• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗಸ್ಟ್‌ 04: ರಾಜ್ಯ ಸಂಪುಟ ವಿಸ್ತರಣೆ ಸೇರಿದಂತೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಸಮಗ್ರ ವರದಿ!

|
Google Oneindia Kannada News

ಬೆಂಗಳೂರು, ಆ. 04: ಸಚಿವ ಸಂಪುಟ ವಿಸ್ತರಣೆ ಸುತ್ತಲೂ ಇಂದಿನ ರಾಜ್ಯ ರಾಜಕೀಯ ಬೆಳವಣಿಗೆಗಳು ನಡೆದಿವೆ. ಯಾರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬುದನ್ನು ಗೌಪ್ಯವಾಗಿಡಲಾಗಿತ್ತು. ದೇಹಲಿಯಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಲ್ಲಿಂದಲೇ ಪ್ರಮಾಣ ವಚನ ಸ್ವೀಕಾರ ಮಾಡಲಿರುವವರಿಗೆ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದರು.

ಆಗ ಒಬ್ಬೊಬ್ಬರಾಗಿ ಎಲ್ಲರಿಗೂ ದೂರವಾಣಿ ಕರೆಯ ಮೂಲಕ ಸಿಎಂ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಲು ಬರುವಂತೆ ಆಹ್ವಾನಿಸಿದ್ದರು. ಅಚ್ಚರಿಯ ಆಯ್ಕೆ ಎಂಬಂತೆ ಹಲವರಿಗೆ ದೂರವಾಣಿ ಕರೆ ಹೋಗಿದ್ದವು. ಇನ್ನೇನು ಸಂಪುಟ ಸೇರುತ್ತೇವೆ ಎಂದು ಕೊಂಡವರಿಗೆ ನಿರಾಸೆ ಕಾದಿತ್ತು. ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಜೋರಾಗಿ ಓಡಾಡಿ ಸಿಎಂ ಆಗುತ್ತೇವೆ ಎಂದುಕೊಂಡವರಿಗೆ ಕನಿಷ್ಠ ಮಂತ್ರಿಸ್ಥಾನವನ್ನೂ ಕೂಡದೆ ಅಚ್ಚರಿಯ ನಡೆಯನ್ನು ಬಿಜೆಪಿ ಹೈಕಮಾಂಡ್ ತೋರಿಸಿದ್ದು ಕೂಡ ಇಂದಿನ ವಿಶೇಷ.

ಅದರೊಂದಿಗೆ ಮಂತ್ರಿಸ್ಥಾನ ಸಿಗದ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದು, ಶಾಸಕರ ಬೆಂಬಲಿಗರು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪ್ರತಿಭಟನೆಯನ್ನೂ ಮಾಡಿದರು. ಬಿಜೆಪಿಯಲ್ಲಿನ ಹಿರಿಯರಿಗೆ ಮಂತ್ರಿ ಸ್ಥಾನ ನಿರಾಕರಿಸಿ, ಬೇರೆ ಪಕ್ಷಗಳಿಂದ ಬಂದಿದ್ದ ಕೆಲವರಿಗೂ ಮಂತ್ರಿ ಹುದ್ದೆಯನ್ನು ಹೈಕಮಾಂಡ್ ನಿರಾಕರಿಸಿದೆ. ಶಶಿಕಲಾ ಜೊಲ್ಲೆ ಅವರಿಗೆ ಮಂತ್ರಿಸ್ಥಾನದ ಭರವಸೆ ಇಲ್ಲದ್ದರಿಂದ ದೆಹಲಿಯಲ್ಲಿಯೇ ಕೊನೆಯ ಕ್ಷಣದವರೆಗೂ ಇದ್ದರು. ಹೀಗಾಗಿ ಸಿಎಂ ಬೊಮ್ಮಾಯಿ ಅವರು ದೂರವಾಣಿ ಕರೆ ಮಾಡಿದ ನಂತರ ದೆಹಲಿಯಿಂದ ಹೊರಟಿದ್ದ ಅವರು ಪ್ರಮಾಣ ವಚನ ಕಾರ್ಯಕ್ರಮ ಆರಂಭವಾದ ಬಳಿಕ ರಾಜಭನವಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಜೊತೆಗೆ ಇನ್ನೂ ಹಲವು ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ನಡೆದಿವೆ. ಇಂದಿನ ಬೆಳವಣಿಗೆಗಳು ಬಿಜೆಪಿ ಹಾಗೂ ರಾಜ್ಯ ಸರ್ಕಾರದಲ್ಲಿ ಹೆಚ್ಚಾಗಿ ನಡೆದಿದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಪ್ರಮುಖವಾದ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

