ಬೇರೆ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಹೆಚ್ಚು ಪ್ರತಿಭಾನ್ವಿತರಿದ್ದಾರೆ: ಪ್ರಿಯಾಂಕ್‌ಗೆ ಪ್ರದೀಪ್ ಈಶ್ವರ್ ಬೆಂಬಲ
ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಸ್ಸಾ ಸಿಎಂ ಹಿಮಂತ ಬಿಸ್ವಾ ಶರ್ಮಾ ನಡುವೆ ಟಾಕ್‌ವಾರ್ ಜೋರಾಗಿದೆ. ಅಸ್ಸಾಂ ಬಗ್ಗೆ ಪ್ರಿಯಾಂಕ್ ಖರ್ಗೆ ಆಡಿದ್ದ ಮಾತುಗಳಿಗೆ ಶರ್ಮಾ ತಿರುಗೇಟು ನೀಡಿದ್ದರು. "ಪ್ರಿಯಾಂಕ್ ಖರ್ಗೆ ಒಬ್ಬ ಫಸ್ಟ್ ಕ್ಲಾಸ್ ಈಡಿಯಟ್" ಎಂದು ಆಕ್ರೋಶ ಹೊರಹಾಕಿದ್ದರು. ಇದನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಖಂಡಿಸಿದ್ದಾರೆ. ನನ್ನ ಐಟಿ ಸಚಿವರು ಮತ್ತು ಕರ್ನಾಟಕದ ಜನರ ಬಗ್ಗೆ ನೀವು ನೀಡಿರುವ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನೀವು ಕೂಡಲೇ ನನ್ನ ರಾಜ್ಯದ ಜನರು ಮತ್ತು ಐಟಿ ಸಚಿವರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಐಟಿ ಸಚಿವರು ಕರ್ನಾಟಕದ ಯುವಕರನ್ನು ಪ್ರತಿನಿಧಿಸುತ್ತಾರೆ. ಕಳೆದ ವರ್ಷ, ನೀವು ಟ್ವೀಟ್ ಮಾಡಿ ನಾಯಕತ್ವ ಕೌಶಲ್ಯಕ್ಕಾಗಿ ಅಸ್ಸಾಂನಿಂದ ಬೆಂಗಳೂರಿಗೆ ಸುಮಾರು 1,500 ಯುವಕರನ್ನು ಕಳುಹಿಸುತ್ತಿದ್ದೀರಿ ಎಂದು ಹೇಳಿದ್ದೀರಿ. ನಮ್ಮಲ್ಲಿ ಬೆಂಗಳೂರಿನಲ್ಲಿ ಉತ್ತಮ ಪ್ರತಿಭಾನ್ವಿತರು ಇದ್ದಾರೆ. ನಾವು ಐಟಿಯಲ್ಲಿ ನಂಬರ್ ಒನ್, ನಾವು ಸ್ಟಾರ್ಟ್‌ಅಪ್‌ಗಳಲ್ಲಿ ನಂಬರ್ ಒನ್. ನಾವು ಭಾರತದ ಸಿಲಿಕಾನ್ ರಾಜಧಾನಿ, ನಾವು ಉದ್ಯಾನ ನಗರಿ, ನವೀಕರಿಸಬಹುದಾದ ಇಂಧನದಲ್ಲಿ ನಾವು ನಂಬರ್ ಒನ್, ಬೆಂಗಳೂರಿನಿಂದ 43% ಐಟಿ ರಫ್ತಿನಲ್ಲಿ ನಾವು ನಂಬರ್ ಒನ್, ಶ್ರೀಗಂಧದಲ್ಲಿ ನಾವು ನಂಬರ್ ಒನ್, ರೇಷ್ಮೆಯಲ್ಲಿ ನಾವು ನಂಬರ್ ಒನ್ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಬಯೋಟೆಕ್ ಕೈಗಾರಿಕೆಗಳಲ್ಲಿ 60 ಪಾಲು. ನಮ್ಮಲ್ಲಿ ಬೇರೆ ಯಾವುದೇ ರಾಜ್ಯಕ್ಕಿಂತ ಉತ್ತಮ ಪ್ರತಿಭಾನ್ವಿತರು ಇದ್ದಾರೆ. ನಾವು ಅಸ್ಸಾಂನ ಯುವಕರನ್ನು ಗೌರವಿಸುತ್ತೇವೆ. ಆದ್ದರಿಂದ ದಯವಿಟ್ಟು ಕರ್ನಾಟಕದ ಯುವಕರನ್ನು ಗೌರವಿಸಿ. ದಯವಿಟ್ಟು ನನ್ನ ಐಟಿ ಸಚಿವರು ಮತ್ತು ಕರ್ನಾಟಕದ ಜನರಿಗೆ ಬೇಷರತ್ ಕ್ಷಮೆಯಾಚಿಸಿ ಎಂದು ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
ಏನಿದು ವಿವಾದ?
ಸೆಮಿಕಂಡಕ್ಟರ್ ಕೈಗಾರಿಕೆಗಳು ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿರುವ ವಿಚಾರವಾಗಿ ಪ್ರಿಯಾಂಕ್ ಮಾತನಾಡಿದ್ದರು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬರಬೇಕಿದ್ದ ಹೂಡಿಕೆಗಳನ್ನ ಆ ರಾಜ್ಯಗಳಿಗೆ ಕಳಿಸುತ್ತಿದೆ. ಗುಜರಾತ್ ಹಾಗೂ ಅಸ್ಸಾಂನಲ್ಲಿ ಏನಿದೆ? ಅಲ್ಲಿ ಪ್ರತಿಭೆ ಇದೆಯೇ ಎಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿ ಅಸ್ಸಾಂ ಸಿಎಂ ತಿರುಗೇಟು ನೀಡಿದ್ದರು.
ಪ್ರಿಯಾಂಕ್ ಖರ್ಗೆ ಒಬ್ಬ ಪ್ರಥಮ ದರ್ಜೆ ಮೂರ್ಖ. ಅವರು ಅಸ್ಸಾಮಿ ಯುವಕರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಇನ್ನೂ ಇದನ್ನು ಖಂಡಿಸಿಲ್ಲ. ಬಹುಶಃ ಅಸ್ಸಾಂನಲ್ಲಿ ವಿದ್ಯಾವಂತ ಯುವಕರಿಲ್ಲ ಎಂದು ಅವರು ಹೇಳಿರುವುದರಿಂದ ನಾವು ಅವರ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಇದು ಇಡೀ ಅಸ್ಸಾಂ ಯುವಕರಿಗೆ ಮಾಡಿದ ಅವಮಾನ ಎಂದು ಅಸ್ಸಾ ಸಿಎಂ ಹಿಮಂತ ಬಿಸ್ವಾ ಶರ್ಮಾ ಖಂಡಿಸಿದ್ದರು.












Click it and Unblock the Notifications