ಶಾಲೆ ಆರಂಭಕ್ಕೆ ವಾರವಷ್ಟೇ ಬಾಕಿ, ರಾಜ್ಯದಲ್ಲಿ ಬಗೆಹರಿಯದ ದ್ವಿಭಾಷಾ ನೀತಿ ಗೊಂದಲ: ಆತಂಕದಲ್ಲಿ ಶಿಕ್ಷಕರು

ಬೆಂಗಳೂರು: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಆರಂಭವಾಗಲು ಇನ್ನೇನು ಒಂದು ವಾರವಷ್ಟೇ ಬಾಕಿಯಿದೆ. ಆದರೆ ರಾಜ್ಯ ಸರ್ಕಾರ ಜಾರಿಕೆ ತರಲು ಉದ್ದೇಶಿಸಿರುವ ʼ ರಾಜ್ಯ ಶಿಕ್ಷಣ ನೀತಿ ʼ (SEP) ಮತ್ತು ʼಕರ್ನಾಟಕ ದ್ವಿಭಾಷಾ ನೀತಿ 2026'ರ ಕುರಿತು ಈವರೆಗೂ ಯಾವುದೇ ಸ್ಪಷ್ಟತೆ ಮೂಡಿಲ್ಲ. ಸರ್ಕಾರದ ಈ ಬಗೆಯ ಮೌನ ಶಿಕ್ಷಕ ವರ್ಗದಲ್ಲಿ ಆತಂಕ ಹಾಗೂ ಗೊಂದಲವನ್ನು ಹುಟ್ಟಿಸುತ್ತಿದೆ.

ಕಳೆದ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕೊನೆಯ ಘಳಿಗೆಯಲ್ಲಿ, ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡಲಾಗುವುದು ಹಾಗೂ ತೃತೀಯ ಭಾಷೆಯನ್ನು ಕೇವಲ ಕಲಿಕೆಗಷ್ಟೇ ಸೀಮಿತಗೊಳಿಸಲಾಗುವುದು ಎಂದು ಸರ್ಕಾರ ದಿಢೀರ್ ಘೋಷಣೆ ಮಾಡಿತ್ತು. ಆದರೆ, ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋದರು.

Bilingual Policy

ಹೈಕೋರ್ಟ್‌ನಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿ, ನ್ಯಾಯಾಲಯದ ಆದೇಶದಂತೆ ಅಂತಿಮವಾಗಿ ಅಂಕಗಳನ್ನೇ ನೀಡಬೇಕಾಗಿ ಬಂತು. ಈ ಅನಿರೀಕ್ಷಿತ ಬೆಳವಣಿಗೆಯ ಬೆನ್ನಲ್ಲೇ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು "ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿಭಾಷಾ ನೀತಿಯನ್ನು ಅಧಿಕೃತವಾಗಿ ಜಾರಿ ಮಾಡಲಾಗುವುದು" ಎಂದು ಪ್ರಕಟಿಸಿದ್ದರು. ಇದೀಗ ಹೊಸ ಶೈಕ್ಷಣಿಕ ವರ್ಷದ ಹೊಸ್ತಿಲಲ್ಲಿ ನಾವಿದ್ದರೂ, ಸರ್ಕಾರ ಈ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡುತ್ತಿಲ್ಲ.

ಶಿಕ್ಷಕರಲ್ಲಿ ಗೊಂದಲ

ಪ್ರಸಕ್ತ ಸಾಲಿನಿಂದಲೇ ರಾಜ್ಯ ಶಿಕ್ಷಣ ನೀತಿ ಹಾಗೂ ದ್ವಿಭಾಷಾ ನೀತಿ ಅನ್ವಯವಾಗುತ್ತದೆಯೇ ಅಥವಾ ಇಲ್ಲವೇ? ಶಾಲೆಗಳಲ್ಲಿ ತೃತೀಯ ಭಾಷೆಯನ್ನು ಅಂದರೆ ಹಿಂದಿ, ಸಂಸ್ಕೃತ ಇತ್ಯಾದಿಗಳನ್ನು ಹೇಗೆ ಬೋಧಿಸಬೇಕು? ಅದನ್ನು ಕೇವಲ ಒಂದು ಭಾಷೆಯಾಗಿ ಮಾತ್ರ ಕಲಿಸಬೇಕೇ ಅಥವಾ ವಾರ್ಷಿಕ ಪರೀಕ್ಷೆಯ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಶಿಕ್ಷಕರನ್ನು ಕಾಡುತ್ತಿವೆ. ಯಾವುದೇ ಸ್ಪಷ್ಟ ಸುತ್ತೋಲೆಗಳಿಲ್ಲದೆ ಪಾಠ-ಪ್ರವಚನಗಳನ್ನು ಹೇಗೆ ಶುರು ಮಾಡುವುದು ಎಂಬುದು ಶಿಕ್ಷಕರ ಅಳಲಾಗಿದೆ.

