ಮಳೆ ಆರಂಭವಾಗುತ್ತಿದ್ದಂತೆಯೇ ಮಕ್ಕಳನ್ನು ಕಾಡುವ ಆರೋಗ್ಯ ಸಮಸ್ಯೆಗೆ ಇದುವೇ ಸುಲಭ ಪರಿಹಾರ
Monsoon Health Tips for Kids: ಬೇಸಿಗೆಯಿಂದ ಬೆಂದು ಹೋಗಿರುವಾಗ ಮಳೆ ಮನಸ್ಸಿಗೂ, ದೇಹಕ್ಕೂ ತುಸು ನೆಮ್ಮದಿ ನೀಡುತ್ತದೆ. ಈ ವರ್ಷಧಾರೆ ಬಿಸಿಯೇರಿರುವ ಧರೆಯನ್ನು ತಂಪಾಗಿಸುವುದರ ಜೊತೆಗೆ ನಮ್ಮ ಮೈ ಮನಸ್ಸಿಗೂ ಉಲ್ಲಾಸ ನೀಡುತ್ತದೆ. ಮಳೆ ಆಹ್ಲಾದಕರ ವಾತಾವರಣವನ್ನು ನಿರ್ಮಿಸುತ್ತದೆ ನಿಜ. ಆದರೆ ಮಳೆ ಆಗಮನದ ಜೊತೆಗೆ ವಿವಿಧ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಈ ವೇಳೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗುತ್ತದೆ.
ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರ ಮೇಲೆ ಈ ರೋಗಗಳು ಹೆಚ್ಚಾಗಿ ಪರಿಣಾಮ ಬೀರುತ್ತವೆ. ಈ ಋತುವಿನಲ್ಲಿ ಗಾಳಿಯಲ್ಲಿ ಹೆಚ್ಚಿನ ಆರ್ದ್ರತೆ ಇರುತ್ತದೆ. ಇದು ಜೀರ್ಣಕ್ರಿಯೆಯ ಸಾಮರ್ಥ್ಯವನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ ಮಳೆಗಾಲದಲ್ಲಿ ಕಾಲೋಚಿತ ಕಾಯಿಲೆಗಳ ಆಪಾಯ ಅವರನ್ನು ಅತಿಯಾಗಿ ಕಾಡುತ್ತದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಸಹಜ.

ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಳಜಿ ಹೀಗಿರಬೇಕು
ಮಳೆಗಾಲದಲ್ಲಿ ತೇವಾಂಶದಿಂದಾಗಿ ಸೊಳ್ಳೆಗಳು ಮತ್ತು ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಇವುಗಳು ನೀರು ನಿಲ್ಲುವ ಜಾಗದಲ್ಲಿ ಹೆಚ್ಚಾಗಿ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ನಿಮ್ಮ ಮನೆಯ ಒಳಗೆ ಮತ್ತು ಸುತ್ತಮುತ್ತಲಿನ ಸ್ವಚ್ಛತೆಗೆ ವಿಶೇಷ ಗಮನ ಕೊಡಬೇಕಾಗುತ್ತದೆ. ಮನೆಯ ನೆಲವನ್ನು ಪ್ರತಿ ದಿನ ಸ್ವಚ್ಛಗೊಳಿಸಬೇಕು. ಮಣ್ಣಿನಿಂದಲೂ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಮನೆಯೊಳಗೆ ಶೂ ಮತ್ತು ಚಪ್ಪಲಿಗಳನ್ನು ಇಡಬಾರದು. ಮಣ್ಣಿನಿಂದ ಕೂಡಿದ ಶೂಗಳು ಮತ್ತು ಚಪ್ಪಲಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಏಕೆಂದರೆ ಬ್ಯಾಕ್ಟೀರಿಯಾ ಮತ್ತು ಸೊಳ್ಳೆಗಳು ಅವುಗಳ ಮೂಲಕ ಮನೆಗೆ ಪ್ರವೇಶಿಸುತ್ತವೆ. ಮನೆಯಲ್ಲಿ ನೀರು ನಿಂತಿರುವ ಸ್ಥಳಗಳಾದ ಕೂಲರ್‌ಗಳು, ಪಾಟ್‌ಗಳನ್ನು ಸ್ವಚ್ಛಗೊಳಿಸುತ್ತಿರಬೇಕು.
