2026ರ ಬೆಂಗಳೂರು ಟಾಪ್ 10 ಕಂಪನಿಗಳು ಯಾವುವು? ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ಇನ್
ವೃತ್ತಿಜೀವನ ಉತ್ತಮಗೊಳಿಸಲು, ಹೊಸದಾಗಿ ವೃತ್ತಿ ಆರಂಭಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ವೃತ್ತಿಪರರಿಗೆ ಸಹಾಯವಾಗುವಂತೆ ವಿಶ್ವದ ಅತಿ ದೊಡ್ಡ ವೃತ್ತಿಪರ ನೆಟ್‌ವರ್ಕ್ ಆಗಿರುವ 'ಲಿಂಕ್ಡ್ ಇನ್' (Linked In) ಬೆಂಗಳೂರಿನ ಟಾಪ್ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶದ ಮೆಟ್ರೋ ನಗರಗಳ ಪೈಕಿ ಬೆಂಗಳೂರು ಕಂಪನಿಗಳ ಪ್ರಾದೇಶಿಕ ಪಟ್ಟಿಯು ಅಗ್ರ ಸ್ಥಾನ ಪಡೆದಿದೆ ಎಂದು 'ಲಿಂಕ್ಡ್ ಇನ್' ತಿಳಿಸಿದೆ. ಪಟ್ಟಿಯಲ್ಲಿ ಯಾವೆಲ್ಲ ಕಂಪನಿಗಳಿಗೆ ಎಂಬ ಮಾಹಿತಿ ಮುಂದಿದೆ.
ಬೆಂಗಳೂರಿನ ವೃತ್ತಿಪರರು ವೃತ್ತಿಜೀವನ ಉನ್ನತಿಗೇರಿಸಿಕೊಳ್ಳಲು, ವೃತ್ತಿ ಪ್ರಗತಿ ಸಾಧಿಸಲು ಅವರಿಗೆ ಪೂರಕವಾಗಿರುವ ಹತ್ತು ಪ್ರಮುಖ ಕಂಪನಿಗಳು ಇಲ್ಲಿದೆ. ಲಕ್ಷಾಂತರ ವೃತ್ತಿಪರರ ಚಟುವಟಿಕೆ ಮತ್ತು ದತ್ತಾಂಶ ಹಾಗೂ ವಿವಿಧ ಮಾನದಂಡಗಳ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಭಾರತದ ಅತ್ಯಂತ ಕ್ರಿಯಾತ್ಮಕ ಉದ್ಯೋಗ ಮಾರುಕಟ್ಟೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಬೆಳವಣಿಗೆಗೆ ಆದ್ಯತೆ ನೀಡುವ ಸಂಸ್ಥೆಗಳಿವೆ, ಅವುಗಳನ್ನು ಪಟ್ಟಿಯಲ್ಲಿ ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳು ಗಮನಿಸಬಹುದು.

ಸತತ 10 ವರ್ಷಗಳಿಂದ ಟಾಪ್ ಕಂಪನಿಗಳ ಪಟ್ಟಿ ಬಿಡುಗಡೆ
ರಾಷ್ಟ್ರಮಟ್ಟದ ಪ್ರಮುಖ ಕಂಪನಿಗಳ ಪಟ್ಟಿ ಬಿಡುಗಡೆಯು ಯಶಸ್ವಿ 10ನೇ ವರ್ಷಕ್ಕೆ ಕಾಲಿಟ್ಟಿದೆ. ಬದಲಾಗುತ್ತಿರುವ ಉದ್ಯಮಗಳು, ಹೊಸ ಉದ್ಯೋಗಾವಕಾಶಗಳು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಕೌಶಲ್ಯಗಳ ಬೇಡಿಕೆಗೆ ತಕ್ಕಂತೆ ಇಂದಿನ ಉದ್ಯೋಗ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ವರದಿ ಸ್ಪಷ್ಟಪಡಿಸುತ್ತದೆ. ವೃತ್ತಿಪರರಿಗೆ ಇದು ಪ್ರಯೋಜನಕ್ಕೆ ಬರಲಿದೆ ಎಂದು 'ಲಿಂಕ್ಡ್ ಇನ್'ಕೆರಿಯರ್ ಎಕ್ಸ್ ಪರ್ಟ್ ಹಾಗೂ ಭಾರತದ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ತಿಳಿಸಿದ್ದಾರೆ.
