ಕೋವಿಡ್-19 ಕಂಟೇನ್ಮೆಂಟ್ ಮತ್ತು ಬಫರ್ ವಲಯ ಇನ್ನು ಹೇಗಿರಲಿವೆ? ಪರಿಷ್ಕೃತ ಮಾರ್ಗಸೂಚಿ
ಬೆಂಗಳೂರು, ಆಗಸ್ಟ್ 20: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಆರಂಭದಲ್ಲಿ ಒಂದು ಮನೆಯಲ್ಲಿ ಪ್ರಕರಣ ಕಂಡುಬಂದಾಗ ಆ ಮನೆ ಇರುವ ರಸ್ತೆಯನ್ನೇ ಸೀಲ್ ಡೌನ್ ಮಾಡುವ ಮತ್ತು ಕಂಟೇನ್‌ಮೆಂಟ್ ವಲಯಗಳನ್ನಾಗಿ ಮಾಡುವ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
Recommended Video
ಇದರಿಂದಾಗಿ ಪ್ರಾಧಿಕಾರಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ನಡೆಸಲು ಮತ್ತು ಪೆರಿಮೀಟರ್ ನಿಯಂತ್ರಣ ಖಾತರಿಪಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಕಂಟೇನ್ಮೆಂಟ್ ಹಾಗೂ ಬಫರ್ ವಲಯಗಳನ್ನು ಗುರುತಿಸುವ ಹಾಗೂ ಮುಕ್ತಗೊಳಿಸುವ ಕುರಿತು ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದೆ.
ವರದಿಯಾಗುವ ಕೊರೊನಾ ವೈರಸ್‌ನ ಪ್ರತಿ ಪ್ರಕರಣಕ್ಕೆ ಅನುಗುಣವಾಗಿ ಕಂಟೇನ್ಮೆಂಟ್ ವಲಯ ಎಂದು ಗುರುತಿಸುವ ಸಂಬಂಧ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಮುಂದೆ ಓದಿ.

ಕಂಟೇನ್ಮೆಂಟ್ ವಲಯಗಳು
ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್ 19 ದೃಢಪಟ್ಟ ವ್ಯಕ್ತಿಯ ಮನೆ ಇರುವ ಮಹಡಿ, ಸ್ವತಂತ್ರ ಮನೆ, ಕೊಳೆಗೇರಿಗಳಲ್ಲಿ ಸೋಂಕಿತನ ಮನೆ ಇರುವ ಬೀದಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿತರು ವಾಸವಿರುವ ಸಂಪೂರ್ಣ ವಾಸಸ್ಥಾನ ಅಥವಾ ವಾಸಸ್ಥಾನದ ಅಕ್ಕಪಕ್ಕ ಹೊಂದಿಕೊಂಡಂತಿರುವ ಸಣ್ಣ ಪ್ರದೇಶಗಳನ್ನು ಕೂಡ ಕಂಟೇನ್ಮೆಂಟ್ ವಲಯಗಳೆಂದು ಪರಿಗಣಿಸಲಾಗುತ್ತದೆ.

ಬ್ಯಾರಿಕೇಡ್ ಅಗತ್ಯವಿಲ್ಲ
ವರದಿಯಾಗುವ ಪ್ರತಿ ಪ್ರಕರಣದ ಮನೆಯ ಮೇಲೆ ನೋಟಿಸ್ ಅಂಟಿಸುವುದು, ನೆರೆ ಹೊರೆಯವರಿಗೆ ಸ್ಥಳೀಯ ನಿವಾಸಿ ಸಂಘಟನೆಗಳಿಗೆ, ಅಪಾರ್ಟ್‌ಮೆಂಟ್ ಮಾಲೀಕರ ಸಂಘಟನೆಗಳಿಗೆ ಮಾಹಿತಿ ನೀಡುವುದು, ಸಂಪರ್ಕಿತರನ್ನು ಗುರುತಿಸುವುದು, ಹೋಂ ಕ್ವಾರೆಂಟೈನ್ ನಿಯಮವನ್ನು ಪಾಲಿಸುವಂತೆ ಸೂಚಿಸುವುದು, ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಇಂತಹ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಅಗತ್ಯವಿಲ್ಲ ಮತ್ತು ಸಂಪರ್ಕಿತರ ಹ್ಯಾಂಡ್ ಸ್ಯಾಂಪ್ಲಿಂಗ್ ಬೇಕಾಗುವುದಿಲ್ಲ ಎಂದು ಅಧಿಸೂಚನೆ ತಿಳಿಸಿದೆ.

