ಬೋರ್‌ವೆಲ್ ಹಾಕಿಸುವವರು ಇನ್ಮುಂದೆ ಈ ನಿಯಮ ಪಾಲಿಸಲೇಬೇಕು, ಇಲ್ಲದಿದ್ರೆ ಜೈಲು
ಕರ್ನಾಟಕದಾದ್ಯಂತ ಇನ್ನು ಮುಂದೆ ಬೋರ್‌ವೆಲ್ ಕೊರೆಸುವವರು ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಈ ಸಂಬಂಧ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಇದಕ್ಕಾಗಿ ಕರ್ನಾಟಕ ಅಂತರ್ಜಲ (ತಿದ್ದುಪಡಿ) ಮಸೂದೆ-2024 ಅನ್ನು ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ.
ಅದರಂತೆ ಇನ್ನು ಮುಂದೆ ಕೊರೆಸಿದ ಬೋರ್‌ವೆಲ್‌ಗಳನ್ನು ಮುಚ್ಚದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಇತ್ತೀಚೆಗೆ ತೆರೆದ ಬೋರ್‌ವೆಲ್‌ಗಳಲ್ಲಿ ಮಕ್ಕಳು ಸಿಲುಕಿ ಅನಾಹುತಗಳು ಸಂಭವಿಸಿದ ಪ್ರಕರಣಗಳು ಹೆಚ್ಚಾದ ಕಾರಣ ಕೆಲ ನಿಯಮಗಳನ್ನು ಜಾರಿ ಮಾಡಿದೆ. ಅದರಂತೆ ಕೊಳವೆಬಾವಿಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇದ್ದರೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 25,000 ರೂಪಾಯಿವರೆಗೆ ದಂಡ ಕೂಡ ವಿಧಿಸಲಾಗುವುದು.

ಈ ಮಸೂದೆ ಹೇಳುವಂತೆ ಬೋರ್‌ವೆಲ್‌ಗಳನ್ನು ಕೊರೆಯುವವರು ಸಕ್ಷಮ ಪ್ರಾಧಿಕಾರಗಳಿಗೆ 15 ದಿನಗಳ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಇದಕ್ಕೆ ಒಪ್ಪಿಗೆ ಪಡೆಯುವುದು ಕೂಡ ಕಡ್ಡಾಯ. ಒಂದು ವೇಳೆ ಫೇಲ್ಯೂರ್ ಆದ ಬೋರ್‌ವೆಲ್‌ಗಳನ್ನು ತಕ್ಷಣವೇ ಭದ್ರವಾಗಿ ಮುಚ್ಚಬೇಕು. ಈ ಮಾಹಿತಿಯನ್ನೂ ಪ್ರಾಧಿಕಾರಕ್ಕೆ ನೀಡಬೇಕು ಎಂದು ಹೇಳಿದೆ.
ಬೋರ್‌ವೆಲ್ ಹಾಕಿಸುವ ಮಾಲೀಕರು ಹಾಗೂ ಬೋರ್‌ವೆಲ್ ಕೊರೆಯುವ ಏಜೆನ್ಸಿಯವರಿಗೆ ಈ ನಿಯಮಗಳು ಅನ್ವಯವಾಗಲಿವೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಸದನದಲ್ಲಿ ವಿವರಿಸಿದ್ದಾರೆ.

ಈ ಮಸೂದೆಯು ನಮ್ಮ ರೈತಬಾಂಧವರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಎಚ್ಚರ ವಹಿಸಬೇಕು ಎಂದು ಬಿಜೆಪಿ ನಾಯಕರು ಸದನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪಂಚಾಯಿತಿ ಅಧಿಕಾರಿಗಳನ್ನು ಸಹ ಹೊಣೆ ಮಾಡುವಂತೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಈ ಮಸೂದೆ ಪ್ರಸ್ತಾಪಿಸಿರುವಂತೆ ಬೋರ್‌ವೆಲ್ ಮುಚ್ಚದವರಿಗೆ ವಿಧಿಸುವ ದಂಡದ ಮೊತ್ತ ತುಂಬಾ ಕಡಿಮೆ. ದಂಡದ ಮೊತ್ತವನ್ನು 5 ಲಕ್ಷ ರೂಪಾಯಿವರೆಗೆ ಹೆಚ್ಚಿಸಿ ಎಂದು ಸಲಹೆ ನೀಡಿದರು.

ಹಲವು ಮಸೂದೆಗಳ ಅಂಗೀಕಾರ: ನಿನ್ನೆ ಅಧಿವೇಶನದಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಎರಡನೇ ತಿದ್ದುಪಡಿ) ಮಸೂದೆ-2024ಕ್ಕೂ ವಿಧಾನಸಭೆ ಒಪ್ಪಿಗೆ ನೀಡಿದೆ. ಇದು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹಿಂಬಾಕಿ ಪಾವತಿಗೆ ಜಾರಿಗೊಳಿಸಿದ್ದ ಒಂದು ಬಾರಿಯ ತೀರುವಳಿ (ಒಟಿಎಸ್) ಯೋಜನೆಗೆ ಅನುಮೋದನೆ ನೀಡುವ ಕುರಿತಾಗಿದೆ.
ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಗಳ ಮಸೂದೆ-2024ಕ್ಕೆ ಸಹ ಸದನ ಒಪ್ಪಿಗೆ ನೀಡಿದೆ. ಇದು ರಾಜ್ಯದಲ್ಲಿ ರೋಪ್ ವೇಗಳ ನಿರ್ಮಾಣ ಮತ್ತು ನಿರ್ವಹಣೆಯ ಮೇಲುಸ್ತುವಾರಿ, ನಿಯಂತ್ರಣ, ಪ್ರಾಧಿಕಾರಗಳನ್ನು ರಚಿಸುವ ಸಂಬಂಧ ಅವಕಾಶ ಕಲ್ಪಿಸುತ್ತದೆ. ಇನ್ನು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಮಸೂದೆ-2024, ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ-2024 ಮಂಡನೆಯಾಗಿದೆ. ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ-2024 ಅನ್ನು ಹಿಂಪಡೆಯಲಾಗಿದೆ.











Click it and Unblock the Notifications