Gruha Lakshmi: ಚುನಾವಣೆಗೂ ಮುನ್ನ ಗೃಹಲಕ್ಷ್ಮೀ, ಈಗ ಅನರ್ಹ ಲಕ್ಷ್ಮೀ? ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು: ರಾಜ್ಯ ಸರ್ಕಾರದಿಂದ 'ಗೃಹ ಲಕ್ಷ್ಮೀ' ಯೋಜನೆ ಜಾರಿಯಾದ ಬಳಿಕ ಸಾಕಷ್ಟು ಬದಲಾವಣೆ ಆಗುತ್ತಿವೆ. ಇದೀಗ ಅನರ್ಹರ ಹೆಸರಿನಡಿ ಮೃತಪಟ್ಟ , ಐಟಿ ರಿಟನ್ಸ್ ಕಟ್ಟಿದವರು ಎಂಬಿತ್ಯಾದಿ ಕಾರಣಕ್ಕೆ ಒಂದು ಲಕ್ಷಕ್ಕೂಅಧಿಕ ಫಲಾನುಭವಿಗಳನ್ನು ಸರ್ಕಾರ ಕೈಬಿಟ್ಟಿದೆ. ;ಯೋಜನೆ ಜಾರಿಯ ವೇಳೆ ಅಂದು ಇಲ್ಲದ ಕಂಡಿಷನ್ ಈಗ ಯಾಕೆ?', ಚುನಾವಣೆ ಮುನ್ನ ಗೃಹ ಲಕ್ಷ್ಮೀ, ಇದೀಗ ಅನರ್ಹ ಲಕ್ಷ್ಮೀ' ಅಲ್ಲವೇ ಎಂದು ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಈಗ ಕಂಡಿಷನ್ ಯಾಕೆ? ಎಂದು ಬಿಜೆಪಿ ನಾಯಕ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಕ್ರೋಶ ಹೊರ ಹಾಕಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಕಾ ಪಾಟೀಲಗೂ ಫ್ರೀ...' ಎಂದು ಚುನಾವಣೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. 10 ಕೆಜಿ ಅಕ್ಕಿ ಕೊಡಲಿಲ್ಲ. ರಾಜ್ಯ ಸರ್ಕಾರವನ್ನೇ ನಂಬಿದ್ದರೆ ಜನರು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ಮಲಗಬೇಕಿತ್ತು, ಆ ಸ್ಥಿತಿ ಬಂದೊದಗಿತ್ತು. ಚುಣಾವಣೆಗಳ ಬಳಿಕ ಈಗ ಯೋಜನೆಗಳಿಗೆ ಷರತ್ತು ವಿಧಿಸುತ್ತಿರುವುದು ಯಾಕೆ? ನಿಮ್ಮ ಖಜಾನೆ ಖಾಲಿಯಾಗಿದೆ ಎಂಬುದು ಎಲ್ಲಿರಿಗೂ ಗೊತ್ತಿದೆ ಎಂದು ದೂರಿದರು.

'ಗೃಹಲಕ್ಷ್ಮಿ' ತಪ್ಪಿಸಲು ರೇಷನ್ ಕಾರ್ಡ್ ನೀಡುತ್ತಿಲ್ಲ!
ಫಲಾನುಭವಿಗಳನ್ನು ಕಡಿಮೆ ಮಾಡಲು ಕಂಡಿಷನ್ ಹಾಕುತ್ತೀರಿ. ನಿಮ್ಮ ಹಳೆ ಭಾಷಣವನ್ನು ಜನರು ಕೇಳಿಸಿಕೊಂಡಿದ್ದಾರೆ. ಇದಕ್ಕೆ ಸೂಕ್ತ ಸಮಯದಲ್ಲಿ ಜನರು ಉತ್ತರ ಕೊಡುತ್ತಾರೆ. ನಮಗೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರೆ, ನಾವು ಪ್ರಶ್ನೆ ಮಾಡುವುದಿಲ್ಲ ಎಂದು ಸವಾಲು ಹಾಕಿದರು. ಗೃಹಲಕ್ಷ್ಮಿ ಯೋಜನೆಯಡಿ ಹಣ ಕೊಡಬೇಕಾಗುತ್ತದೆ ಎಂದು ಹೊಸ ಬಿಪಿಎಲ್ ಕಾರ್ಡ್ ಕೊಡುವುದನ್ನು ನಿಲ್ಲಿಸಿದ್ದಾರೆ ಎಂದು ಟೀಕಿಸಿದರು. ಇದರಿಂದಾಗಿ ಅರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡ್ ನಿಂದಲೂ ವಂಚಿತರಾಗಿದ್ದಾರೆ ಎಂದು ಗಮನಕ್ಕೆ ತಂದರು. ಇದು ಸರಿಯಲ್ಲ ಎಂದು ತಿಳಿಸಿದರು.