ದೇಶದ ಐಟಿ ಕೇಂದ್ರವಾಗಿರುವ ಬೆಂಗಳೂರು ದೀರ್ಘಕಾಲದಿಂದಲೂ ಭಾರತದ ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿ ಪಡೆದಿದೆ. ಈ ಬಾರಿಯ ಪಟ್ಟಿಯಲ್ಲಿ ನಾಲ್ಕು ತಂತ್ರಜ್ಞಾನ ಕಂಪನಿಗಳು ಮತ್ತು ನಾಲ್ಕು ಬಿಎಫ್‌ಎಸ್‌ಐ ಸಂಸ್ಥೆಗಳು ಸ್ಥಾನ ಪಡೆದಿವೆ. ಉದ್ಯೋಗದಾತರು ಕೋಡಿಂಗ್ ಮತ್ತು ವಾಣಿಜ್ಯ ಫಲಿತಾಂಶಗಳು ಎರಡನ್ನೂ ಅರ್ಥಮಾಡಿಕೊಳ್ಳುವ ಅಭ್ಯರ್ಥಿಗಳಿಗಾಗಿ ಹುಡುಕುತ್ತಿದ್ದಾರೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳಿಗೆ ತಾಂತ್ರಿಕ ಮತ್ತು ಇತರ ಕೌಶಲ್ಯಗಳ ಕಲಿಕೆ ಅನಿವಾರ್ಯವಾಗಿದೆ.
ಪಟ್ಟಿಯಲ್ಲಿ ಯಾವ ಕಂಪಿಗಳಿಗೆ ಯಾವ ಸ್ಥಾನ ಸಿಕ್ಕಿದೆ?
ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳ ನಡುವಿನ ಪೈಪೋಟಿ ಇರುವ ಕಂಪನಿಗಳಿಗೂ ಬೆಂಗಳೂರಿನ 'ಟಾಪ್ ಕಂಪನಿಗಳು 2026'ರ ಪಟ್ಟಿಯಲ್ಲಿ ಸಮಾನ ಮನ್ನಣೆ ನೀಡಲಾಗಿದೆ. ಈ ಟಾಪ್ ಪಟ್ಟಿಯಲ್ಲಿ ಜೆಪಿ ಮಾರ್ಗನ್ ಚೇಸ್ 1ನೇ ಸ್ಥಾನದಲ್ಲಿದೆ. ಮಾರ್ಗನ್ ಸ್ಟಾನ್ಲಿ 2ನೇ, ಮತ್ತು ವೆಲ್ಸ್ ಫಾರ್ಗೋ 5ನೇ ಸ್ಥಾನದಲ್ಲಿದೆ. ತಂತ್ರಜ್ಞಾನ ವಲಯದಲ್ಲಿ ಐಬಿಎಂ 3, ಅಮೆಜಾನ್ 4ನೇ ಸ್ಥಾನದಲ್ಲಿದ್ದರೆ, ಎಸ್‌ಎಪಿ 8ನೇ ಸ್ಥಾನದಲ್ಲಿದೆ.
ಇನ್ನೂ ಔಷಧ ಉತ್ಪಾದನಾ ವಲಯದ 'ಎಲಿ ಲಿಲ್ಲಿ ಅಂಡ್ ಕಂಪನಿ (9ನೇ ಸ್ಥಾನ) ಮತ್ತು ಆಟೊಮೇಷನ್ ಯಂತ್ರೋಪಕರಣಗಳ ಉತ್ಪಾದನಾ ವಲಯದ ಷ್ನೀಡರ್ ಎಲೆಕ್ಟ್ರಿಕ್ (10 ನೇ ಸ್ಥಾನ) ಸಂಸ್ಥೆಗಳು ಲಿಂಕ್ಡ್‌ಇನ್ ಪಟ್ಟಿಯಲ್ಲಿ ಪಟ್ಟಿಯಲ್ಲಿ ಸ್ಥಾನ ನೀಡಿವೆ. ಬೆಂಗಳೂರು ಈ ಎರಡೂ ವಲಯಗಳಲ್ಲಿ ಉತ್ತಮ ಕಂಪನಿಗಳನ್ನು ಹೊಂದಿದೆ ದೇಶದ ಏಕೈಕ ಮೆಟ್ರೋ ನಗರವಾಗಿದೆ ಎಂದು ಲಿಂಕ್ಡ್ ಇನ್ ಬಣ್ಣಿಸಿದೆ.
