ಗೃಹಿಣಿಯರು 'ದೇಶ ನಿರ್ಮಾಪಕರು' ಎಂದ ಸುಪ್ರೀಂ ಕೋರ್ಟ್: ಮಹತ್ವದ ತೀರ್ಪು ಪ್ರಕಟ
ನವದೆಹಲಿ: ದೇಶದ ಕೋಟ್ಯಾಂತರ ಗೃಹಿಣಿಯರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಗೃಹಿಣಿಯರನ್ನು 'ದೇಶ ನಿರ್ಮಾಪಕರು' ಎಂದು ಗುರುತಿಸಬೇಕಾದ ಅಗತ್ಯವಿದೆ. ಮನೆ, ಮಕ್ಕಳು, ಕುಟುಂಬ, ಕೆಲಸ ಆರೋಗ್ಯ ಹೀಗೆ ಎಲ್ಲ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸುವ ಗೃಹಿಣಿಯರ ಸೇವೆಗೆ ತಕ್ಕ ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಗೃಹಿಣಿಯರು ಮನೆಯಲ್ಲಿ ಒದಗಿಸುವ ಸೇವೆಗಳನ್ನು ವಿಶೇಷ ನಷ್ಟದ ಆಧಾರದಲ್ಲೇ ಪರಿಗಣಿಸಬೇಕು ಎಂಬುದನ್ನು ನ್ಯಾಯಾಲಯವು ತಿಳಿಸಿದೆ.
ಮೋಟಾರು ವಾಹನ ಕಾಯ್ದೆಯಡಿ (MV Act) ಸಲ್ಲಿಕೆಯಾಗಿದ್ದ ಅಪಘಾತ ಪರಿಹಾರ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ವಾದ ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿ ಆದೇಶಿಸಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್. ಕೋಟೇಶ್ವರ ಸಿಂಗ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಅಪಘಾತದಲ್ಲಿ ಗೃಹಿಣಿಯೊಬ್ಬರು ಮೃತಪಟ್ಟಾಗ ಅಥವಾ ಗಾಯಗೊಂಡಾಗ ಅವರು ನೀಡುತ್ತಿದ್ದ 'ಗೃಹ ನಿರ್ವಹಣೆ' ಸೇವೆಗಳನ್ನು ಪರಿಹಾರದ ಮೊತ್ತವಾಗಿ ಲೆಕ್ಕಾಚಾರ ಮಾಡುವಾಗ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ತಿಳಿಸಿದೆ. ಈ ಮೂಲಕ ಗೃಹಿಣಿ ಸೇವೆಯನ್ನು ದೇಶದ ಉನ್ನತ ನ್ಯಾಯಾಲಯ ಗೌರವಿಸಿದೆ.

ದೈನಂದಿನ ಜೀವನದಲ್ಲಿ ಗೃಹಿಣಿಯರು ನೀಡುವ ಸೇವೆಗೆ ಬೆಲೆ ಕಟ್ಟಲಾಗದು. ಅವರ ಸೇವೆಯನ್ನು ಹಣದಿಂದ ಅಳೆಯಲಾಗದು. ಮಹಿಳೆಯರ ಕಾರ್ಯಗಳು ದೇಶದ ಅಭಿವೃದ್ಧಿಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ ಇನ್ನು ಮುಂದೆ ಅವರನ್ನು ಕೇವಲ 'ಗೃಹಿಣಿ' ಎಂದು ಕರೆಯುವ ಬದಲು 'ದೇಶ ನಿರ್ಮಾಪಕರು' (Nation Builder) ಕರೆಯುವ ಮೂಲಕ ಮನ್ನಣೆ ನೀಡಬೇಕು ಎಂದು ನ್ಯಾಯಪೀಠ ಬಲವಾಗಿ ಪ್ರತಿಪಾದಿಸಿದೆ.
ಗೃಹಿಣಿಯರ ಪರಿಶ್ರಮ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಅವರ ಸೇವೆ ವ್ಯಕ್ತಿಗಳ ಬೆಳವಣಿಗೆ, ದೇಶದ ಅಭಿವೃದ್ಧಿ, ಪ್ರಗತಿಗೆ ಅಗಾಧವಾದ ಕೊಡುಗೆ ನೀಡುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಸಿಕ 30,000 ರೂ.ನಂತೆ ಪರಿಹಾರ...
