ಫೆಬ್ರವರಿ 27ರಿಂದ PUC, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ, ಇಲ್ಲಿದೆ ಸಂಪೂರ್ಣ ತಾತ್ಕಾಲಿಕ ವೇಳಾಪಟ್ಟಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) 2026-27ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿಯನ್ನ ಗುರುವಾರ ಬಿಡುಗಡೆ ಮಾಡಿದೆ.
ಮಂಡಳಿ ಪ್ರಕಟಣೆಯ ಪ್ರಕಾರ, ರಾಜ್ಯಾದ್ಯಂತ ಫೆಬ್ರವರಿ 27 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, ಮಾರ್ಚ್ 22 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ಶಿಕ್ಷಣ ಇಲಾಖೆಯು ಪರೀಕ್ಷಾ ವ್ಯವಸ್ಥೆಯಲ್ಲಿ ತಂದಿರುವ ವಾರ್ಷಿಕ 3 ಪರೀಕ್ಷೆಗಳ ನಿಯಮದನ್ವಯ ಪ್ರಥಮ ಪರೀಕ್ಷೆಯ ದಿನಾಂಕಗಳನ್ನ ಘೋಷಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಿದ್ಧತೆಯನ್ನ ಈಗಿನಿಂದಲೇ ವ್ಯವಸ್ಥಿತವಾಗಿ ಆರಂಭಿಸಲು ಈ ವೇಳಾಪಟ್ಟಿ ಅನುಕೂಲ ಕಲ್ಪಿಸಿದೆ.

ಎಸ್‌ಎಸ್‌ಎಲ್‌ಸಿ ತಾತ್ಕಾಲಿಕ ವೇಳಾಪಟ್ಟಿ ಇಲ್ಲಿದೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅನ್ನು 2027ರ ಮಾರ್ಚ್ 22 ರಿಂದ ಏಪ್ರಿಲ್ 5 ರವರೆಗೆ ನಡೆಸಲು ಮಂಡಳಿ ಉದ್ದೇಶಿಸಿದೆ. ಅದರ ದಿನಾಂಕವಾರು ವಿವರ ಹೀಗಿದೆ:
* ಮಾರ್ಚ್ 22: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ (NCERT), ಸಂಸ್ಕೃತ).
* ಮಾರ್ಚ್ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ.
* ಮಾರ್ಚ್ 27: ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ).
* ಮಾರ್ಚ್ 30: ಗಣಿತ, ಸಮಾಜಶಾಸ್ತ್ರ.
* ಏಪ್ರಿಲ್ 2: ತೃತೀಯ ಭಾಷೆ (ಹಿಂದಿ, ಹಿಂದಿ (NCERT), ಕನ್ನಡ (ಪುನರಾವರ್ತಿತರಿಗೆ ಮಾತ್ರ), ಉರ್ದು, ತುಳು, ಇಂಗ್ಲಿಷ್, ಸಂಸ್ಕೃತ, ಕೊಂಕಣಿ, ತೆಲುಗು, ತಮಿಳು, ಮರಾಠಿ) ಹಾಗೂ ಎನ್ಎಸ್ಕ್ಯೂಎಫ್ (NSQF) ವೃತ್ತಿಪರ ವಿಷಯಗಳು.
* ಏಪ್ರಿಲ್ 3: ಜೆಟಿಎಸ್ (JTS) ವಿಷಯಗಳು.
* ಏಪ್ರಿಲ್ 5: ಸಮಾಜ ವಿಜ್ಞಾನ.
ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ
ದ್ವಿತೀಯ ಪಿಯುಸಿ ಪರೀಕ್ಷೆ-1 ಅನ್ನು 2027ರ ಫೆಬ್ರವರಿ 27 ರಿಂದ ಮಾರ್ಚ್ 17 ರವರೆಗೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
* ಫೆಬ್ರವರಿ 27: ಕನ್ನಡ, ಅರೇಬಿಕ್
* ಮಾರ್ಚ್ 1: ಇಂಗ್ಲೀಷ್
* ಮಾರ್ಚ್ 2: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
* ಮಾರ್ಚ್ 3: ಭೂಗೋಳಶಾಸ್ತ್ರ, ಮನಃಶಾಸ್ತ್ರ
* ಮಾರ್ಚ್ 4:ಸಮಾಜಶಾಸ್ತ್ರ, ಭೌತಶಾಸ್ತ್ರ
* ಮಾರ್ಚ್ 5: ಲೆಕ್ಕಶಾಸ್ತ್ರ
* ಮಾರ್ಚ್ 8: ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
* ಮಾರ್ಚ್ 9: ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
* ಮಾರ್ಚ್ 11: ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪು ತಯಾರಿಕೆ, ಮಾಹಿತಿ ತಂತ್ರಜ್ಞಾನ (IT), ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್
* ಮಾರ್ಚ್ 12: ವ್ಯವಹಾರ ಅಧ್ಯಯನ (Business Studies), ಗಣಿತ
* ಮಾರ್ಚ್ 13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
* ಮಾರ್ಚ್ 15: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ (Computer Science)
* ಮಾರ್ಚ್ 16: ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
* ಮಾರ್ಚ್ 17: ಹಿಂದಿ
ಆಕ್ಷೇಪಣೆ ಸಲ್ಲಿಸಲು ಅವಕಾಶ ಹಾಗೂ ಕೊನೆಯ ದಿನಾಂಕ
ಪ್ರಕಟವಾಗಿರುವ ಈ ತಾತ್ಕಾಲಿಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವೇಳಾಪಟ್ಟಿಯನ್ನ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರು ಕಡ್ಡಾಯವಾಗಿ ತಮ್ಮ ಶಾಲಾ-ಕಾಲೇಜುಗಳ ಸೂಚನಾ ಫಲಕದಲ್ಲಿ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ.
ಈ ವೇಳಾಪಟ್ಟಿ ಕುರಿತು ವಿದ್ಯಾರ್ಥಿಗಳು, ಪೋಷಕರು ಅಥವಾ ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಅದನ್ನು ಸಲ್ಲಿಸಲು ಮಂಡಳಿಯು ಅಕ್ಟೋಬರ್ 22 ರವರೆಗೆ 15 ದಿನಗಳ ಕಾಲಾವಕಾಶ ನೀಡಿದೆ.
ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು [email protected] ಗೆ ಹಾಗೂ ದ್ವಿತೀಯ ಪಿಯುಸಿ ವೇಳಾಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು [email protected] ಗೆ ಇ-ಮೇಲ್ ಮೂಲಕ ಕಳುಹಿಸಬಹುದು. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಆಯೋಗವು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-2 ರ ತಾತ್ಕಾಲಿಕ ವೇಳಾಪಟ್ಟಿಯನ್ನೂ ಮಂಡಳಿ ಬಿಡುಗಡೆ ಮಾಡಿದ್ದು, ಹೆಚ್ಚಿನ ಮಾಹಿತಿ ಹಾಗೂ ಅಪ್‌ಡೇಟ್‌ಗಳಿಗಾಗಿ ಮಂಡಳಿಯ ಅಧಿಕೃತ ವೆಬ್‌ಸೈಟ್ https://kseab.karnataka.gov.inಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
Download

Click it and Unblock the Notifications