ವಿಟಮಿನ್ 'ಸಿ' ಹಣ್ಣುಗಳನ್ನ ಹೆಚ್ಚಾಗಿ ಸೇವಿಸಿ
ಮಕ್ಕಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ನೀಡಬೇಕು. ಈ ಮೂಲಕ ಮಕ್ಕಳನ್ನು ಕಾಡಬಹುದಾದ ಋತುಮಾನದ ಕಾಯಿಲೆಗಳಿಂದ ಕಾಪಾಡಬಹುದು. ಪ್ರತಿ ಋತುವಿನಲ್ಲಿ ಶೀತ ಮತ್ತು ಜ್ವರದಿಂದ ಬಳಲುತ್ತಿರುವ ಮಕ್ಕಳು ನಿಯಮಿತವಾಗಿ ವಿಟಮಿನ್ ಸಿ ಅಂಶ ಇರುವ ಹಣ್ಣುಗಳನ್ನು ಸೇವಿಸಬೇಕು. ವಿಟಮಿನ್ ಸಿ ಗಾಗಿ ಮಕ್ಕಳಿಗೆ ಮೊಸಂಬಿ, ಕಿತ್ತಳೆ, ನಿಂಬೆ ಮತ್ತು ನೆಲ್ಲಿಕಾಯಿಯಂತಹ ಹಣ್ಣುಗಳನ್ನು ನೀಡಬಹುದು.
ಮನೆಯಲ್ಲಿ ತಯಾರಿಸಿದ ಆಹಾರ ನೀಡುವುದು ಸೂಕ್ತ
ಮಳೆಗಾಲದಲ್ಲಿ ಮಕ್ಕಳನ್ನು ಸೋಂಕುಗಳಿಂದ ರಕ್ಷಿಸಲು ಅವರಿಗೆ ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಮಾತ್ರ ನೀಡಬೇಕು. ಮಕ್ಕಳು ಹೆಚ್ಚಾಗಿ ಹೊರಗಿನ ಬರುವ ಜಂಕ್ ಫುಡ್ ಅನ್ನು ಇಷ್ಟಪಡುತ್ತಾರೆ. ಆದರೆ ಈ ಜಂಕ್ ಫುಡ್ ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಮಾರಕವಾಗಬಹುದು. ಇದಲ್ಲದೆ ಹೊರಗಿನ ಆಹಾರದಲ್ಲಿ ಎಷ್ಟರ ಮಟ್ಟಿಗೆ ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ನಮಗಿರುವುದಿಲ್ಲ. ಶುಚಿತ್ವದ ಕೊರತೆಯಿಂದ ಈ ಆಹಾರ ನಮ್ಮ ಮಕ್ಕಳನ್ನು ಅನಾರೋಗ್ಯಕ್ಕೆ ತಳ್ಳಬಹುದು. ಹಾಗಾಗಿ ಮಕ್ಕಳಿಗೆ ಏನು ಬೇಕೋ ಅದನ್ನು ಮನೆಯಲ್ಲಿಯೇ ತಯಾರಿಸಿ ನೀಡುವುದು ಒಳ್ಳೆಯದು.
ಮಕ್ಕಳಿಗೆ ಹತ್ತಿ ಬಟ್ಟೆಯ ಉಡುಪುಗಳನ್ನ ತೊಡಿಸಿ
ಮಳೆಗಾಲವು ಬಿಸಿಲು ಮತ್ತು ಮಳೆಯ ಪರ್ಯಾಯ ಅವಧಿಗಳನ್ನು ತರುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ಹತ್ತಿ ಬಟ್ಟೆಗಳಿಂದ ತಯಾರಿಸಿ ಉಡುಪುಗಳನ್ನ ತೊಡಿಸುವುದರಿಂದ ಆರಾಮ ನೀಡುತ್ತದೆ. ಅವರ ಇಡೀ ದೇಹವನ್ನು ಆವರಿಸುವ ಬಟ್ಟೆಗಳು ಬೆವರಿನ ಮೂಲಕ ಬಿಡುಗಡೆಯಾಗುವ ವಿಷವನ್ನು ಹೀರಿಕೊಳ್ಳಲು ಮತ್ತು ಕಲ್ಮಶಗಳನ್ನು ಸುಲಭವಾಗಿ ತೆಗೆದುಹಾಕಲು ಸೂಕ್ತವಾಗಿವೆ. ಮಕ್ಕಳಿಗೆ ಹತ್ತಿ ಅಥವಾ ಖಾದಿ ಬಟ್ಟೆಗಳು ಆರಾಮದಾಯಕವಾಗಿರುತ್ತದೆ.
ಮಳೆಗಾಲದಲ್ಲಿ ಮಕ್ಕಳು ಕೆಲವೊಮ್ಮೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಬಹುದು. ಋತುಮಾನದ ಕಾಯಿಲೆಗಳನ್ನು ತಡೆಗಟ್ಟಲು ವೈದ್ಯರನ್ನು ಸಂಪರ್ಕಿಸಿ ಅಗತ್ಯ ಔಷಧಿಗಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವುದು ಹೆಚ್ಚು ಸೂಕ್ತ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications