ಕಾಂಗ್ರೆಸ್ ಸರ್ಕಾರ ರಚನೆ: 5 ಗ್ಯಾರಂಟಿಗಳ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದು ಹೀಗೆ, ಇಲ್ಲಿದೆ ವಿವರ
ಬೆಂಗಳೂರು, ಮೇ, 20: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಇದೆ ವೇಳೆ ರಾಹುಲ್ ಗಾಂಧಿ ಅವರು ಮಾತನಾಡಿದ್ದು, ನಾವು ಬಿಜೆಪಿಯವರ ರೀತಿ ಸುಳ್ಳು ಭರವಸೆಗಳನ್ನು ಕೊಡುವುದಿಲ್ಲ. ಬಿಜೆಪಿ ತಾಕತ್ತನ್ನು ಕರ್ನಾಟಕ ಜನರು ಸೋಲಿಸಿದ್ದಾರೆ. ನಾವು ಈಗಾಗಲೇ ಕೊಟ್ಟಿರುವ 5 ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗೂ ಮುಂಚೆಯೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಕೊಟ್ಟಿರುವ 5 ಭರವಸೆಗಳನನ್ನು ಈಡೇರಿಸುವುದಾಗಿ ಹೇಳಿದ್ದರು. ಇದೀಗ ಸರ್ಕಾರ ರಚನೆ ಆಗಿದ್ದು, ಯಾವುದೇ ಕಾರಣಕ್ಕೂ ನಾವು ಕೊಟ್ಟಿರುವ ಭರವಸೆಗಳನ್ನು ಕೈಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಇಂದು ಒಮ್ಮತದಿಂದ ಪ್ರಮಾಣ ವಚನ ವೇದಿಕೆಯಲ್ಲೇ ಹೇಳಿದರು.

ಕಂಠೀರವ ಕ್ರೀಡಾಂಗಣದ ವೇದಿಯಲ್ಲಿ ಮಾತನಾಡಿದ ರಾಹುಲ್ಅವರು, ನಾವು ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಅನ್ನಭಾಗ್ಯದ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಪದವಿಧರರಿಗೆ 3,000 ರೂ., ಡಿಪ್ಲೋಮಾ ಪದವಿಧರರಿಗೆ 1,500 ರೂಪಾಯಿ, 200 ಯುನಿಟ್ ಉಚಿತ ವಿದ್ಯುತ್, ಗೃಹಣಿಯರಿಗೆ 2,000 ರೂ. ಸೌಲಭ್ಯಗಳನ್ನು ನಾವು ನೀಡಲಿದ್ದೇವೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಹೇಳಿದರು.

ಇದೀಗ ರಾಜ್ಯದ ಮುಖ್ಯಮಂತ್ರಿ ಹಾಗೂ ಡಿಸಿಎಂ ಹಾಗೂ 8 ಜನ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಬಳಿಕ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ನಾವು ಕೊಟ್ಟಿರುವ ಭರವಸೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಈ ಮೂಲಕ ಗೃಹ ಜ್ಯೋತಿ ಯೋಜನೆ, ಗೃಹ ಲಕ್ಷ್ಮೀ ಯೋಜನೆ, ಅನ್ನ ಭಾಗ್ಯ, ಯುವ ನಿಧಿ, ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಈ ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತದೆ ಎಂದರು.
ಹಾಗಾದರೆ ಇಡೀ ರಾಜ್ಯದ ಜನರು ಕಾಯುತ್ತಿದ್ದ ಈ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನಾಯಕರು ಸಂಪುಟ ಸಭೆ ಬಳಿಕ ಘೋಷಣೆ ಮಾಡಲಿದ್ದು, ಇನ್ನು ಈ ಗ್ಯಾರೆಂಟಿಗಳನ್ನು ಯಾರೆಲ್ಲ ಪಡೆಯಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications