ಪೆಟ್ರೋಲ್-ಡೀಸೆಲ್ ಬೆನ್ನಲ್ಲೇ PUCಗೂ ಬರೆ: ವಾಹನಗಳ ಎಮಿಷನ್ ಟೆಸ್ಟ್ ಶುಲ್ಕ ಹೆಚ್ಚಿಸಿ ಸರ್ಕಾರ ಆದೇಶ
ಬೆಂಗಳೂರು: ಇಂಧನ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಿಂದ ಬೇಸತ್ತಿರುವ ಜನರಿಗೆ ಸರ್ಕಾರದ ನಿರ್ಧಾರದಿಂದ ಮತ್ತೊಂದು ಆರ್ಥಿಕ ಬರೆ ಬಿದ್ದಿದೆ. ವಿಶೇಷವಾಗಿ ವಾಹನ ಸವಾರರು ಇನ್ನು ಮುಂದೆ ತಮ್ಮ ವಾಹನಗಳ 'ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ' (PUC) ಪಡೆಯಲು ಮೊದಲಿಗಿಂತ ಹೆಚ್ಚು ಹಣ ನೀಡಬೇಕಿದೆ. ಏಕೆಂದರೆ ನಾಲ್ಕು ವರ್ಷಗಳ ಬಳಿಕ ರಾಜ್ಯ ಸರ್ಕಾರ ವಾಯು ಮಾಲಿನ್ಯ ಪರೀಕ್ಷಾ (Vehicle Emission Test) ಶುಲ್ಕವನ್ನು ಪರಿಷ್ಕರಣೆ ಮಾಡಿ ಆದೇಶಿಸಿದೆ.
ಹೌದು, ಬೈಕ್, ಕಾರು, ಆಟೋ ರೀಕ್ಷಾ ಸೇರಿದಂತೆ ಎಲ್ಲ ವಿಧದ ವಾಹನಗಳಿಗೆ ಅನುಗುಣವಾಗಿ ವಾಹನಗಳ 'ಮಾಲಿನ್ಯ ನಿಯಂತ್ರಣ ಪ್ರಮಾಣ ಪರೀಕ್ಷೆ'ಯ ಶುಲ್ಕವನ್ನು ಹೆಚ್ಚಳ ಮಾಡಿದೆ. ಇದರಿಂದ ಈಗಾಗಲೇ ಇಂಧನ ದರ ಏರಿಕೆಗೆ, ದುಬಾರಿ ವಾಹನಗಳ ಬೆಲೆಗೆ ಕಂಗಾಲಾಗಿರುವ ವಾಹನ ಸವಾರರಿಗೆ ಮತ್ತೊಂದು ಆರ್ಥಿಕ ಬರೆ ಹಾಕಿದಂತಾಗಿದೆ.

ಮಾಲಿನ್ಯ ತಪಾಸಣಾ ಮಾಲೀಕರಿಂದ ಶುಲ್ಕ ಹೆಚ್ಚಳಕ್ಕೆ ಮನವಿ
ಆಗಸ್ಟ್ 13ರಂದು ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ವಾಹನಗಳ ಮಾಲಿನ್ಯ ತಪಾಸಣಾ ಕೇಂದ್ರದ ಮಾಲೀಕರ ಸಂಘದ ಒತ್ತಾಯದ ಮೇರೆಗೆ ಈ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ಕಚ್ಚಾ ವಸ್ತುಗಳ ದರ ಏರಿಕೆ ಆಗಿದೆ. ದಿನ ಬಳಕೆ ವಸ್ತುಗಳು, ಪರೀಕ್ಷಾ ಕೇಂದ್ರದ ಬಾಡಿಗೆ, ಇಂಟರ್‌ನೆಟ್ಎ ಸೌಲಭ್ಯ, ಉಪಕರಣ ನಿರ್ವಹಣೆ, ಪ್ರಿಂಟರ್ ಕಾಟ್ರಡ್ಜ್, ವಿದ್ಯುತ್ ಬಿಲ್ ಮತ್ತು ಸಿಬ್ಬಂದಿ ನಿರ್ವಹಣೆಗೆ ದುಬಾರಿಯಾಗಿದೆ. ಹೀಗಾಗಿ ಶುಲ್ಕ ಹೆಚ್ಚಿಸಲು ಸಂಘ ಒತ್ತಾಯ ಮಾಡಿತ್ತು. ಅದರಂತೆ ಈ ಮೇಲಿನ ಕ್ರಮ ಕೈಗೊಂಡಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಮಾಲಿನ್ಯ ಪರೀಕ್ಷೆಗೆ ಮೊದಲಿದ್ದ ಶುಲ್ಕ ಮತ್ತು ಪರಿಷ್ಕೃತ ಶುಲ್ಕ
1. ದ್ವಿಚಕ್ರ ವಾಹನ: ಮೊದಲು 65 ರೂಪಾಯಿ ಮತ್ತು ಈಗ 80 ರೂ.
