ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಜುಲೈ 31ರ ರಾಜಕೀಯ ಬೆಳವಣಿಗೆಗಳ ಕುರಿತು ಒಂದು ಸಮಗ್ರ ವರದಿ!

|
Google Oneindia Kannada News

ಬೆಂಗಳೂರು, ಜು. 31: ಸಂಪುಟ ರಚನೆ ಕಸರತ್ತು ಇಂದೂ ಕೂಡ ರಾಜ್ಯ ಬಿಜೆಪಿಯಲ್ಲಿ ಮುಂದುವರೆದಿದೆ. ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಮಾಹಾತ್ಮಾ ಗಾಂಧಿ ಹಾಗೂ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಗಳಿಗೆ ಭೇಟಿ ಕೊಟ್ಟು ನಮನ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ಮೈಸೂರಿನಲ್ಲಿ ಕಾಂಗ್ರೆಸ್ ವಿಭಾಗ ಮಟ್ಟದ ಸಭೆ ಮಾಡಿದ್ದಾರೆ. ಜೊತೆಗೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಕುಮಾರಸ್ವಾಮಿ ಅವರು ಬೆಂಗಳೂರಿನ ದಾಸರಹಳ್ಳಿಯಲ್ಲಿ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಿಂದ ನೊಂದ ರೈತರೊಂದಿಗೆ 'ಸಾಂತ್ವನ ಸಭೆ' ಮಾಡಿದ್ದಾರೆ. ಜೊತೆಗೆ ಕೊರೊನಾ ವೈರಸ್ ಆತಂಕ ಹೆಚ್ಚಾಗುತ್ತಿರುವುದನ್ನು ಹೇಳಿದ್ದಾರೆ.

ಸಂಪುಟ ರಚನೆ ಮಾಡುವ ಉಮೇದಿನೊಂದಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರಿಗೈಲಿ ವಾಪಾಸಾಗಿದ್ದಾರೆ. ಒಂದೆಡೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾತ್ತಿದೆ. ಮತ್ತೊಂದೆಡೆ ಪ್ರವಾಹ ಸ್ಥಿತಿ ಎದುರಿಸಿದ್ದ ಜಿಲ್ಲೆಗಳಲ್ಲಿ ಪರಿಹಾರರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಆದರೆ ಏಕವ್ಯಕ್ತಿ ಸಂಪುಟದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಬ್ಬರೆ ಎಲ್ಲವನ್ನು ನಿಭಾಯಿಸಬೇಕಾಗಿದೆ.

ಇದೇ ವಿಚಾರಗಳನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಎತ್ತಿದ್ದಾರೆ. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಹಾಗೂ ಪ್ರವಾಹ ಸಂಕಷ್ಟವಿರುವಾಗ ಬಿಜೆಪಿ ಸಂಪುಟ ರಚನೆ ಮಾಡದೇ ಜನರಿಗೆ ಮತ್ತಷ್ಟು ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ಇಂದಿನ ಕರ್ನಾಟಕದ ರಾಜಕೀಯ ಸುದ್ದಿಗಳ ಕುರಿತು ಸಣ್ಣದೊಂದು ಚಿತ್ರಣ ನಿಮ್ಮೆದುರಿಗೆ ಮುಂದಿದೆ.

ಎರಡು ದಿನಗಳ ಬಳಿಕ ಬರಿಗೈಲಿ ವಾಪಸ್

ಎರಡು ದಿನಗಳ ಬಳಿಕ ಬರಿಗೈಲಿ ವಾಪಸ್

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಅದಕ್ಕೂ ಮೊದಲು ದೆಹಲಿಯಲ್ಲಿ ರಾಜಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹಾಗೂ ರಾಷ್ಟ್ರೀಯ ಸ್ಮ್ರಿತಿಯಲ್ಲಿರುವ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗಳಿಗೆ ಬೇಟಿ ನೀಡಿ ನಮನ ಸಲ್ಲಿಸಿದರು.

