ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ 03: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಸಮಗ್ರ ವರದಿ!

|
Google Oneindia Kannada News

ಬೆಂಗಳೂರು, ಆ. 03: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ವಿಳಂಬ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳು ಕರ್ನಾಟಕದ ರಾಜಕೀಯಕ್ಕೆ ಸಂಬಂಧಿಸಿದಂತೆ ಇಂದು ನಡೆದಿವೆ. ಸಂಪುಟ ವಿಸ್ತರಣೆ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಉಳಿದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜಸ್ಥಾನಕ್ಕೆ ತೆರಳಿರುವುದು ಕುತೂಹಲ ಮೂಡಿಸಿದೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಮಾಜಿ ಸಿಎಂ ಹಾಗೂ ಹಾಲಿ ಸಿಎಂಗಳ ಮೇಲೆ ಹರಿಹಾಯ್ದಿದ್ದಾರೆ.

ಇನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪಕ್ಷ ಬೇದ ಬಿಟ್ಟು ವಿಧಾನ ಪರಿಷತ್ ಸದಸ್ಯರು ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯರೂ ಇದ್ದರು ಎಂಬುದು ಕುತೂಹಲ ಮೂಡಿಸಿದೆ.

ಮತ್ತೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಯಿಂದ ಬೆಂಗಳೂರಿಗೆ ಮರಳುತ್ತಾರೆ ಎನ್ನಲಾಗಿತ್ತು. ಆದರೆ ರಾಜ್ಯ ಸಚಿವ ಸಂಪುಟದ ಕುರಿತು ಹೈಕಮಾಂಡ್ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲವಾದ್ದರಿಂದ ಅವರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಇದರೊಂದಿಗೆ ಇನ್ನೂ ಹಲವು ರಾಜಕೀಯ ಬೆಳವಣಿಗೆಗಳು ರಾಜ್ಯದಲ್ಲಿ ನಡೆದಿವೆ. ಅವುಗಳ ಕುರಿತು ಸಮಗ್ರ ವರದಿ ಇಲ್ಲಿದೆ.

ದೆಹಲಿಯಲ್ಲಿ ಮುಂದುವರೆದ ಸಂಪುಟ ರಚನೆ ಕಸರತ್ತು!

ದೆಹಲಿಯಲ್ಲಿ ಮುಂದುವರೆದ ಸಂಪುಟ ರಚನೆ ಕಸರತ್ತು!

ಭಾನುವಾರ ಸಂಜೆಯೇ ದಿಢೀರ್ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ರಚನೆಗೆ ಅಂತಿಮ ಪಟ್ಟಿ ಸಿದ್ಧಪಡಿಸಲು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮನೆಗಳಿಗೆ ಅಲೆದಾಡುವಂತಾಗಿದೆ. ಸೋಮವಾರ ಇಡೀ ದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಒಂದು ಹಂತದ ಪಟ್ಟಿ ಸಿದ್ದಪಡಿಸಿದ್ದರು.

ಆದರೆ, ಮಂಗಳವಾರ ಮತ್ತೊಮ್ಮೆ ಇಬ್ಬರೂ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ಆದರೆ ಇನ್ನೂ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹೀಗಾಗಿ ಕೊರೊನಾ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಿಎಂ ದೆಹಲಿಯಲ್ಲಿ ಬೀಡು ಬಿಟ್ಟಿರುವುದು ವಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ? ಎಂದು ಬಿಜೆಪಿ ಶಾಸಕರು ಕಾಯುವಂತೆ ಮಾಡಿದೆ.

ಕಾಂಗ್ರೆಸ್ ನಾಯಕರಲ್ಲಿ ಕುತೂಹಲ ಮೂಡಿಸಿದ ಡಿಕೆಶಿ ಪ್ರವಾಸ!

ಕಾಂಗ್ರೆಸ್ ನಾಯಕರಲ್ಲಿ ಕುತೂಹಲ ಮೂಡಿಸಿದ ಡಿಕೆಶಿ ಪ್ರವಾಸ!

ನಿನ್ನೆ ಆಂಧ್ರಪ್ರದೇಶಕ್ಕೆ ತೆರಳಿ ಸಿದ್ಧಿವಿನಾಯಕ ದೇವಸ್ಥಾನಲ್ಲಿ ವಿಶೇಷ ಪೂಜೆ ಮಾಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜಸ್ಥಾನಕ್ಕೆ ತೆರಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಈ ಪ್ರವಾಸ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕುತೂಹಲ ಮೂಡಿಸಿದೆ. ಬೆಂಗಳೂರಿನಿಂದ ರಾಜಸ್ಥಾನದ ಜೈಪುರಕ್ಕೆ ವಿಶೇಷ ವಿಮಾನದಲ್ಲಿ ಡಿಕೆ ಶಿವಕುಮಾರ್ ಅವರು ತೆರಳಿದ್ದಾರೆ. ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜಸ್ಥಾನದ ಜೈಪುರದಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಜೈಪುರದಿಂದ ದೆಹಲಿಗೆ ತೆರಳಿರುವ ಡಿ.ಕೆ. ಶಿವಕುಮಾರ್ ಅಲ್ಲಿಯೇ ವಾಸ್ತವ್ಯ ಮಾಡಿದ್ದಾರೆ. ಜೊತೆಗೆ ನಾಳೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ.

ಮತ್ತೊಂದೆಡೆ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಪದ್ಮನಾಭ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರ ಮೇಲೆ ಸಿದ್ದರಾಮಯ್ಯ ಹರಿಹಾಯ್ದರು.

ಮುಖ್ಯಮಂತ್ರಿ ಬೊಮ್ಮಾಯಿ‌ ಬಗ್ಗೆ ಈಗ ಮಾತನಾಡುವುದಿಲ್ಲ

ಮುಖ್ಯಮಂತ್ರಿ ಬೊಮ್ಮಾಯಿ‌ ಬಗ್ಗೆ ಈಗ ಮಾತನಾಡುವುದಿಲ್ಲ

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬಗ್ಗೆ ಈಗ ಮಾತನಾಡುವುದಿಲ್ಲ. ಮೂರ್ನಾಲ್ಕು ತಿಂಗಳುಗಳು ಕಳೆಯಲಿ. ಆಮೇಲೆ ಅವರ ಬಗ್ಗೆ ಮಾತಾಡುತ್ತೇನೆ. ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿದ್ದು ಮಾಜಿ ಸಿಎಂ ಯಡಿಯೂರಪ್ಪ. ಹಾಗಾಗಿ ಅವರು ಎನು ಮಾಡುತ್ತಾರೆ? ಸ್ಟ್ಯಾಂಪ್ ಆಗುವುದನ್ನು ಬಿಟ್ಟು ಏನನ್ನು ಮಾಡುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಆಗದು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದ್ಮನಾಭನಗರದಲ್ಲಿ ಮಾತನಾಡಿದ್ದಾರೆ.

"ರಾಜ್ಯದಲ್ಲಿ ಬಿ.ಎಸ್.​ ಯಡಿಯೂರಪ್ಪ ಅವರಿಗೆ ವಯಸ್ಸು ಆಗಿದೆ ಎಂದು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿಲ್ಲ. ಬದಲಾಗಿ ದುಡ್ಡು ಹೊಡೆದು ಭ್ರಷ್ಟಾಚಾರ ಮಾಡಿದ್ದಾರೆ ಅಂತಾ ಸಿಎಂ ಹುದ್ದೆಯಿಂದ ಇಳಿಸಿದ್ದಾರೆ. ಅಪ್ಪ-ಮಗ ಜೋಡಿ ಲೂಟಿ ಮಾಡಿದರು. ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ತೆಗೆದರು" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಎಚ್‌ಡಿಡಿ

ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ಎಚ್‌ಡಿಡಿ

ಮತ್ತೊಂದೆಡೆ ಇಂದು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿನ ಚನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲಗೂಡು-ಮಡಿಕೇರಿ-ಮಾರ್ಕೋಟ-ಕೇರಳ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಯಾಗಿ ಮೇಲ್ದರ್ಜೆಗೆ ಏರಿಸಲು ಅವರು ಮನವಿ ಮಾಡಿದ್ದಾರೆ.

ಜೊತೆಗೆ ಮೇಲ್ದರ್ಜೆಗೆ ಏರಿಸಿ ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲು ಅನುಮೋದನೆ ನೀಡುವಂತೆ ದೇವೇಗೌಡರು ಮನವಿ ಮಾಡಿದ್ದಾರೆ. ಜೊತೆಗೆ ಮಂಡ್ಯ ಜಿಲ್ಲೆಯ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಹೊಳೆನರಸೀಪುರ ತಾಲ್ಲೂಕಿನ ಯಡಗೋಡನಹಳ್ಳಿ ಬಿಳಿಕೆರೆ ಮತ್ತು ಹಾಸನ ಬೇಲೂರು ಎರಡು ಪಥದ ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಯಾಗಿ ಟೆಂಡರ್ ಕರೆಯಲು ಅನುಮೋದನೆ ನೀಡುವಂತೆಯೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟೆಂಡರ್ ಕೆರಯಲು ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಭೇಟಿ ಸಂದರ್ಭದಲ್ಲಿ ಮಂಡ್ಯ ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಹೆಚ್.ಡಿ. ರೇವಣ್ಣ, ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಇದ್ದರು.

Recommended Video

ಮಗಳು ಹಾಗೂ ತಾಯಿಯ ಬಗ್ಗೆ ಮನ ಬಿಚ್ಚಿ ಮಾತಾಡಿದ ವಿರಾಟ್ | Oneindia Kannada
ರಾಜ್ಯ ಸರ್ಕಾರದ ಮೇಲೆ ವಿಧಾನ ಪರಿಷತ್ ಸದಸ್ಯರು ಗರಂ

ರಾಜ್ಯ ಸರ್ಕಾರದ ಮೇಲೆ ವಿಧಾನ ಪರಿಷತ್ ಸದಸ್ಯರು ಗರಂ

ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ಮಂಜೂರಾಗುವ ಅನುದಾನ ತಾರತಮ್ಯ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರು ಸಿಡಿದೆದ್ದಿದ್ದಾರೆ. ಹೀಗಾಗಿ ಎಲ್ಲಾ ಪಕ್ಷಗಳ ಪರಿಷತ್ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಭೆ ನಡೆದಿರುವುದು ಮತ್ತೊಂದು ವಿಶೇಷ.

ರಾಜ್ಯ ವಿಧಾನ ಪರಿಷತ್ ಸದಸ್ಯರು ಪಕ್ಷಬೇದ ಮರೆತು ರಾಜ್ಯ ಸರ್ಕಾರದ ಮೇಲೆ ಗರಂ ಆಗಿರುವುದು ರಾಜ್ಯದಲ್ಲಿ ನಡೆದಿದೆ. ವಿಧಾನಸೌಧದಲ್ಲಿ ಸಭೆ ಸೇರಿದ್ದ ವಿಧಾನ ಪರಿಷತ್ ಸದಸ್ಯರು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರೂ ಸರ್ಕಾರದ ಮೇಲೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ವ್ಯಕ್ತಪಡಿಸಿದ ಭಾವನೆಗಳು ನಿಜಕ್ಕೂ ಆಶ್ಚರ್ಯ ಮೂಡಿಸಿವೆ. ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೇರಿದ ಸದಸ್ಯರು ಮಾತ್ರವಲ್ಲ, ಬಿಜೆಪಿ ಸದಸ್ಯರೂ ಅದಕ್ಕೆ ದನಿಗೂಡಿಸಿದ್ದು ಗಮನ ಸೆಳೆಯಿತು.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ಎಸ್. ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ನಾರಾಯಣಸ್ವಾಮಿ, ಹರೀಶ್ ಕುಮಾರ್, ವೀಣಾ ಅಚ್ಚಯ್ಯ, ಪ್ರಕಾಶ್ ರಾಥೋಡ್, ಆರ್. ಬಿ. ತಿಮ್ಮಾಪೂರ, ಎಸ್. ರವಿ, ಕೆ. ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಬಿಜೆಪಿಯ ಎನ್. ರವಿಕುಮಾರ್, ಶಾಂತಾರಾಂ ಸಿದ್ದಿ, ಪ್ರಾಣೇಶ್ ಹಾಗೂ ಜೆಡಿಎಸ್ ಪಕ್ಷದ ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಕಾಂತರಾಜು ಸೇರಿ‌ದಂತೆ ಹಲವು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಇವು ಕರ್ನಾಟಕದ ರಾಜಕೀಯಕ್ಕೆ ಸಂಬಂಧಿಸಿದಂತೆ ಇಂದು ನಡೆದಿರುವ ಪ್ರಮುಖ ಬೆಳವಣಿಗೆಗಳು. ಜೊತೆಗೆ ನಾಳೆಯೇ ರಾಜ್ಯ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಅನುಮತಿ ಕೊಟ್ಟಿದೆ ಎಂಬ ಬ್ರೇಕಿಂಗ್ ನ್ಯೂಸ್ ಇದೀಗ ಬಂದಿದೆ. ಇನ್ನು ಹೆಚ್ಚಿನ ಮಾಹಿತಿ ಆ ಬಗ್ಗೆ ಬರಬೇಕಿದೆ. ಒಟ್ಟಾರೆ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ನಾಳೆ ವಿಸ್ತರಣೆ ಆಗುವುದು ಖಚಿತವಾಗಿದೆ.

English summary
Karnataka Political News Roundup (3rd August 2021): Today's News on the latest Karnataka politics-Stay informed about the recent political developments in Karnataka today. For all the latest Karnataka politics news, follow Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X