2. ತ್ರಿಚಕ್ರ ವಾಹನ: ಮೊದಲು 75 ರೂಪಾಯಿ ಮತ್ತು 80 ರೂ.
3. ನಾಲ್ಕು ಚಕ್ರದ ಟ್ರೋಲ್/ಎಲ್‌ಪಿಜಿ/ಸಿಎನ್ ಜಿ/ಚಾಲಿತ ವಾಹನ: 115 ರೂಪಾಯಿ ಮತ್ತು 150 ರೂ.ಆ
4. ಎಲ್ಲ ಮಾದರಿಯ ಡೀಸೆಲ್ ಚಾಲಿತ ವಾಹನ: 160 ರೂಪಾಯಿ ಮತ್ತು 200 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಮೇಲ್ಕಂಡ ದರಗಳಲ್ಲಿ ಗಣಕೀಕರಣವನ್ನು ಅಳವಡಿಸಿಕೊಂಡಿರುವ ವಾಯು ಮಾಲಿನ್ಯ ಕೇಂದ್ರಗಳು ಮಾತ್ರ ಸಾರ್ವಜನಿಕರಿಂದ ಮೇಲಿನ ಶುಲ್ಕ ಪಡೆಯಬಹುದು. ಶುಲ್ಕವು ಎಮಿಷನ್ ಪರೀಕ್ಷೆಗೆ ಮಾತ್ರ ಸೀಮಿತವಾಗಿರುತ್ತದೆ. ಪರಿಷ್ಕೃತ ದರಗಳನ್ನು ಅಳವಡಿಸುವಾಗ ಈ ಕೆಳಕಂಡ ಷರತ್ತುಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಷರತ್ತುಗಳು ಯಾವುವು?
1. ಮಾಲಿನ್ಯ ಪರೀಕ್ಷೆಗಾಗಿ ಪರಿಣತಿವುಳ್ಳ ವ್ಯಕ್ತಿಗಳನ್ನು ನೇಮಿಸಿರಬೇಕು.
2. ನಿಯತಕಾಲಿಕವಾಗಿ ಸರಿಯಾದ ರೀತಿಯಲ್ಲಿ ಗ್ಯಾಸ್ ಅನಾಲೈಸರ್ ಗಳನ್ನು ರೀಕ್ಯಾಲಬರೇಷನ್ ಮಾಡುತ್ತಿರಬೇಕು.
3. ಪರೀಕ್ಷಣಾ ಕೇಂದ್ರದಲ್ಲಿ ಎಲ್ಲರಿಗೆ ಕಾಣುವಂತಹ ಸ್ಥಳದಲ್ಲಿ ರೀಕಾಲಿಬರೇಷನ್ ಮಾಡಿದ SE: ದಿನಾಂಕ ಮತ್ತು ಅವಧಿಯನ್ನು ದೊಡ್ಡದಾಗಿ ಪ್ರಕಟಿಸಬೇಕು.
4. ಪುಪತ್ರದಲ್ಲಿ ಯಾವುದೇ ರೀತಿಯ ಕೈಬರಹ ಇರಬಾರದು.
5. ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 115ರ ಪ್ರಕಾರ ಮಾಲಿನ್ಯ ಪ್ರಮಾಣದೊಳಗಿನ ವಾಹನಗಳಿಗೆ ಮಾತ್ರ ಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಪತ್ರವನ್ನು ನೀಡಬೇಕು ಹಾಗೂ ಇದರ ಸಿಂಧುತ್ವ ಅವಧಿ ನೀಡಿದ ದಿನಾಂಕದಿಂದ ಭಾರತ್ ಸ್ಟೇಜ್- IV ಮತ್ತು ಭಾರತ್ ಸ್ಟೇಜ್-VI ವಾಹನಗಳಿಗೆ ಮಾತ್ರ ಪ್ರಪತ್ರ ನೀಡಿದ ದಿನಾಂಕದಿಂದ 12 ತಿಂಗಳಿರಬೇಕು.