ಅದಾದ ಬಳಿಕ ಕೇಂದ್ರದ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. ಪ್ರಮುಖವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಪರಿಹಾರ ಬಿಡುಗಡೆ ಹಾಗೂ ಕೇಂದ್ರದ ಅನುದಾನಗಳ ಯೋಜನೆಗಳ ಅನುದಾನ ಬಿಡುಗಡೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದ್ದಾರೆ.

ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದರು. ಅದರಲ್ಲಿಯೂ ಪ್ರಮುಖವಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವುದನ್ನು ಕೇಂದ್ರ ಆರೋಗ್ಯ ಸಚಿವರೊಂದಿಗೆ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ.

ಜೊತೆಗೆ ಮೇಕೆದಾಟು ಯೋಜನೆ ಕುರಿತಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಹೇಳಿಕೆ ತಿರುಗೇಟು ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಿಂದ ಬಂದ ತಕ್ಷಣ ಸಭೆಯಲ್ಲಿ ಭಾಗಿ

ದೆಹಲಿಯಿಂದ ಬಂದ ತಕ್ಷಣ ಸಭೆಯಲ್ಲಿ ಭಾಗಿ

ದೆಹಲಿಯಿಂದ ಹಿಂದಿರುಗಿದ ತಕ್ಷಣ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಡಿಯೊ ಸಂವಾದ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಸಮ್ಮತಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ 1.5 ಕೋಟಿ ಲಸಿಕೆ ಪೂರೈಸಲು ಕೋರಿಕೆ ಸಲ್ಲಿಸಿದ್ದು, 1 ಕೋಟಿ ಲಸಿಕೆ ಪೂರೈಸುವ ಭರವಸೆಯನ್ನು ಕೇಂದ್ರ ಆರೋಗ್ಯ ಸಚಿವರು ಕೊಟ್ಟಿದ್ದಾರೆ. ಅದರಿಂದ ರಾಜ್ಯದಲ್ಲಿ ಪ್ರತಿದಿನ 2 ರಿಂದ 3 ಲಕ್ಷ ಲಸಿಕೆ ಒದಗಿಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಕಾಂಗ್ರೆಸ್ ಮೈಸೂರು ವಿಭಾಗೀಯ ಮಟ್ಟದ ಸಭೆ

ಕಾಂಗ್ರೆಸ್ ಮೈಸೂರು ವಿಭಾಗೀಯ ಮಟ್ಟದ ಸಭೆ

ಮುಂದಿನ ವಿಧಾನ ಸಭಾ ಚುನಾವಣೆ ತಯಾರಿ ನಡೆಸಿದರುವ ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆ, ಬಲವರ್ಧನೆ ಕುರಿತು ಮೈಸೂರಿನಲ್ಲಿ ವಿಭಾಗೀಯ ಮಟ್ಟದ ಸಬೆ ನಡೆಸಿದ್ದಾರೆ. ನಾನಾ ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಜೊತೆಗೆ ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ನಾಯಕರು ಸಚಿವ ಸ್ಥಾನ ಪಡೆಯಲು ಲಾಬಿ ಮಾಡುತ್ತಿದ್ದಾರೆಯೇ ಹೊರತು, ಯಾರೊಬ್ಬರೂ ನೆರೆ ಪೀಡಿತರ ನೆರವಿಗೆ ಧಾವಿಸಿಲ್ಲ. ಕಳೆದ ಒಂದೂವರೆ ವರ್ಷದಿಂದ ಇದೇ ಪರದಾಟ ಮುಂದುವರಿದಿದೆ. ರಾಜ್ಯದ ಜನ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ಔಷಧಿ ಸಿಗದೆ ಒದ್ದಾಡುತ್ತಿದ್ದಾರೆ, ಸಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ. ಜೊತೆಗೆ ಜೆಡಿಎಸ್ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಸಾಂತ್ವನ ಸಭೆ ನಡೆಸಿದ್ದಾರೆ.

