ಪೊಲೀಸರು ಸ್ವಂತ ಗಾಡಿ ಮೇಲೆ 'POLICE' ಎಂದು ಹಾಕಿಸಿಕೊಳ್ಳಬಹುದಾ? ಗೃಹ ಸಚಿವ ಸ್ಪಷ್ಟನೆ
ಪೊಲೀಸ್ ಸಿಬ್ಬಂದಿಗೆ ನೀಡುವ ಇಲಾಖೆಯ ವಾಹನಗಳ ಮೇಲೆ ಪೊಲೀಸ್ (POLICE) ಎಂಬ ಸ್ಟಿಕ್ಕರ್ ಅಂಟಿಸಲಾಗಿರುತ್ತದೆ. ಇದನ್ನು ಇಲಾಖೆ ವತಿಯಿಂದ ಅಧಿಕೃತವಾಗಿ ಅಂಟಿಸಲಾಗುತ್ತದೆ. ಸಿಬ್ಬಂದಿಗೆ ಇಲಾಖೆ ವತಿಯಿಂದ ಸಿಗುವ ವಾಹನಗಳ ಮೇಲೂ ಈ ಹೆಸರು ಇದ್ದೇ ಇರುತ್ತೆ. ಆದರೆ, ಪೊಲೀಸರು ತಮ್ಮ ಖಾಸಗಿ ವಾಹನಗಳ ಮೇಲೂ "ಪೊಲೀಸ್" ಎಂಬ ಸ್ಟಿಕ್ಕರ್ ಹಾಕಿಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಸಿಬ್ಬಂದಿ ಮಾತ್ರವಲ್ಲ, ಅವರ ಕುಟುಂಬಸ್ಥರು ಕೂಡ ತಮ್ಮ ಖಾಸಗಿ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡಿರುತ್ತಾರೆ. ಆದ್ರೆ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೇ? ಇಲ್ಲವೇ ಎಂಬ ಬಗ್ಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿಗಳು ತಮ್ಮ ಖಾಸಗಿ ವಾಹನ ಮಾತ್ರವಲ್ಲದೆ, ಮನೆಯಲ್ಲಿರುವ ಪತ್ನಿ, ಪುತ್ರ, ಪುತ್ರಿಯ ವಾಹನಗಳ ಮೇಲೂ ಪೊಲೀಸ್ ಎಂದು ಬರೆಸಿಕೊಂಡು ಓಡಾಡುತ್ತಾರೆ. ಇನ್ನೂ ಕೆಲವರು ಏಯ್ ನಮ್ಮಪ್ಪ ಪೊಲೀಸ್, ನಮ್ಮಮ್ಮ ಪೊಲೀಸ್ ಎಂದು ಧಿಮಾಕು ತೋರಿಸೋ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಕೆಲವರು ವಾಹನದ ಮೇಲೆ ಪೊಲೀಸ್ ಎಂಬ ಹೆಸರು ನೋಡಿದ ತಕ್ಷಣ ಸೈಲೆಂಟ್ ಆಗುತ್ತಾರೆ. ಪೊಲೀಸ್ ಎಂದು ಬರೆಸಿಕೊಂಡು ಮನಬಂದಂತೆ ವಾಹನ ಚಾಲನೆ ಮಾಡುವುದು ಕೂಡ ಕಡಿಮೆಯೇನಿಲ್ಲ. ಏಕೆಂದರೆ ಅವರಿಗೆಲ್ಲ ಪೊಲೀಸ್ ಹೆಸರೇ ಶ್ರೀರಕ್ಷೆಯಾಗಿರುತ್ತೆ. ಆದರೆ ನಿಜಕ್ಕೂ ಆ ರೀತಿ ಸ್ಟಿಕ್ಕರ್ ಹಾಕಿಸಿಕೊಳ್ಳಬಹುದಾ? ಇಲ್ಲಿದೆ ನೋಡಿ ಸ್ಪಷ್ಟ ಉತ್ತರ.

ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕರ್ನಾಟಕದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಖಾಸಗಿ ವಾಹನಗಳ ಮೇಲೆ "ಪೊಲೀಸ್" ಎಂದು ಬರೆಸುವುದು ಕಾನೂನುಬಾಹಿರ ಎಂದು ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಅಲ್ಲದೆ ಪೊಲೀಸರು ಈ ರೀತಿ ಬರೆಸಿಕೊಳ್ಳುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇಂತಹ ಆರೋಪ ಕೇಳಿಬಂದರೆ, 2022ರ ಸರ್ಕಾರದ ಸುತ್ತೋಲೆಯ ಪ್ರಕಾರ ಆ ಸಿಬ್ಬಂದಿ ಹಾಗೂ ಸ್ಟಿಕ್ಕರ್ ಹಾಕಿಸಿಕೊಂಡವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚರಿಸಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಜಿ.ಪರಮೇಶ್ವರ್ ಅವರು ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾನೂನಿನಲ್ಲಿ ಅವಕಾಶ ಇಲ್ಲ ಅಂದ ಮೇಲೆ ಅನೇಕ ಪೊಲೀಸರು ತಮ್ಮ ವೈಯಕ್ತಿಕ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡಿದ್ದಾರೆ. ಅಧಿಕಾರಿಗಳು ಈ ರೀತಿ ಕಾನೂನು ಉಲ್ಲಂಘಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ? ಈ ಬಗ್ಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ? ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಮರುಪ್ರಶ್ನೆ ಕೇಳಿದರು. ಇದಕ್ಕೂ ಉತ್ತರಿಸಿರುವ ಗೃಹಸಚಿವರು, ಇಲಾಖೆ ಸಿಬ್ಬಂದಿ ತಮ್ಮ ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡಿರೋದು ಗೃಹ ಇಲಾಖೆ ಗಮನಕ್ಕೆ ಬಂದಿದೆ. ಒಂದು ವೇಳೆ ಅಧಿಕಾರಿಗಳು ಹಾಗೂ ನೌಕರರು ತಮ್ಮ ತಮ್ಮ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡಿದ್ದರೆ, ಅವರ ವಿರುದ್ಧ 2022ರ ಸರ್ಕಾರದ ಸುತ್ತೋಲೆ ಪ್ರಕಾರ ಕಾನೂನು ಕ್ರಮ ಜರುಗಿಸುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications