ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ಸೇವೆಯಲ್ಲಿ ವ್ಯತ್ಯಯ, ಪ್ರಯಾಣಿಕರೇ ಗಮನಿಸಿ: BMRCL
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ನಾಗಿಕರು ಸಂಚಾರಕ್ಕೆ ಹೆಚ್ಚಾಗಿ ಅವಲಂಬಿಸಿರುವ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಸಹ ಒಂದು. ಟೋಕನ್, ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ (NCMC) ಸ್ಮಾರ್ಟ್ ಕಾರ್ಡ್, ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ನಿತ್ಯ ಲಕ್ಷಾಂತರ ಮಂದಿ ಸಂಚಾರ ಮಾಡುತ್ತಾರೆ. ಆದರೆ ಇಂದು ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ 'ಎನ್‌ಸಿಎಂಸಿ ಕಾರ್ಡ್ ಟಾಪ್-ಅಪ್' ಅಥವಾ 'ರೀಚಾರ್ಜ್ ಸೌಲಭ್ಯ'ದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಅಧಿಕೃತ ಮಾಹಿತಿ ನೀಡಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ನಮ್ಮ ಮೆಟ್ರೋ ಅಧಿಕಾರಿಗಳು, 'ಅನಿರೀಕ್ಷಿತ ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ (NCMC) ಗಳ ಟಾಪ್-ಅಪ್/ರೀಚಾರ್ಜ್ ಸೌಲಭ್ಯವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸೇವೆಯನ್ನು ಶೀಘ್ರದಲ್ಲೇ ಪುನಃ ಆರಂಬಿಸಲು ಆದ್ಯತೆಯ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದು ಭರವಸೆ ನೀಡಿದ್ದಾರೆ.

ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಯಾವುದು?
ತಾಂತ್ರಿಕ ಲೋಪದೋಷಗಳಿಂದಾಗಿ ಎನ್‌ಸಿಎಂಸಿ ಕಾರ್ಡ್ ರೀಚಾರ್ಜ್ ಸೇವೆಯಲ್ಲಿ ಅಡಚಣೆ ಉಂಟಾಗಿದೆ. ಸ್ಮಾರ್ಟ್ ಕಾರ್ಡ್ ಬಳಸುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ನೋಡಿಕೊಂಡು ಯೋಜಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಅಥವಾ ಬಳಸಲು ಸಾಧ್ಯವಾಗದಿದ್ದಲ್ಲಿ, ಪ್ರಯಾಣಿಕರು ಯಾವುದೇ ತೊಂದರೆ ತಪ್ಪಿಸಲು ಕ್ಯೂಆರ್ ಟಿಕೆಟ್‌ಗಳು ಅಥವಾ ಟೋಕನ್‌ಗಳನ್ನು ಖರೀದಿಸಿ ಪ್ರಯಾಣಿಸುವಂತೆ ವಿನಂತಿಸಿಕೊಂಡಿದ್ದಾರೆ.
ಈ ತಾತ್ಕಾಲಿಕ ಅನಾನೂಕೂತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವಿಷಾದ ವ್ಯಕ್ತಪಡಿಸುತ್ತದೆ. ಪ್ರಯಾಣಿಕರ ಸಹನೆ, ಸಹಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಸದರಿ ಸೇವೆಯು ಶೀಘ್ರವೇ ಮೊದಲಿನಂತೆ ಸೇವೆಗೆ ಬರುವಂತೆ ಕ್ರಮವಹಿಸಿದ್ದೇವೆ. ರೀಚಾರ್ಜ್ ಸೇವೆ ಸಂಪೂರ್ಣವಾಗಿ ಯಾತಸ್ಥಿತಿಗೆ ಬಂದಕೂಡಲೇ ಮಾಹಿತಿ ನೀಡುವುದಾಗಿ ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.
Temporary Disruption in NCMC Top-Up/Recharge Facility. ಎನ್‌ಸಿಎಂಸಿ ಕಾರ್ಡ್ ಟಾಪ್-ಅಪ್/ರೀಚಾರ್ಜ್ ಸೌಲಭ್ಯದಲ್ಲಿ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಿಗಳಿಗೆ ಮಾಧ್ಯಮ ಪ್ರಕಟಣೆ ವೀಕ್ಷಿಸಿ. pic.twitter.com/ujluSBmtTw
— ನಮ್ಮ ಮೆಟ್ರೋ (@OfficialBMRCL) June 11, 2026
ನಮ್ಮ ಮೆಟ್ರೋ ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ರೈಲುಗಳು ವರ್ಷಗಳಿಂದ ಸೇವೆ ನೀಡುತ್ತಿವೆ. ಒಟ್ಟಾರೆ 55ಕ್ಕೂ ಹೆಚ್ಚು ರೈಲುಗಳು ನಿತ್ಯ ಸೇವೆ ನೀಡುತ್ತಿವೆ. 2025ರ ಆಗಸ್ಟ್ 10ರಂದು ಲೋಕಾರ್ಪಣೆಗೊಂಡ ಮೂರನೇ ಮಾರ್ಗದ (ಹಳದಿ ಮಾರ್ಗ) ಡ್ರೈವರ್ ಲೆಸ್ ರೈಲುಗಳಲ್ಲೂ ಒಂದೆರಡು ಬಾರಿ ತಾಂತ್ರಿಕ ದೋಷಗಳು ಕಂಡು ಬಂದಿತ್ತು. ಆಗಲೂ ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಓಡಾಡುವ ನೂರಾರು ಪ್ರಯಾಣಿಕರು ಕೆಲ ಕಾಲ ತಾತ್ಕಾಲಿಕ ಸಂಚಾರ ತೊಂದರೆ ಎದುರಿಸಿದ್ದರು.
ಇನ್ನೂ ಮಳೆ ಗಾಳಿ ಬಂದಾಗ ಮರದ ಕೊಂಬೆಗಳು ಬಿದ್ದು, ಟ್ರ್ಯಾಕ್ ಮೇಲೆ ರೈಲು ಸಂಚಾರವಾಗದೇ ಸಮಸ್ಯೆ ಉಂಟಾದ ಉದಾಹರಣೆಗಳು ಸಾಕಷ್ಟಿವೆ. ಈ ಮಧ್ಯೆ ಸ್ಮಾರ್ಟ್ ರೀಚಾರ್ಜ್ ಸೇವೆಯಲ್ಲಿ ಅಡಚರಣೆ ಉಂಟಾಗಿದೆ. ಮೂಲಗಳ ಪ್ರಕಾರ, ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ (NCMC) ಗಳ ಟಾಪ್-ಅಪ್/ರೀಚಾರ್ಜ್ ಸೌಲಭ್ಯದಲ್ಲಿ ಸಮಸ್ಯೆ ಉಂಟಾಗಿದ್ದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.












Click it and Unblock the Notifications