Recommended Video

ಟೀಮ್ ಇಂಡಿಯಾ ಕಳಪೆ ಆಟಕ್ಕೆ ಫುಲ್‌ ಗರಂ ಆದ ವೀರೇಂದ್ರ ಸೆಹ್ವಾಗ್ | Oneindia Kannada
ಜೆಡಿಎಸ್ ಸಾಂತ್ವನ ಸಭೆ

ಜೆಡಿಎಸ್ ಸಾಂತ್ವನ ಸಭೆ

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಅವರೊಂದಿಗೆ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಿಂದ ನೊಂದಿರುವ ರೈತರು ಮತ್ತು ನಿವೇಶನದಾರರೊಂದಿಗೆ ಸೋಮಶೆಟ್ಟಿಹಳ್ಳಿ ಓಪನ್ ಮೈದಾನದಲ್ಲಿ 'ಸಾಂತ್ವನ ಸಭೆ' ಯಲ್ಲಿ ಭಾಗವಹಿಸಿ ಧೈರ್ಯ ತುಂಬಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಆಗಸ್ಟ್ ಮೊದಲ ಹಾಗೂ ಎರಡನೇ ವಾರದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತದೆ ಎಂಬ ವರದಿಗಳಿವೆ. ಮತ್ತೊಂದು ಕಡೆ ಪ್ರವಾಹದ ಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಜಿಲ್ಲಾ ಕೇಂದ್ರದಿಂದ ಕೆಲಸ ಮಾಡುವಂತೆ ತಿಳಿ ಹೇಳಬೇಕು. ಜೊತೆಗೆ ಗಡಿಗಳಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಜೊತೆಗೆ ಮಂತ್ರಿ ಮಂಡಲ ರಚನೆ ವಿಳಂಬ ಕುರಿತು ಕುಮಾರಸ್ವಾಮಿ ಅವರು ಮಾತನಾಡಿದ್ದು, ಜನಸಾಮಾನ್ಯರು ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿಗಳನ್ನು ಭೇಟಿ ಆಗಲು ಸಾದ್ಯವಾಗ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಗೃಹ ಕಚೇರಿ ಕೃಷ್ಣಾದಲ್ಲಿ ಜನಸಾಮಾನ್ಯರ ಸಮಸ್ಯೆ ಕೇಳ್ತಿದ್ದೆ. ಈಗ ಆ ಪರಿಸ್ಥಿತಿ ಇಲ್ಲ. ಅರವಿಂದ ಬೆಲ್ಲದ್ ಸಿಎಂ ಆಗಿ ಆಯ್ಕೆ ಆಗುತ್ತೇನೆ ಎಂಬ ನಿರೀಕ್ಷೆಯಲ್ಲಿ ಇದ್ದರು. ಕಳೆದ ಎರಡು ತಿಂಗಳಲ್ಲಿ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರ ಗಳ ಫೈಲ್ ಗಳನ್ನು ತರಿಸಿಕೊಂಡಿದ್ರಂತೆ. ಇನ್ನೇನು ಮುಖ್ಯಮಂತ್ರಿ ಆಗಿಯೇ ಬಿಡ್ತೀನಿ ಅಂತಾ ಬೆಲ್ಲದ್ ಈ ರೀತಿ ಮಾಡಿದ್ರಂತೆ. ಇದನ್ನು ನೋಡಿದ್ರೆ ಬಿಜೆಪಿಯಲ್ಲಿ ಅವರವಲ್ಲಿಯೇ ಸಮನ್ವಯತೆ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟಾರೆ ಮೂರು ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಆಗಿವೆ. ಇನ್ನು ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಮತ್ತೆ ದೆಹಲಿಗೆ ತೆರಳಲಿದ್ದಾರೆ ಎಂಬ ಮಾಹಿತಿಯಿದೆ.

English summary
Karnataka Political News Roundup ( 31st July 2021): Today's News on the latest Karnataka politics-Stay informed about the recent political developments in Karnataka today. For all the latest Karnataka politics news, follow Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X