ದೆಹಲಿಯಿಂದ ನೇರವಾಗಿ ವಿಧಾನಸೌಧಕ್ಕೆ ಬಂದ ಸಿಎಂ ಬೊಮ್ಮಾಯಿ

ದೆಹಲಿಯಿಂದ ನೇರವಾಗಿ ವಿಧಾನಸೌಧಕ್ಕೆ ಬಂದ ಸಿಎಂ ಬೊಮ್ಮಾಯಿ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಕೊಟ್ಟಿದ್ದರಿಂದ, ಮಂತ್ರಿ ಮಂಡಲ ಸೇರುವವರ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ 9 ಗಂಟೆ ಹೊತ್ತಿಗೆ ವಿಧಾನಸೌಧ ತಲುಪಿದ್ದರು.ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಸಿಎಂ, ನೇರವಾಗಿ ವಿಧಾನಸೌಧಕ್ಕೆ ಬಂದಿದ್ದರು. ಅವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಕೂಡ ಬೆಂಗಳೂರಿಗೆ ಆಗಮಿಸಿದ್ದು ವಿಶೇಷವಾಗಿತ್ತು.

ನಂತರ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಪ್ರಮಾಣ ವಚನ ಸ್ವೀಕರಿಸುವವರಿಗೆ ಸಿಎಂ ಬೊಮ್ಮಾಯಿ ದೂರವಾಣಿ ಕರೆಯನ್ನು ಮಾಡಿದರು. ಮಧ್ಯಾಹ್ನ 02.15ಕ್ಕೆ ಸಚಿವ ಸಂಪುಟ ವಿಸ್ತರಣೆಗೆ ಕಾಲ ನಿಗದಿಯಾಗಿದ್ದು, ಬರಬೇಕು ಎಂದು ಶಾಸಕರಿಗೆ ಸೂಚನೆ ನೀಡಿದರು. ಆಗಲೇ ಒಬ್ಬೊಬ್ಬರಾಗಿ ಪ್ರಮಾಣ ವಚನ ಸ್ವೀಕರಿಸಲು ಶಾಸಕರು ಸಿದ್ಧರಾಗಿ ವಿಧಾನಸೌಧಕ್ಕೆ ಬಂದರು. ಆಗ ಎರಡನೇ ಹಂತದ ಭಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾದವು.

ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ

ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ

ಇನ್ನು ಮಂತ್ರಿಗಳಾಗುವವರನ್ನು ಸಿಎಂ ಬೊಮ್ಮಾಯಿ ದೂರವಾಣಿ ಕರೆ ಮಾಡಿ ಆಹ್ವಾನಿಸುತ್ತಿದ್ದಂತೆಯೆ ಮಂತ್ರಿಸ್ಥಾನ ಸಿಗದವರಿಂದ ಅಸಮಾಧಾನ ಸ್ಫೋಟವಾಯ್ತು. ಮಂತ್ರಿಯಾಗದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಎಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಅವರು ಹೇಳಿಕೆ ನೀಡಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿದ್ದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ‌ ನೀಡುವುದು ಖಚಿತ ಎಂದಿದ್ದರು.

ಜೊತೆಗೆ, "ಬಿಬಿಎಂಪಿ ಚುನಾವಣೆ ನೆಪವೊಡ್ಡಿ ಬೆಂಗಳೂರಿಗೆ ಸಂಪುಟವನ್ನು ಸೀಮಿತಗೊಳಿಸಿದ್ದಾರೆ. ಮಂತ್ರಿ ಸ್ಥಾನದ ಬಗ್ಗೆ ಈ ಹಿಂದೆಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಮಂತ್ರಿ ಆಗದಿದ್ದರೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಕ್ಷ ನಿಷ್ಠನಾಗಿ ದಶಕಗಳ ಕಾಲ ಕೆಲಸ ಮಾಡಿದ್ದೇನೆ. ಮುಂದೆಯೂ ನಾನು ಪಕ್ಷ ನಿಷ್ಠನಾಗಿ ಕೆಲಸ ಮಾಡಿಕೊಂಡು ಇರುತ್ತೇನೆ" ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್ ಮಾಮನಿ ಸ್ಪಷ್ಟವಾಗಿ ಹೇಳಿದ್ದರು.

ಹೀಗಾಗಿ ಮತ್ತೆ ಬೆಳಗಾವಿ ಜಿಲ್ಲೆಯಿಂದಲೇ ಸರ್ಕಾರಕ್ಕೆ ಆತಂಕ ಶುರುವಾಗುತ್ತದೆಯಾ? ಎಂಬ ಸಂದೇಹ ಶುರುವಾಗಿತ್ತು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಬೆಳಗಾವಿ ರಾಜಕೀಯ ಕಾರಣವಾಗಿದ್ದು ಅದಕ್ಕೆ ಕಾರಣವಾಗಿತ್ತು. ಆದರೆ ವಿಧಾನಸಭೆ ಉಪ ಸಭಾಪತಿ ಆನಂದ್ ಮಾಮನಿ ಅವರನ್ನು ಬಿಜೆಪಿ ನಾಯಕರು ಸಮಾಧಾನ ಮಾಡದರು. ಬಳಿಕ ರಾಜೀನಾಮೆ ಕೊಡುವುದಿಲ್ಲ ಎಂದು ಆನಂದ್ ಮಾಮನಿ ಸ್ಪಷ್ಟನೆ ಕೊಟ್ಟರು.

ಮಂತ್ರಿಸ್ಥಾನ ಸಿಗದ ಶಾಸಕರ ಬೆಂಬಲಿಗರಿಂದ ಧರಣಿ

ಮಂತ್ರಿಸ್ಥಾನ ಸಿಗದ ಶಾಸಕರ ಬೆಂಬಲಿಗರಿಂದ ಧರಣಿ

ಇನ್ನು ಮಂತ್ರಿಸ್ಥಾನ ವಂಚಿತ ಶಾಸಕರ ಬೆಂಬಲಿಗರು ಬೆಂಗಳೂರು ಹಾಗೂ ಅವರವರ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಿದರು. ಬೆಂಗಳೂರಿನಲ್ಲಿ ಸುರಪುರ ಶಾಸಕ ರಾಜೂಗೌಡ ಅವರ ಬೆಂಬಲಿಗರು ದಿಢೀರ್ ಧರಣಿಗೆ ಇಳಿದರು. ತಮ್ಮ ನಾಯಕ ಮಂತ್ರಿಯಾಗುತ್ತಾರೆ ಎಂದು ಬೆಂಗಳೂರಿಗೆ ಬಂದವರಿಗೆ ನಿರಾಸೆಯಾಗಿತ್ತು. ಹೀಗಾಗಿ ಶಾಸಕರ ಭವನದ ಬಳಿ ರಾಜೂಗೌಡ ಬೆಂಬಲಿಗರು ಧರಣಿ ಆರಂಭಿಸಿದ್ದರು.

