ಹೋಟೆಲ್ಗಳ ಆಹಾರ ಬಗ್ಗೆ ದೂರು ನೀಡಲು ಹೊಸ ವ್ಯವಸ್ಥೆ ಜಾರಿ: ಗುಟ್ಕಾ ನಿಷೇಧ ಆದೇಶ ಹಿಂಪಡೆದಿಲ್ಲ
ಬೆಂಗಳೂರು: ಹೋಟೆಲ್, ರಸ್ಟೋರೆಂಟ್ಗಳ ಮೇಲೆ ಆಹಾರ ಸುರಕ್ಷತಾ ದಾಳಿ ಮುಂದುರಿಸಿರುವ ರಾಜ್ಯ ಆರೋಗ್ಯ ಇಲಾಖೆ ನೂತನ 'ಕ್ಯೂಆರ್ ಕೋಡ್' ಬಿಡುಗಡೆ ಮಾಡಿದೆ. ಸಾರ್ವಜನಿಕರು ಓಡಾಡುವ ಸ್ಥಳ ಹೋಟೆಲ್, ಮಡಿಕಲ್ ಶಾಪ್ ಸೇರಿದಂತೆ ವಿವಿಧೆಡೆ ಅಳವಡಿಸಲಾಗುವುದು. ಆಹಾರದ ಗುಣಮಟ್ಟ, ಸೇವೆ, ಕಳಪೆ ಇನ್ನಿತರ ದೂರುಗಳನ್ನು ನೀವು ಕ್ಯೂಆರ್ ಕೋಡ್ ಬಳಸಿ ಸಲ್ಲಿಸಬಹುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು. ರಾಜ್ಯಾದ್ಯಂತ ಗುಟ್ಕಾ ನಿಷೇಧ ಆದೇಶ ಹಿಂಪಡೆದಿಲ್ಲ ಅಂತಲೂ ಅವರು ಸ್ಪಷ್ಟನೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವಿಧ ವಿಷಯಗಳ ಕುರಿತು ಮಾತನಾಡಿದ ಯು.ಟಿ.ಖಾದರ್ ಅವರು, ಬೆಂಗಳೂರಿನಲ್ಲಿ ಹೋಟೆಲುಗಳ ಮೇಲಿನ ದಾಳಿ ಮುಂದುವರಿಯಲಿದೆ. ಸಾರ್ವಜನಿಕರು ಭೇಟಿ ನೀಡುವ ಸ್ಥಳಗಳಲ್ಲಿ ಈ ಕ್ಯೂಆರ್ ಕೋಡ್ ಅಳವಡಿಸುತ್ತೇವೆ. ಜನರು ಸೇವೆ, ಸಮಸ್ಯೆ, ಆಹಾರ ಗುಣಮಟ್ಟ ಕುರಿತು ದೂರು ನೀಡಲು ಇದು ಅನುಕೂಲವಾಗಲಿದೆ. ದೂರುಗಳು ಬಂದು ತಕ್ಷಣ ಆರೋಗ್ಯಾಧಿಕಾರಿಗಳು ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಪಿಜಿ, ಬಸ್ ನಿಲ್ದಾಣಗಳಲ್ಲಿ ಆಹಾರ ತಪಾಸಣೆ
ಹೋಟೆಲ್, ರೆಸ್ಟೋರೆಂಟ್ಗಳ ಮೇಲಿನ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ. ಇದರೊಂದಿಗೆ ಬೆಂಗಳೂರಿನ ಪಿಜಿಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಸಹ ಪರಿಶೀಲಿಸಲಾಗುವುದು. ಖಾಸಗಿ ಹಾಸ್ಟೆಲ್, ರೈಲ್ವೆ ಕ್ಯಾಂಟಿನ್ಗಳಲ್ಲಿ ಆಹಾರ ಗುಣಮಟ್ಟ ಪರಿಶೀಲನೆ ನಡೆಸಲಿದ್ದೇವೆ. ಪಿಜಿಗಳಲ್ಲಿ ಆಹಾರ ಕಳಪೆ ಎಂಬುದು ಗೊತ್ತಾದರೆ ಯಾವುದೇ ಕಾರಣಕ್ಕೂ ಕ್ಷಮಾಪಣೆ ಇಲ್ಲ ಎಂದು ಸಚಿವರು ಎಚ್ಚರಿಸಿದರು.
ಬೆಂಗಳೂರುಲ್ಲಿ ತಪಾಸಣೆ ಮಾಹಿತಿ
ರಾಜಧಾನಿ ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಸುಮಾರು 60 ಕ್ಕೂ ಅಧಿಕ ಕಡೆಗಲ್ಲಿ ತಪಾಸಣೆ ನಡೆಸಿದ್ದೇವೆ. ಇದರಲ್ಲಿ ತ್ರಿಸ್ಟಾರ್, ಫೈಸ್ಟಾರ್ ಹೋಟೆಲ್, ಸಾಮಾನ್ಯ ಹೋಟೆಲ್, ರೆಸ್ಟೋರೆಂಟ್ಗಳು ಸೇರಿವೆ. ಒಟ್ಟಾರೆ ಈ ತಪಾಸಣೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಸುಮಾರು 30ತಂಡಗಳ ಕಾರ್ಯ ನಿರ್ವಹಿಸಿವೆ ಎಂದರು.
ಗುಟ್ಕಾ ನಿಷೇಧ ನಿರ್ಧಾರ ಹಿಂಪಡೆದಿಲ್ಲ!
ಕರ್ನಾಟಕದಲ್ಲಿ ನಿಕೋಟಿನ್ ಅಂಶ ಹೊಂದಿರುವ ಎಲ್ಲ ವಿಧದ ಗುಟ್ಕಾ, ಪಾನ್ ಮಸಾಲಾ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿಲ್ಲ. ಈ ಆದೇಶ ಜಾರಿಯಲ್ಲಿರಲಿದೆ ಎಂದು ಸಚಿವ ಯು.ಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಗುಟ್ಕಾ ನಿಷೇಧ ಬೇಡ ಎನ್ನುವವರು ಒಮ್ಮೆ ಕಿದ್ವಾಯಿ ಆಸ್ಪತ್ರೆಗೆ ಬಂದು ನೋಡಿ. ರೋಗಿಗಳಿಗೆ ಕಣ್ಣಿನಲ್ಲಿ ರಕ್ತ ಬರುತ್ತಿದೆ ಎಂದು ಕಿಡಿ ಕಾರಿದರು. ರಾಜ್ಯದಲ್ಲಿ ಆಗಸ್ಟ್ 12ರಿಂದ ಮುಂದಿನ ಒಂದು ವರ್ಷ ಗುಟ್ಕಾ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದನ್ನು ಹಿಂದಕ್ಕೆ ಪಡೆದಿಲ್ಲ ಎಂದು ಅವರು ಪುನರಚ್ಚರಿಸಿದರು. ಇತ್ತ ರಾಜ್ಯದಲ್ಲಿ ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಚರ್ಚೆಗಳು ಮುಂದುವರಿದಿವೆ.


Click it and Unblock the Notifications
