ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಏಕವಚನದಲ್ಲಿಯೆ ವಾಗ್ದಾಳಿ ನಡೆಸಿದರು.
"ಅವನನ್ನು ದೊಡ್ಡ ಮುನಷ್ಯನನ್ನಾಗಿ ಮಾಡೋ ಅವಶ್ಯಕತೆಯಿಲ್ಲ. ಇದಕ್ಕೆ ರಾಜಕೀಯ ಪ್ರೇರಿತ ಮಾಡೋದು ಬೇಡ, ಹೆಚ್ಚುವರಿ ನೀರು ತಡೆದು ನೀರು ಕೊಡಬೇಕು. ಅದಕ್ಕೆ ಈ ಯೋಜನೆ ತಂದಿರುವುದು. ಪ್ರತಿಭಟನೆ ಮಾಡ್ತಾರೆ ಅಂದ್ರೆ ಅದು ರಾಜಕೀಯ ಪ್ರೇರಿತ. ಅಣ್ಣಾ ಮಲೈ ಪ್ರತಿಭಟನೆಗೆ ಐ ಡೋಂಟ್ ಕೇರ್. ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ. ಅವನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಬೇಡಿ. ಎರಡು ರಾಜ್ಯಗಳ ಸಂಬಂಧದ ವಿಚಾರವಿದು. ಯೋಜನೆಯನ್ನು ಮಾಡ್ತೇವೆ" ಎಂದು ತಮ್ಮ ಪಕ್ಷದ ರಾಜ್ಯವೊಂದರ ಅಧ್ಯಕ್ಷನ ಮೇಲೆ ಸಿಎಂ ಬೊಮ್ಮಾಯಿ ಹರಿಹಾಯ್ದರು.
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಧರಣಿ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. "ಬಿ.ಎಸ್. ಯಡಿಯೂರಪ್ಪ ಆ ಬಗ್ಗೆ ಸ್ಪಷ್ಟವಾಗಿ ಹಿಂದೆಯೇ, ಈ ಯೋಜನೆ ರಾಜ್ಯದ ಜನರ ಹಕ್ಕು ಎಂದು ಹೇಳಿದ್ದಾರೆ. ಯಾರೇ ಉಪವಾಸ ಸತ್ಯಾಗ್ರಹ ಮಾಡಲಿ, ನಾವು ಯೋಜನೆಯನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಣ್ಣಾಮಲೈ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೊ ಗೊತ್ತಿಲ್ಲ. ಯೋಜನೆ ಜಾರಿಗೆ ಯಾವುದೇ ಅಡೆ ತಡೆ ಇಲ್ಲ. ಈ ಯೋಜನೆಯನ್ನು ನಮ್ಮ ಸರ್ಕಾರ ಮಾಡಿಯೇ ತೀರುತ್ತದೆ" ಎಂದು ಬಿ.ವೈ. ವಿಜಯೇಂದ್ರ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ತಿರುಗೇಟು ಕೊಟ್ಟಿದ್ದಾರೆ.
ಮೇಕೆದಾಟು ಯೋಜನೆಗೆ ಅಣ್ಣಾಮಲೈ ಧರಣಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ವಿ. ಸೋಮಣ್ಣ ಕೂಡ ತಿವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಅಣ್ಣಾಮಲೈ ಅರ್ಥ ಮಾಡಿಕೊಳ್ಳಬೇಕಿದೆ. ಐಪಿಎಸ್ ಆಗುತ್ತಿದ್ದಂತೆಯೆ ನಾವೇ ದೊಡ್ಡವರು ಅಂದು ಕೊಳ್ಳುವುದು ಬೇಡ. ಅವರು ನಮ್ಮ ಪಕ್ಷದ ತಮಿಳುನಾಡಿನ ಅಧ್ಯಕ್ಷರಾಗಿದ್ದಾರೆ. ಆದರೆ ಮೇಕೆದಾಟು ನಮ್ಮ ರಾಜ್ಯದ ಭಾಗದಲ್ಲಿ ಆಗಲಿದೆ. ಆ ರಾಜ್ಯದ ಬೇಡಿಕೆ ನಾವು ಪಾಲಿಸುತ್ತಿದ್ದೇವೆ. ನಮ್ಮ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನೆ ಬೇಕಿದೆ.
ಇದು ಆ ರಾಜ್ಯದವರಿಗೂ ಅರ್ಥವಾಗಿದೆ. ಒಂದು ರಾಜ್ಯ, ಮತ್ತೊಂದು ರಾಜ್ಯದ ಜೊತೆ ಉತ್ತಮ ಬಾಂಧವ್ಯ ಹೊಂದಿರ ಬೇಕು. ಜೊತೆಗೆ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈಗಾಲೇ ಹೇಳಿದ್ದಾರೆ. ಹೀಗಾಗಿ ಅವರ ಪ್ರತಿಭಟನೆಗೆ ಮನ್ನಣೆ ಕೊಡುವುದು ಬೇಡ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.












Click it and Unblock the Notifications