Anvay Dravid: ಭಾರತ ಅಂಡರ್-19 ಏಕದಿನ ತಂಡದಲ್ಲಿ ಸ್ಥಾನ ಪಡೆದ ರಾಹುಲ್ ದ್ರಾವಿಡ್ ಪುತ್ರ
Anvay Dravid: ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ ಅಂಡರ್-19 ತಂಡವನ್ನು ಪ್ರಕಟಿಸಿಲಾಗಿದೆ. ಇದರಲ್ಲಿ ಭಾರತೀಯ ಕ್ರಿಕೆಟ್‌ನ ದಂತಕಥೆ, ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರು ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ಪ್ರವಾಸದ ಸರಣಿಗಾಗಿ ಎಸ್.ಶರತ್ ನೇತೃತ್ವದ ಭಾರತ ಜೂನಿಯರ್ ಆಯ್ಕೆ ಸಮಿತಿಯು ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಯುವ ಭಾರತ ತಂಡವು ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಏಕದಿನ ತಂಡಕ್ಕೆ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರು ಆಯ್ಕೆ ಆಗಿದ್ದಾರೆ.

ಏಕದಿನ ತಂಡಕ್ಕೆ ಅನ್ವಯ್ ದ್ರಾವಿಡ್ ಆಯ್ಕೆ
ಆಯ್ಕೆ ಸಮಿತಿಯು ಎರಡೂ ಮಾದರಿಯ ತಂಡಗಳಿಗೆ ಮಧ್ಯಪ್ರದೇಶದ ಯಶ್‌ವರ್ಧನ್ ಸಿಂಗ್ ಚೌಹಾಣ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದ್ದು, ಲಕ್ಷ್ಯ ರೈಚಂದಾನಿ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಆದರೆ, ಅನ್ವಯ್ ದ್ರಾವಿಡ್ ಕೇವಲ ಏಕದಿನ ಸರಣಿಗೆ ಮಾತ್ರ ಆಯ್ಕೆ ಆಗಿದ್ದಾರೆ. ಏಕದಿನ ಸರಣಿಯಲ್ಲಿ ರಜತ್ ಬಘೇಲ್ ಅವರೊಂದಿಗೆ ಅನ್ವಯ್ ದ್ರಾವಿಡ್ ಎರಡನೇ ವಿಕೆಟ್ ಕೀಪರ್ ಆಯ್ಕೆಯಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಟೆಸ್ಟ್ ಸರಣಿಗಾಗಿ ಮಾನವ್ ಕೃಷ್ಣ ಮತ್ತು ಆರ್ಯನ್ ಸಂದೇಶ್ ಸಾಕ್ಪಾಲ್ ಅವರನ್ನು ವಿಕೆಟ್ ಕೀಪರ್‌ಗಳಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮಿಂಚಿದ ಅನ್ವಯ್ ದ್ರಾವಿಡ್
17 ವರ್ಷದ ಯುವ ಆಟಗಾರ ಅನ್ವಯ್ ದ್ರಾವಿಡ್ ಅವರು ದೇಶಿಯ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ನಡೆದ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-19 ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅವರು, ತಂಡವನ್ನು ಕ್ವಾರ್ಟರ್‌ಫೈನಲ್ ಹಂತಕ್ಕೆ ತಲುಪಿಸಿದ್ದರು. ಆ ಟೂರ್ನಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಅನ್ವಯ್ 6 ಪಂದ್ಯಗಳಿಂದ ಒಟ್ಟು 220 ರನ್ ಕಲೆಹಾಕಿ ಗಮನ ಸೆಳೆದಿದ್ದರು.
ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದ್ದ ಭಾರತ 'ಎ' ಮತ್ತು ಅಫ್ಘಾನಿಸ್ತಾನ ಅಂಡರ್-19 ತಂಡಗಳ ನಡುವಿನ ತ್ರಿಕೋನ ಸರಣಿಯಲ್ಲಿ ಅವರು ಭಾರತ ಅಂಡರ್-19 'ಬಿ' ತಂಡದ ಪರವಾಗಿ ಆಡಿದ್ದರು. ನಂತರ ದೇಶೀಯ ಟೂರ್ನಿಗಳಲ್ಲಿ ತೋರಿದ ಸ್ಥಿರ ಪ್ರದರ್ಶನದ ಫಲವಾಗಿ ಅಂಡರ್-19 ಒನ್-ಡೇ ಚಾಲೆಂಜರ್ ಟ್ರೋಫಿಯ 'ಸಿ' ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಅಂಡರ್-19 ಏಕದಿನ, ಟೆಸ್ಟ್ ತಂಡ
ಭಾರತ ಅಂಡರ್-19 ಏಕದಿನ ತಂಡ: ಸಾಗರ್ ವಿರ್ಕ್, ಯಶ್‌ವರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರೈಚಂದಾನಿ (ಉಪನಾಯಕ), ವಿನೀತ್ ವಿ.ಕೆ, ಅರ್ಜುನ್ ರಜಪೂತ್, ಕುಶಾಗ್ರ ಓಜಾ, ರಜತ್ ಬಘೇಲ್ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಅನ್ಮೋಲ್‌ಜೀತ್ ಸಿಂಗ್, ವುತ್ಕುರಿ ಯಶ್‌ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶಾವಿನ್ ವಿ, ಕಾವ್ಯ ಪರೇಶ್ ಪಟೇಲ್, ಇಶಾನ್ ಸೂದ್, ಮೋಹಿತ್ ಉಲ್ವಾ.
ಭಾರತ ಅಂಡರ್-19 ಟೆಸ್ಟ್ ತಂಡ: ಸಾಗರ್ ವಿರ್ಕ್, ಯಶ್‌ವರ್ಧನ್ ಸಿಂಗ್ ಚೌಹಾಣ್ (ನಾಯಕ), ಲಕ್ಷ್ಯ ರೈಚಂದಾನಿ (ಉಪನಾಯಕ), ಪಟೇಲ್ ಕುಶ್, ಮನಲ್ ಚೌಹಾಣ್, ಕುಶಾಗ್ರ ಓಜಾ, ಮಾನವ್ ಕೃಷ್ಣ (ವಿಕೆಟ್ ಕೀಪರ್), ಆರ್ಯನ್ ಸಂದೇಶ್ ಸಾಕ್ಪಾಲ್ (ವಿಕೆಟ್ ಕೀಪರ್), ಹೇಮಚೂಡೇಶನ್ ಜೆ, ಚಿಗುರುಪಾಟಿ ವೆಂಕಟ, ಬಿ.ಕೆ. ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯ ಪರೇಶ್ ಪಟೇಲ್, ಪ್ರಿಯಾಂಶು ಸಿಂಗ್, ಪ್ರಣವ್ ರಾಘವೇಂದ್ರ.












Click it and Unblock the Notifications