ಕೊನೆಗೆ ಅವರನ್ನು ಸ್ವತಃ ರಾಜೂಗೌಡ ಅವರೆ ಸಮಾಧಾನ ಮಾಡಿದರು. ಅದೇ ಸಂದರ್ಭದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ್ ಅವರ ಬೆಂಬಲಿಗರು ಬೆಂಗಳೂರು ಹಾಗೂ ಹಾವೇರಿಯಲ್ಲಿ ಧರಣಿ ಮಾಡಿದರು. ಧರಣಿ ಮಾಡುತ್ತಿದ್ದ ನೆಹರು ಓಲೇಕಾರ್ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ಆಮೇಲೆ ಬಿಡುಗಡೆ ಮಾಡಿದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನನಲ್ಲಿ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಅವರು ವಿಡಂಬನಾತ್ಮವಾಗಿ ನೂತನ ಸಚಿವರನ್ನು ಸ್ವಾಗತಿಸಿದರು. ಪಕ್ಷಕ್ಕಾಗಿ ಬಹಳಷ್ಟು ದುಡಿದವರಿಗೆ ಮಂತ್ರಿಸ್ಥಾನ ಕೊಟ್ಟಿದ್ದಾರೆ. ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ಅವರು ನಂಬರ್ ಒನ್ ಮಾಡಲಿದ್ದಾರೆ. ಎಲ್ಲರಿಗೂ ಒಳ್ಳೆಯದಾಲಿ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟರೊಳಗೆ ರಾಜಭನವದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಶುರುವಾಯ್ತು.

ಉಪ ಮುಖ್ಯಮಂತ್ರಿ ಹುದ್ದೆ ರದ್ದು ಮಾಡಿದ ಹೈಕಮಾಂಡ್

ಉಪ ಮುಖ್ಯಮಂತ್ರಿ ಹುದ್ದೆ ರದ್ದು ಮಾಡಿದ ಹೈಕಮಾಂಡ್

"ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸದಿರಲು ಹೈಕಮಾಂಡ್ ತೀರ್ಮಾನ ಮಾಡಿರುವುದರಿಂದ ಯಾರೂ ಡಿಸಿಎಂ ಇರುವುದಿಲ್ಲ ಎಂದು" ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ಪ್ರಕಟಿಸಿದರು. ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕತೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಾಗಿದೆ" ಎಂದು ಸುದ್ದಿಗೋಷ್ಠಿಯಲ್ಲಿ ಬಸವರಾಜ ಬೊಮ್ಮಾಯಿ ವಿವರಿಸಿದರು.

ಜೊತೆಗೆ ಸಚಿವ ಸಂಪುಟಕ್ಕೆ ಸೇರುವವರ ಹೆಸರುಗಳನ್ನು ರಾಜಭವನಕ್ಕೆ ಕಳುಹಿಸಿದ್ದು, 29 ಶಾಸಕರು ಮಂತ್ರಿಯಾಗಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು. ಅದಾದ ಬಳಿಕ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆರಂಭವಾಯಿತು.

ಸಚಿವ ಸಂಪುಟ ವಿಸ್ತರಣೆಯೊಂದಿಗೆ ಹೆಚ್ಚು ಕಡಿಮೆ ಪೂರ್ಣ ಪ್ರಮಾಣದ ಸಂಪುಟ ರಚನೆ ಆದಂತಾಗಿದೆ. ಇಪ್ಪತ್ತೊಂಬತ್ತು ಶಾಸಕರ ಸೇರ್ಪಡೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಂಪುಟ ಬಲ ಇಂದು ಮೂವತ್ತಕ್ಕೆ ಏರಿದೆ. ಉಳಿದಿರುವ ನಾಲ್ಕು ಸಚಿವ ಸ್ಥಾನಗಳನ್ನು ನಂತರ ಭರ್ತಿ ಮಾಡುವ ಸಾಧ್ಯತೆಗಳಿವೆ ಎಂದು ಇದೇ ಸಂದರ್ಭದಲ್ಲಿ ತಿಳಿದು ಬಂದಿದೆ.

ಪ್ರತಿಜ್ಞಾ ವಿಧಿ ಬೋಧಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಪ್ರತಿಜ್ಞಾ ವಿಧಿ ಬೋಧಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸುಮಾರು 75 ನಿಮಿಷಗಳ ಕಾಲ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ 29 ಜನರು ನೂತನ ಮಂತ್ರಿಗಳಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಡಾ. ಉಮೇಶ್ ಜಾಧವ್ ಒಳಗೊಂಡಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ. ಶ್ರೀರಾಮುಲು, ವಿ. ಸೋಮಣ್ಣ, ಉಮೇಶ್ ವಿಶ್ವನಾಥ ಕತ್ತಿ. ಎಸ್. ಅಂಗಾರ, ಜೆ. ಸಿ. ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಿ.ಸಿ. ಪಾಟೀಲ್, ಆನಂದ್ ಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್, ಮುರುಗೇಶ್ ರುದ್ರಪ್ಪ ನಿರಾಣಿ, ಅರೆಬೈಲ್ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಬಿ. ಎ. ಬಸವರಾಜ (ಬೈರತಿ ಬಸವರಾಜ್), ಡಾ. ಕೆ. ಸುಧಾಕರ್, ಕೆ. ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎನ್. ನಾಗರಾಜ್ (ಎಂ.ಟಿ.ಬಿ. ನಾಗರಾಜ್), ಕೆ.ಸಿ. ನಾರಾಯಣಗೌಡ, ಬಿ.ಸಿ. ನಾಗೇಶ್, ವಿ. ಸುನೀಲ್ ಕುಮಾರ್, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಮುನಿರತ್ನ ಅವರು ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಸ್ವೀಕರಿಸಿದರು. ಇದರೊಂದಿಗೆ ಜುಲೈ 28 ರಂದು ಅಸ್ತಿತ್ವಕ್ಕೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಏಕ-ಸದಸ್ಯ ಸಚಿವ ಸಂಪುಟ ಪೂರ್ಣ ಪ್ರಮಾಣದ ರೂಪ ಪಡೆಯಿತು.

ಕ್ಷೇತ್ರದ ಜನತೆಯೆ ಹೆಸರಿನಲ್ಲಿ ಪ್ರಮಾಣ ವಚನ

ಕ್ಷೇತ್ರದ ಜನತೆಯೆ ಹೆಸರಿನಲ್ಲಿ ಪ್ರಮಾಣ ವಚನ

ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ 29 ಸಚಿವರೂ ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ದೇವರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು ಗಮನ ಸೆಳೆಯಿತು. ನೂತನ ಸಚಿವ ಮುರುಗೇಶ್ ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ಅವರುಗಳು ದೇವರ ಜೊತೆಗೆ ರೈತರ ಹೆಸರು ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಜೊತೆಗೆ ನೂತನ ಸಚಿವರಾದ ಅರೆಬೈಲ್ ಶಿವರಾಂ ಹೆಬ್ಬಾರ್ ಹಾಗೂ ಶಶಿಕಲಾ ಜೊಲ್ಲೆ ಅವರು ದೇವರ ಜೊತೆಗೆ ತಮ್ಮ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಕ್ಷೇತ್ರದ ಜನರಿಗೆ ಗೌರವ ಸಲ್ಲಿಸಿದರು. ಸಚಿವ ಆನಂದ್ ಸಿಂಗ್ ವಿಜಯನಗರದ ಪಂಪ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಹಾಗೂ ಬಿ.ಸಿ. ಪಾಟೀಲ್ ಅವರು ಜಗಜ್ಯೋತಿ ಬಸವೇಶ್ವರ ಹಾಗೂ ರೈತರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಝೀರೋ ಟ್ರಾಫಿಕ್‌ನಲ್ಲಿ ರಾಜಭವನಕ್ಕೆ ಆಗಮಿಸಿದ ಶಶಿಕಲಾ ಜೊಲ್ಲೆ

ಝೀರೋ ಟ್ರಾಫಿಕ್‌ನಲ್ಲಿ ರಾಜಭವನಕ್ಕೆ ಆಗಮಿಸಿದ ಶಶಿಕಲಾ ಜೊಲ್ಲೆ

ಪ್ರಮಾಣ ವಚನ ಸ್ವೀಕರಿಸಲು ರಾಜಭವನಕ್ಕೆ ಆಗಮಿಸಿದ ಬಹುತೇಕ ಶಾಸಕರು ತಮ್ಮ ಕೊರಳಿಗೆ ಕೇಸರಿ ವಸ್ತ್ರವನ್ನು ಧರಿಸಿದ್ದರು. ಇದು ಎಲ್ಲ ಗಮನ ಸೆಳೆಯಿತು. ಜೊತೆಗೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನೂತನ ಸಚಿವ ಪ್ರಭು ಚೌಹಾಣ್ ಎಲ್ಲರ ಗಮನ ಸೆಳೆದರು. ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟ ಬಂದಿದ್ದ ಪ್ರಭು ಚೌಹಾಣ್ ತಮ್ಮ ಉಡುಗೆ-ತೊಡುಗೆಯಿಂದ ಎಲ್ಲರ ಗಮನ ಸೆಳೆದರು.

