ದುಡಿಯುವ ಪತ್ನಿಗೆ ಜೀವನಾಂಶ ಇಲ್ಲವೇ? ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

Karnataka High Court: ಕರ್ನಾಟಕ ಹೈಕೋರ್ಟ್ ಮಹಿಳೆಯರ ಜೀವನಾಂಶ ಕೋರಿಕೆಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಉನ್ನತ ಶಿಕ್ಷಣ ಪಡೆದು, ಗೌರವಯುತವಾಗಿ ಸ್ವಾವಲಂಬಿ ಬದುಕು ಸಾಗಿಸುವಷ್ಟು ಆದಾಯ ಗಳಿಸುತ್ತಿರುವ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ಪ್ರತಿ ತಿಂಗಳು ₹20,000 ಜೀವನಾಂಶ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ಪತಿಗೆ ನಿರ್ದೇಶನ ನೀಡಿತ್ತು. ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲ್ಲಾಕೂರು ಸುಮಲತಾ ಅವರ ಏಕಸದಸ್ಯ ಪೀಠವು, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ತೀರ್ಪು ನೀಡಿದೆ.

Karnataka High Court Cancels 20 000 Maintenance for Financially Independent Wife Know details

ಹೈಕೋರ್ಟ್‌ನ ಪ್ರಮುಖ ಅಂಶಗಳು

ವಿಚಾರಣೆ ವೇಳೆ ಹೈಕೋರ್ಟ್ ಜೀವನಾಂಶದ ಕಾನೂನಾತ್ಮಕ ಉದ್ದೇಶವನ್ನು ಸ್ಪಷ್ಟಪಡಿಸಿತು. ತನ್ನನ್ನು ತಾನು ಪೋಷಿಸಿಕೊಳ್ಳಲು ಯಾವುದೇ ಆದಾಯದ ಮೂಲವಿಲ್ಲದ ಅಸಹಾಯಕ ಸ್ಥಿತಿಯಲ್ಲಿ ಮಾತ್ರ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿರುತ್ತದೆ.

ಮಹಿಳೆಯು ಉತ್ತಮ ವಿದ್ಯಾಭ್ಯಾಸ ಹೊಂದಿದ್ದು, ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಹಾಗೂ ಉದ್ಯೋಗದಲ್ಲಿದ್ದರೆ, ಅದು ಆಕೆಯ ಜೀವನಾಂಶದ ಅರ್ಜಿಯನ್ನು ತಿರಸ್ಕರಿಸಲು ಬಲವಾದ ಆಧಾರವಾಗುತ್ತದೆ. ಪ್ರತಿಯೊಂದು ಸನ್ನಿವೇಶದಲ್ಲೂ ಪತಿಯೇ ಪತ್ನಿಯನ್ನು ಪೋಷಿಸಬೇಕು ಎಂದು ಕಾನೂನು ಕಡ್ಡಾಯಗೊಳಿಸಿಲ್ಲ. ಮಹಿಳೆಯು ಉನ್ನತ ಹುದ್ದೆಯಲ್ಲಿದ್ದು, ಗೌರವಯುತ ಜೀವನ ನಡೆಸಲು ಬೇಕಾದಷ್ಟು ಸಂಪಾದಿಸುತ್ತಿದ್ದರೆ, ಆಕೆಯನ್ನು ಯಾವುದೇ ಕಾರಣಕ್ಕೂ ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲಾಗುವುದಿಲ್ಲ.

ಪ್ರಕರಣದ ಹಿನ್ನೆಲೆ

ಪತಿಯ ಪರ ವಕೀಲರು ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಪ್ರಕಾರ, ಪತ್ನಿಯು ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ (B.E.) ಪದವಿ ಪಡೆದಿದ್ದು, ಖಾಸಗಿ ಕಂಪನಿಯೊಂದರಲ್ಲಿ ವಾರ್ಷಿಕ ₹10 ಲಕ್ಷ ಪ್ಯಾಕೇಜ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು ₹54,700 ಕೈಗೆಟುಕುವ ಸಂಬಳ ಪಡೆಯುತ್ತಿದ್ದು, ಸ್ವತಂತ್ರ ಹಾಗೂ ಗೌರವಯುತ ಬದುಕಿಗೆ ಇದು ಸಾಕಾಗುತ್ತದೆ.

ಪತಿ ತಿಂಗಳಿಗೆ ₹2 ಲಕ್ಷ ಗಳಿಸುತ್ತಿದ್ದರೂ, ಅವರು ತೀವ್ರ ಮಧುಮೇಹದಿಂದ ಬಳಲುತ್ತಿದ್ದಾರೆ. ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ಪಡೆಯಬೇಕಾದ ಸ್ಥಿತಿಯಲ್ಲಿದ್ದಾರೆ. ಜೊತೆಗೆ ಅನಾರೋಗ್ಯ ಪೀಡಿತ ವೃದ್ಧ ಪೋಷಕರ ಆರೈಕೆ ಹಾಗೂ ತಮ್ಮ ಸ್ವಂತ ಚಿಕಿತ್ಸೆಗಾಗಿಯೇ ಪ್ರತಿ ತಿಂಗಳು ₹70,000ಕ್ಕೂ ಹೆಚ್ಚು ವೆಚ್ಚವಾಗುತ್ತಿದೆ. ಇದರ ಜೊತೆಗೆ ಕಾನೂನು ಹೋರಾಟದ ವೆಚ್ಚವನ್ನೂ ಅವರೇ ಭರಿಸಬೇಕಾಗಿದೆ.

ನ್ಯಾಯಾಲಯದ ಅಂತಿಮ ತೀರ್ಪು ಏನು?

ವಿಚಾರಣೆ ವೇಳೆ ಪತ್ನಿಯು, ತನ್ನ ಗಳಿಕೆಯಲ್ಲಿ ಪ್ರತಿ ತಿಂಗಳು ಸುಮಾರು ₹35,000 ಹಣವನ್ನು ಪೋಷಕರ ನಿರ್ವಹಣೆಗೆ ನೀಡುತ್ತಿರುವುದಾಗಿ ತಿಳಿಸಿದ್ದರು. 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 144ರ ಪ್ರಕಾರ, ಜೀವನಾಂಶ ಕೋರುವ ವ್ಯಕ್ತಿಯು ಮೊದಲು ತಾನು ಸ್ವತಃ ಜೀವನ ನಿರ್ವಹಣೆ ಮಾಡಲು ಸಂಪೂರ್ಣ ಅಶಕ್ತನೆಂಬುದನ್ನು ಸಾಬೀತುಪಡಿಸಬೇಕು. ತನ್ನ ಸ್ವಂತ ಸಂಪಾದನೆಯಿಂದ ತನ್ನ ಬದುಕನ್ನು ಸಾಗಿಸಿ, ಪೋಷಕರನ್ನೂ ಸಲಹುವಷ್ಟು ಆರ್ಥಿಕ ಶಕ್ತಿ ಹೊಂದಿರುವ ಮಹಿಳೆ, ತಾನು ಪತಿಯ ಮೇಲೆಯೇ ಅವಲಂಬಿತಳಾಗಿದ್ದೇನೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ,' ಎಂದು ತೀರ್ಮಾನಿಸಿ, ಜೀವನಾಂಶ ಕೋರಿಕೆಯನ್ನು ಸಂಪೂರ್ಣವಾಗಿ ವಜಾಗೊಳಿಸಿ ಆದೇಶ ಹೊರಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+