ಸರ್ಕಾರದಿಂದ ತಾರತಮ್ಯ ನೀತಿ
ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿಯು ಜಾತ್ಯತೀತತೆಯೇ?. ಎಲ್ಲ ಜಾತಿಯವರಿಗೂ ಸಮಾನ ಅವಕಾಶ ಎಂಬುದು ಜಾತ್ಯಾತೀತತೆ ಎಂದು ನಾನು ಭಾವಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದಲ್ಲಿ ರಸಗೊಬ್ಬರ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಇದೆ ಎಂದು ಹಿಂದಿನ ಕೃಷಿ ಸಚಿವರು ಹೇಳಿದ್ದರು. ಹಾಗಿದ್ದರೆ ಕೊರತೆ ಉಂಟಾಗಿದ್ದು ಹೇಗೆ? ಯಾಕೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ? ಎಂಬುದಕ್ಕೆ ಹೊಸ ಸರ್ಕಾರ ಉತ್ತರ ಕೊಡಬೇಕು. ಯೂರಿಯ ಗೊಬ್ಬರ ರೈತರಿಗೆ ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಿ. ಕಾಳಸಂತೆಯಲ್ಲಿ ಫ್ಯಾಕ್ಟರಿಗೆ ಸರಬರಾಜು ಮಾಡಲು ಅವಕಾಶ ಕೊಡಬಾರದು ಎಂದು ತಿಳಿಸಿದರು.
ಚುನಾವಣೆ ಬಳಿಕ 'ಅನರ್ಹ ಲಕ್ಷ್ಮಿ': ಆರ್.ಅಶೋಕ್
ಗೃಹ ಲಕ್ಷ್ಮೀ ಯೋಜನೆ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ರಾಜ್ಯ ಪ್ರತಿ ಮನೆಯ ಯಜಮಾನಿಗೆ 2,000 ಎಂದು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರದಬ್ಬಲು ಹೊರಟಿದೆ. ಚುನಾವಣೆಗೆ ಮೊದಲು 'ಗೃಹಲಕ್ಷ್ಮಿ', ಚುನಾವಣೆ ಬಳಿಕ 'ಅನರ್ಹ ಲಕ್ಷ್ಮಿ' ಇದೇ ಕಾಂಗ್ರೆಸ್‌ನ ಗ್ಯಾರಂಟಿಗಳ ನಿಜವಾದ ಮುಖ ಎಂದು ಕಿಡಿ ಕಾರಿದರು.
ಚುನಾವಣೆಗೆ ಮೊದಲು "ಕಂಡೀಷನ್ ಅಪ್ಲೈ ಇಲ್ಲ" ಎಂಬಂತೆ ಪ್ರಚಾರ ಮಾಡಿದ್ದ ಕಾಂಗ್ರೆಸ್, ಈಗ ಒಂದೊಂದೇ ನೆಪ ಹುಡುಕಿ ತಾಯಂದಿರ ಹೆಸರನ್ನು ಪಟ್ಟಿಯಿಂದ ಕಿತ್ತೆಸೆಯುತ್ತಿದೆ. 17 ಜಿಲ್ಲೆಗಳಲ್ಲಿ 1,12,092 ಮಹಿಳೆಯರನ್ನು ಅನರ್ಹರೆಂದು ಗುರುತಿಸಿರುವುದು ಕಾಂಗ್ರೆಸ್‌ನ ಅಸಲಿ ಮುಖವನ್ನು ಬಯಲು ಮಾಡಿದೆ. ಇದಕ್ಕಿಂತ ದೊಡ್ಡ ದುರಂತ ಎಂದರೆ, ಈ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿಗಳೇ ನನಗೆ ಗೊತ್ತಿಲ್ಲ ಎಂದಿದ್ದರು. ರಾಜ್ಯದ 1.1 ಲಕ್ಷ ಮಹಿಳೆಯರ ಬದುಕಿನ ಪ್ರಶ್ನೆ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ ಎಂದರೆ, ರಾಜ್ಯವನ್ನು ನಡೆಸುತ್ತಿರುವವರು ಯಾರು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಚುನಾವಣೆ ಬಳಿಕ ಇದೀಗ ಬಯೋಮೆಟ್ರಿಕ್ ಹೆಸರಲ್ಲಿ ಹೊಸ ಕಿರುಕುಳ ನೀಡಲಾಗುತ್ತಿದೆ. ಕೊಟ್ಟ ಭರವಸೆ ಮರೆದಿದೆ. ಅನರ್ಹರ ಪಟ್ಟಿಗೆ ಸೇರಿಸುತ್ತಿದೆ. ಇದೇನಾ ಕಾಂಗ್ರೆಸ್‌ನ ಮಹಿಳಾ ಸಬಲೀಕರಣ?. ಮತ ಓಲೈಕೆಗಾಗಿ ಮಹಿಳೆಯರನ್ನು ಬಳಸಿಕೊಂಡು, ಅಧಿಕಾರ ಸಿಕ್ಕ ಬಳಿಕ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಕಾಂಗ್ರೆಸ್‌ನ ಈ ದ್ವಂದ್ವ ನೀತಿಯನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ. "ಗ್ಯಾರಂಟಿ" ಎಂದು ಮತ ಪಡೆದು, "ಅನರ್ಹ" ಎಂದು ಹಕ್ಕು ಕಸಿಯುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ತಾಯಂದಿರು ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಕಾಂಗ್ರೆಸ್ ಸೋಲಿನ ಭವಿಷ್ಯ ನುಡಿದರು.













Click it and Unblock the Notifications