ಸಂಪುಟ ಸಭೆ ತೀರ್ಮಾನ ಬಾಕಿ

ಎಸ್ಇಪಿಯನ್ನು ಜಾರಿ ಮಾಡುವ ಸಂಬಂಧ ಸಚಿವ ಸಂಪುಟ ಸಭೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಆದರೆ, ಈ ಬಗ್ಗೆ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, "ಎಸ್ಇಪಿಯನ್ನು ಈಗಾಗಲೇ ಎರಡು ಬಾರಿ ಕ್ಯಾಬಿನೆಟ್ ಅಜೆಂಡಾದಲ್ಲಿ ತರಲಾಗಿದ್ದರೂ, ಸಮಯದ ಅಭಾವದಿಂದ ಚರ್ಚೆ ಸಾಧ್ಯವಾಗಿಲ್ಲ. ಆದಷ್ಟು ಬೇಗ ಇದನ್ನು ಜಾರಿ ಮಾಡುವ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದ್ದಾರೆ. ಪ್ರಸ್ತುತ ಸರ್ಕಾರವು ಮೂರನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಮೇ 23ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಮಹತ್ವದ ವಿಷಯ ಚರ್ಚೆಗೆ ಬರುವ ನಿರೀಕ್ಷೆ ಇದೆ.

ಇದೆಲ್ಲದರ ನಡುವೆ, ದ್ವಿಭಾಷಾ ನೀತಿಯ ಅನುಷ್ಠಾನದ ಹೊಣೆಗಾರಿಕೆ ಕುರಿತಾಗಿಯೂ ಗೊಂದಲವಿದೆ. ಈ ನೀತಿಯು ಕೇವಲ ಶಿಕ್ಷಣ ಇಲಾಖೆಗೆ ಮಾತ್ರ ಸೀಮಿತವಾಗದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೂ ಬರುತ್ತದೆ. ಹೀಗಾಗಿ ಭಾಷಾ ನೀತಿ ಅನುಷ್ಠಾನ ಮಾಡಲು ಯಾವ ಇಲಾಖೆ ನಿಯಮಾವಳಿಗಳನ್ನು ಸಿದ್ಧಪಡಿಸಬೇಕು ಎಂಬ ಪ್ರಶ್ನೆ ಎದ್ದಿದೆ.

ಭಾಷಾ ನೀತಿಯನ್ನು ಜಾರಿ ಮಾಡಿದರೆ, ಸ್ಥಳೀಯ ಭಾಷೆ ಮಾತನಾಡುವವರಿಗೆ ಇದರಿಂದ ಏನೆಲ್ಲಾ ಅನುಕೂಲವಾಗಲಿದೆ? ಹೊರ ರಾಜ್ಯದವರ ಮೇಲೆ ಇದು ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ? ಎಂಬಿತ್ಯಾದಿ ಆಯಾಮಗಳನ್ನು ಪರಿಗಣಿಸಬೇಕಿದೆ. ನೆರೆಯ ತಮಿಳುನಾಡು ಹಾಗೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಭಾಷಾ ನೀತಿಯನ್ನು ಹೇಗೆ ಪಾಲನೆ ಮಾಡಲಾಗುತ್ತಿದೆ ಎಂಬ ಮಾನದಂಡಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಆ ಬಳಿಕವಷ್ಟೇ ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ವೈಜ್ಞಾನಿಕವಾಗಿ ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಅಭಿಪ್ರಾಯಪಟ್ಟಿವೆ.

ಒಟ್ಟಾರೆಯಾಗಿ, ಶಾಲೆಗಳು ಆರಂಭವಾಗುವ ಮುನ್ನವೇ ಸರ್ಕಾರ ಶೈಕ್ಷಣಿಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ, ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕಾದ ಜರೂರತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+