ಇನ್ನು ಮುಂದೆ ಸುಪ್ರೀಂ ಕೋಟ್ ತೀರ್ಪಿನ ಮಾರ್ಗಸೂಚಿಗಳ ಜೊತೆಗೆ, ಗೃಹಿಣಿಯರು ನಿರ್ವಹಿಸುವ ಗೃಹ ಸೇವೆಯ ನಷ್ಟವನ್ನೂ ಸಹ ಅವರಿಗೆ ನೀಡಬೇಕಾದ ಪರಿಹಾರದ ಮೊತ್ತದಲ್ಲಿ ಸೇರಿಸಿ ಒದಗಿಸುಂತೆ ನ್ಯಾಯಾಲಯ ಆದೇಶದ ಮೂಲಕ ನಿರ್ದೇಶಿಸಿದೆ. ಗೃಹ ನಿರ್ವಹಣೆಯ ಸೇವೆಯ ನಷ್ಟವನ್ನು ಮಾಸಿಕ ಆದಾಯದ ರೂಪದಲ್ಲಿ ಪರಿಗಣಿಸಬೇಕು. ಅದಕ್ಕೆ ತಿಂಗಳಿಗೆ 30,000 ರೂಪಾಯಿಗಳ ಪರಿಹಾರವನ್ನು ನಿಗದಿಪಡಿಸುವಂತೆ ಸೂಚಿಸಿ ನ್ಯಾಯಪೀಠ ಆದೇಶಿಸಿತು. ಇದು ಲಭ್ಯವಿರುವ ಪರಿಹಾರ ನಿಯಮಗಳಿಗೆ ಹೊಸದಾಗಿ ಸೇರ್ಪಡೆಯಾಗುವ ಅಂಶವಾಗಿದೆ ಎಂದು ಹೇಳಲಾಗಿದೆ.
ಪ್ರಕರಣ ಹಿನ್ನೆಲೆ ಏನು?
2024ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪ್ರಕರಣದ ವಿಚಾರಣೆ ಬಳಿಕ ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಿಂದ ಈ ಮಹತ್ವದ ತೀರ್ಪು ಹೊರಬಿದ್ದಿದೆ. 2001ರಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅಂದು ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು, ಮೃತಳ ಕುಟುಂಬಕ್ಕೆ ಸುಮಾರು ಎಂಟು ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿತ್ತು. ಈ ಪ್ರಕರಣದಲ್ಲಿ ಕಾನೂನಾತ್ಮಕ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಸುಪ್ರೀಂ ಕೋರ್ಟ್ ಈ ನಿರ್ಧಾರ ಪ್ರಕಟಿಸುವ ಜೊತೆಗೆ ಮಹಿಳೆಯರು/ಗೃಹಿಣಿಯರ ಸೇವೆಯನ್ನು ಆಧರದಿಂದ ಗೌರವಿಸಿದೆ.
ಸುಪ್ರೀಂ ಕೋರ್ಟ್ ಆದೇಶ ಸ್ವಾಗತಿಸಿದ ಮಹಿಳೆಯರು
ಮಹಿಳೆಯರು ಮಗಳಾಗಿ, ಸತಿಯಾಗಿ, ತಾಯಿಯಾಗಿ ಮಾತ್ರವಲ್ಲದೇ ಸಮಾಜದ ವಿವಿಧ ರಂಗಗಳಲ್ಲಿ ಗಂಡಿಗೆ ಸರಿಸಮವಾಗಿ ಕಾರ್ಯ ನಿರ್ವಹಿಸುತ್ತಾಳೆ. ಇಡೀ ಕುಟುಂಬವೇ ಆಕೆಯ ಮೇಲೆ ನಿಂತಿರುತ್ತದೆ. ಆಕೆಯನ್ನು ಅದೆಷ್ಟೋ ಮಂದಿ ಕೇವಲ ನಾಲ್ಕು ಗೋಡೆಗಳ ಮಧ್ಯೆ, ಅಡುಗೆ ಕೋಣೆಗೆ ಸಿಮೀತವಾಗಿಸಿ ಬಿಟ್ಟಿರುತ್ತಾರೆ. ಇಂದಿನ ದಿನಮಾನಗಳಲ್ಲಿ ಬಾಹ್ಯಾಕಾಶ ವಲಯದಲ್ಲಿ ಮಹಿಳೆಯರು ಸಾಧನೆ ಮಾಡಿ ತೋರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಂತಹ ಮಹಿಳೆಯನ್ನು, ಅವರ ಸೇವೆಯನ್ನು ಅತ್ಯಂತ ಗೌರವದಿಂದ ಕಾಣುವಂತೆ ನ್ಯಾಯಾಲವೇ ತಿಳಿಸಿದ್ದನ್ನು ದೇಶವ್ಯಾಪಿ ಮಹಿಳೆಯರು ಸ್ವಾಗತಿಸಿದ್ದಾರೆ.













Click it and Unblock the Notifications