ರಾಜ್ಯ ಬಿಜೆಪಿ ಸರ್ಕಾರದ ಏಕೈಕ ಮಹಿಳಾ ಸದಸ್ಯೆಯಾಗಿ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅವರು ಗಮನ ಸೆಳೆದರು. ದೆಹಲಿಯಲ್ಲಿದ್ದ ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಬರುವುದು ತಡವಾಗಿತ್ತು. ಕೊನೆಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಶಿಕಲಾ ಜೊಲ್ಲೆ ಬಂದಿದ್ದರು. ಸಮಯದ ಅಭಾವದಿಂದ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಅನುಮಾನ ಎಂಬಂತಾಗಿತ್ತು.

ಹೀಗಾಗಿ ಶಶಿಕಲಾ ಜೊಲ್ಲೆ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಆಗಮಿಸಲು ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಅದರಿಂದಾಗಿ ಸಕಾಲದಲ್ಲಿ ಅವರು ರಾಜಭವನ ತಲುಪಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಯಿತು.

ನೂತನ ಸಚಿವ ಸಂಪುಟದ ಮೊದಲ ಸಭೆ

ನೂತನ ಸಚಿವ ಸಂಪುಟದ ಮೊದಲ ಸಭೆ

ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಸಂಪುಟದ ಮೊದಲ ಸಚಿವ ಸಂಪುಟ ಸಭೆ ನಡೆಯಿತು. ಮೊದಲ ಸಂಪುಟ ಸಬೆಯಲ್ಲಿ ಪ್ರಮುಖವಾಗಿ ಮೂರು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಮೊದಲನೇಯದಾಗಿ ಎಲ್ಲ ಸಚಿವರು ತಮಗೆ ನಿಗದಿ ಪಡಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಹೆಚ್ಚಿನ ಪರಿಹಾರ ಕ್ರಮಗಳ ಅಗತ್ಯವಿದ್ದರೆ ವರದಿ ಸಲ್ಲಿಸುವಂತೆ ಎಲ್ಲ ಸಚಿವರಿಗೆ ಸೂಚಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜೊತೆಗೆ ಕೋವಿಡ್ ಟಾಸ್ಕ್ ಫೋರ್ಸ್ ಪುನಾರಚನೆ ಮಾಡಲು ತೀರ್ಮಾನಿಸಲಾಗಿದ್ದು, ಪರಿಶಿಷ್ಟ ಪಂಗಡ ಸಮುದಾಯದ ಬಹುದಿನಗಳ ಬೇಡಿಕೆಯಂತೆ ಎಸ್ ಟಿ ಪಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಆಯವ್ಯಯದಲ್ಲಿ ಘೋಷಿಸಿದಂತೆ ಮುಖ್ಯಮಂತ್ರಿ ಮೇಲ್ವಿಚಾರಣೆಯಲ್ಲಿ ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣ ಯೋಜನೆಗಳ ಅನುಷ್ಠಾನಕ್ಕೆ ತೀರ್ಮಾನ ಮಾಡಲಾಯಿತು ಎಂದು ಸಭೆಯ ಬಳಿಕ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.ಜೊತೆಗೆ ಇದೇ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯೂ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ನಡೆಯಿತು. ಹೀಗಾಗಿ ನೂತನ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಎರಡನೇ ಬಾರಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮೊದಲ ಬಾರಿ ಸ್ವೀಕರಿಸಿದ್ದ ಪ್ರಮಾಣ ವಚನದಲ್ಲಿ ದೋಷ ಕಂಡುಬಂದಿದ್ದರಿಂದ ಅವರ ಪ್ರಮಾಣ ವಚನ ಅಸಿಂಧುವಾಗುವ ಸಾಧ್ಯತೆಗಳಿದ್ದವು. ಹೀಗಾಗಿ ರಾಜಭವನದಲ್ಲಿ ಮತ್ತೊಮ್ಮೆ ಅವರಿಗೆ ಪ್ರಮಾಣ ವಚನ ಬೋಧನೆ ಮಾಡಲಾಯ್ತು.