6. ಪರೀಕ್ಷಣಾ ಕೇಂದ್ರಗಳಲ್ಲಿ ವಾಯು ಮಾಲಿನ್ಯ ತಪಾಸಣೆ ಹಾಗೂ ನಿರ್ವಹಣೆಗಾಗಿ ಸಾಕಷ್ಟು ಸ್ಥಳಾವಕಾಶ ಇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏಕಾಎಕಿ ದರ ಏರಿಕೆ: KSTOA ಆಕ್ಷೇಪ
ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಪಡೆಯುವ ಶುಲ್ಕವನ್ನು ಏಕಾಏಕಿ ದುಪ್ಪಟ್ಟು ಮಾಡುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ವಾಹನ ಮಾಲೀಕರಲ್ಲೂ ಮೂಡುತ್ತಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಸಂಘ (KSTOA) ಆಕ್ಷೇಪ ಎತ್ತಿದೆ.
ಮಾಲಿನ್ಯ ತಪಾಸಣೆ ಮಾಡಲು ಹೆಚ್ಚುವರಿ ಇಂಧನ ಬೇಕೇ? ದುಬಾರಿ ರಾಸಾಯನಿಕಗಳನ್ನು ಬಳಸಬೇಕೇ? ಯಂತ್ರೋಪಕರಣ ಅಥವಾ ತಪಾಸಣಾ ವೆಚ್ಚವೇ ದುಪ್ಪಟ್ಟಾಗಿದೆಯೇ? ನಿಜವಾಗಿಯೂ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರೆ, ಅದರ ಲೆಕ್ಕಾಚಾರವನ್ನು ಸರ್ಕಾರ ಮತ್ತು ಸಾರಿಗೆ ಇಲಾಖೆ ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಇಡಬೇಕು.
ಕರ್ನಾಟಕದ ವಾಹನ ಮಾಲೀಕರು ಈಗಾಗಲೇ ವಾಹನ ತೆರಿಗೆ, ನೋಂದಣಿ ಶುಲ್ಕ, ವಿಮೆ, ಇಂಧನದ ಮೇಲಿನ ತೆರಿಗೆ, ಟೋಲ್, ವಾಹನ ನಿರ್ವಹಣಾ ವೆಚ್ಚ, ಪಾರ್ಕಿಂಗ್ ಶುಲ್ಕ ಸೇರಿದಂತೆ ಹಲವು ರೀತಿಯ ಆರ್ಥಿಕ ಹೊರೆಗಳನ್ನು ಹೊರುತ್ತಿದ್ದಾರೆ. ಇದರ ನಡುವೆ ಒಂದರ ಮೇಲೊಂದು ಕಡ್ಡಾಯ ಶುಲ್ಕಗಳನ್ನು ಹೆಚ್ಚಿಸುತ್ತಿರುವುದು ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ಹೊರೆಯಾಗುತ್ತಿದೆ.
ಸಾರಿಗೆ ಇಲಾಖೆಯ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದ ಬೆನ್ನಲ್ಲೇ ಇಂತಹ ಮಹತ್ವದ ಶುಲ್ಕ ಪರಿಷ್ಕರಣೆ ನಡೆದಾಗ ಸಾರ್ವಜನಿಕರಲ್ಲಿ ಅನುಮಾನ ಮತ್ತು ಪ್ರಶ್ನೆಗಳು ಮೂಡುವುದು ಸಹಜ. ಆದ್ದರಿಂದ ಶುಲ್ಕವನ್ನು ಏಕೆ ಹೆಚ್ಚಿಸಲಾಯಿತು? ಯಾವ ವೈಜ್ಞಾನಿಕ ಅಥವಾ ಆರ್ಥಿಕ ಲೆಕ್ಕಾಚಾರದ ಆಧಾರದ ಮೇಲೆ ದುಪ್ಪಟ್ಟು ಮಾಡಲಾಯಿತು? ಸಂಬಂಧಪಟ್ಟ ವಾಹನ ಮಾಲೀಕರು ಮತ್ತು ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿತ್ತೇ? ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಆಗ್ರಹಿಸಿದ್ದಾರೆ.


Click it and Unblock the Notifications