ಟಾಪ್ ಕಂಪನಿಗಳ ಪಟ್ಟಿಯಲ್ಲಿ ಬೆಂಗಳೂರಿನದ್ದೆ ಸದ್ದು
ದೇಶದ ಎಲ್ಲಾ ಮೆಟ್ರೋ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನ ಪ್ರಾದೇಶಿಕ ಪಟ್ಟಿಯು ರಾಷ್ಟ್ರೀಯ ಶ್ರೇಯಾಂಕದೊಂದಿಗೆ ಅತ್ಯಂತ ಬಲವಾದ ಹೊಂದಾಣಿಕೆಯನ್ನು ಪ್ರದರ್ಶಿಸಿದೆ. ಬೆಂಗಳೂರಿನ ಟಾಪ್ 10 ಕಂಪನಿಗಳ ಪೈಕಿ ಎಂಟು ಸಂಸ್ಥೆಗಳು ಲಿಂಕ್ಡ್ ಇನ್ ನ ಭಾರತದ '25 ಪ್ರಮುಖ ಕಂಪನಿಗಳ' ಒಟ್ಟಾರೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
2026ರ ಬೆಂಗಳೂರಿನ ಟಾಪ್ 10 ಕಂಪನಿಗಳ ಪಟ್ಟಿ
1. ಜೆ ಪಿ ಮಾರ್ಗನ್ ಚೇಸ್
2. ಮಾರ್ಗನ್ ಸ್ಟಾನ್ಲಿ
3. ಐಬಿಎಂ
4. ಅಮೆಜಾನ್
5. ವೆಲ್ಸ್ ಫಾರ್ಗೋ
6. ಎಚ್ ಎಸ್ ಬಿ ಸಿ
7. ಜಂಪ್ ಕ್ಲೌಡ್
8. ಎಸ್ಎಪಿ
9. ಎಲಿ ಲಿಲ್ಲಿ ಆಂಡ್ ಕಂಪನಿ
10. ಷ್ನೀಡರ್ ಎಲೆಕ್ಟ್ರಿಕ್
ಉದ್ಯೋಗಾಕಾಂಕ್ಷಿಗಳಿಗೆ 'ಲಿಂಕ್ಡ್ ಇನ್' ಪ್ರಮುಖ ಸಲಹೆ
* ಕಂಪನಿಗಳು ನೇಮಕಾತಿ ವೇಳೆ ಕೌಶಲ್ಯಯುತರು, ಪ್ರತಿಭಾನ್ವಿತರನ್ನು ಹುಡುಕುತ್ತವೆ. ಈ ವೇಳೆ ಉದ್ಯೋಗಾಕಾಂಕ್ಷಿಗಳಿಗಿಂತ ಅವರ ಲಿಂಕ್ಡ್ ಇನ್ ಪ್ರೊಫೈಲ್ ಮಾತನಾಡುವಂತಿರಬೇಕು.
* ಅನೇಕ ಕಂಪನಿಗಳು/ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಬದಲು ನಿಮ್ಮ ಅರ್ಹತೆ, ಕೌಶಲ್ಯಕ್ಕೆ ತಕ್ಕುದಾದ ಸರಿಯಾದ ಉದ್ಯೋಗಗಳಿಗೆ ಮಾತ್ರ ಅರ್ಜಿ ಸಲ್ಲಿಸಿ.
* ನೀವು ಇಷ್ಟಪಡುವ ಕಂಪನಿಗಳ ಪ್ರಸ್ತುತ ಮತ್ತು ಹಳೆಯ ಉದ್ಯೋಗಿಗಳೊಂದಿಗೆ ಉತ್ತಮ ವೃತ್ತಿಪರ ಬಾಂಧವ್ಯ ಬೆಳೆಸಿಕೊಳ್ಳಿ. ಅವರ ಪೋಸ್ಟ್ ಗಳೊಂದಿಗೆ ಸಂವಹನ ನಡೆಸಿ. ಏಕೆಂದರೆ ನಿಮ್ಮ ನೆಟ್ ವರ್ಕ್ ನಿಮ್ಮ ಸಂಪತ್ತು.
* ಉನ್ನತ ಕಂಪನಿಗಳು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ, ಆದರೆ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ಸಲ್ಲಿಸಿದ ಅರ್ಜಿ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡುತ್ತೀರಿ. ಯೋಜನಾಬದ್ಧವಾಗಿ ಪ್ರಯತ್ನ ನಡೆಸಿ.














Click it and Unblock the Notifications