ರಾಜಭವನದಲ್ಲಿ ಮೊದಲು ನಡೆದ ಪ್ರಮಾಣ ವಚಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ಬೋಧನೆ ಮಾಡಿದ್ದರು. ಆದರೆ ರಾಜ್ಯಪಾಲರು ಮಾಡಿದ್ದ ಬೋಧನೆಯನ್ನು ಶಂಕರ ಪಾಟೀಲ್ ಮುನೇನಕೊಪ್ಪ ಅನುಸರಿಸಿರಲಿಲ್ಲ. ನಿಯಮಾವಳಿಯಂತೆ ಮೊದಲು ಅಧಿಕಾರ ಹಾಗೂ ನಂತರ ಗೌಪ್ಯತೆಯ ಪ್ರಮಾಣ ವಚನವನ್ನು ಸ್ವೀಕಾರ ಮಾಡಬೇಕಿತ್ತು. ಅದರಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮೊದಲು ಅಧಿಕಾರ ಹಾಗೂ ನಂತರ ಗೌಪ್ಯತೆಯ ಪ್ರಮಾಣ ವಚನ ಬೋಧನೆ ಮಾಡಿದ್ದರು. ಆದರೆ ಶಂಕರ್ ಪಾಟೀಲ್ ಮುನೇನಕೊಪ್ಪ ಗೊಂದಲ ಮಾಡಿಕೊಂಡಿರುವುದು ನಂತರ ಕಂಡು ಬಂದಿತ್ತು.

ಹೀಗಾಗಿ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ರಾಜಭವನದಲ್ಲಿ ಮಂತ್ರಿಯಾಗಿ ಪದಸ್ವೀಕಾರ ಮತ್ತು ಗೌಪ್ಯತಾ ಪ್ರಮಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಪದಸ್ವೀಕಾರ ಪ್ರಮಾಣ ವಚನವನ್ನೇ ಎರಡು ಬಾರಿ ಓದಿದ್ದು, ಗೌಪ್ಯತಾ ಪ್ರಮಾಣ ವಚನವನ್ನು ಓದಿಲ್ಲದಿರುವುದನ್ನು ಗಮಿಸಲಾಯಿತು. ಆದುದರಿಂದ ರಾಜ್ಯಪಾಲರು ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಅವರಿಗೆ ಬುಧವಾರ ಸಂಜೆ ರಾಜಭವನದಲ್ಲಿ ಮತ್ತೊಮ್ಮೆ ಪದಸ್ವೀಕಾರ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭು ಶಂಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದರು.

ಒಟ್ಟಾರೆಯಾಗಿ ಇಂದಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ರಾಜ್ಯ ಸರ್ಕಾರ ಹಾಗೂ ರಾಜ್ಯ ಬಿಜೆಪಿಗೆ ಸಂಬಧಿಸಿದ್ದವು. ನಾಳೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೂರ್ಣ ಪ್ರಮಾಣದ ಸಂಪುಟ ಕೆಲಸ ಆರಂಭಿಸಿಲಿದೆ.

   Olympic High-jump ನಲ್ಲಿ ಇಬ್ಬರೂ ಗೋಲ್ಡ್ ಮೆಡಲ್ ಪಡೆದ ರೋಚಕ ಕಥೆ | Oneindia Kannada
   English summary
   Karnataka Political News Roundup (4th August 2021): Today's News on the latest Karnataka politics-Stay informed about the recent political developments in Karnataka today. For all the latest Karnataka politics news, follow Kannada Oneindia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X