ಕಂಟೇನ್ಮೆಂಟ್ ವಲಯದ ಗುರುತು ಹೇಗೆ?
ಯಾವುದಾದರೂ ಪ್ರದೇಶದಲ್ಲಿ ಗುಂಪು ಗುಂಪಾಗಿ ಪ್ರಕರಣಗಳು ಕಂಡು ಬಂದಾಗ ಕಂಟೇನ್ಮೆಂಟ್ ವಲಯವನ್ನು ವಿಸ್ತರಿಸಬೇಕಾಗುತ್ತದೆ. ಅದಕ್ಕೆ ಸಮೀಪವಿರುವ ಕೋವಿಡ್ ಪ್ರಕರಣಗಳ ಗುಂಪನ್ನು ಒಳಗೊಳ್ಳುವಂತೆ ಮಾಡಬೇಕು. ಪ್ರಕರಣಗಳು ಮತ್ತು ಸಂಪರ್ಕಿತರನ್ನು ಮ್ಯಾಪ್ ಮಾಡುವುದು, ಪ್ರಕರಣ ಹಾಗೂ ಸಂಪರ್ಕಿತರ ಭೌಗೋಳಿಕ ಪ್ರಸರಣದ ಆಧಾರದಲ್ಲಿ, ಗುರುತಿಸಲಾಗಿರುವ ಪರಿಧಿ ವಲಯ ಮತ್ತು ಪರಿಧಿ ವಲಯ ನಿಯಂತ್ರಣವನ್ನು ಜಾರಿ ಮಾಡುವ ಸಂದರ್ಭದಲ್ಲಿ ಕಂಟೇನ್ಮೆಂಟ್ ವಲಯದ ವ್ಯಾಪ್ತಿಯನ್ನು ಗುರುತಿಸಬೇಕು ಎಂದು ಸೂಚಿಸಲಾಗಿದೆ.

ಕಂಟೇನ್ಮೆಂಟ್ ಪಕ್ಕ ಬಫರ್ ವಲಯ
ಹೊಸದಾಗಿ ಕೋವಿಡ್ 19 ಪ್ರಕರಣಗಳು ಪತ್ತೆಯಾಗುವ ಸಂಭವ ಇರುವ ಪ್ರದೇಶವನ್ನು ಬಫರ್ ವಲಯ ಎಂದು ಗುರುತಿಸಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವಂತೆ ಕಂಟೇನ್ಮೆಂಟ್ ವಲಯದ ಸುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ಬಫರ್ ವಲಯ ಎಂದು ಕರೆಯಲಾಗುತ್ತದೆ.

ಕಂಟೇನ್ಮೆಂಟ್‌ನಲ್ಲಿ ಪ್ರತಿದಿನ ಸಮೀಕ್ಷೆ
ಕೋವಿಡ್ ಪ್ರಕರಣ ಖಚಿತವಾದ ಪ್ರದೇಶದಲ್ಲಿ 14 ದಿನಗಳ ಬಳಿಕ ಯಾವುದೇ ಹೊಸ ಪ್ರಕರಣ ವರದಿಯಾಗದೆ ಹೋದರೆ ಮತ್ತು ಸಂಪರ್ಕಿತರ 14 ದಿನಗಳ ಕ್ವಾರೆಂಟೈನ್ ಅವಧಿ ಮುಕ್ತಾಯವಾದ ಬಳಿಕ ಆ ಪ್ರದೇಶವವು ಹಳೆಯ ಸ್ಥಿತಿಗೆ ಮರಳುತ್ತದೆ. ಕಂಟೇನ್ಮೆಂಟ್ ಮತ್ತು ಬಫರ್ ವಲಯಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ಸಕ್ರಿಯ ಸಮೀಕ್ಷೆ ನಡೆಸಬೇಕು. ಕಂಟೇನ್ಮೆಂಟ್ ವಲಯದಲ್ಲಿ ಪ್ರತಿದಿನ ಮನೆ ಮನೆ ಸಮೀಕ್ಷೆಯನ್ನು ಹಾಗೂ ಬಫರ್ ವಲಯದಲ್ಲಿ ವಾರದಲ್ಲಿ ಎರಡು ದಿನ ಕಡ್ಡಾಯ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಕೋವಿಡ್ ಮುಕ್ತ ಘೋಷಣೆ ಹೇಗೆ?
ಕೋವಿಡ್ 19 ದೃಢಪಟ್ಟ ಪ್ರಕರಣಗಳು ಆಸ್ಪತ್ರೆ ಮತ್ತು ಹೋಂ ಐಸೋಲೇಷನ್‌ನಿಂದ ಬಿಡುಗಡೆ ಹೊಂದಿದ 28 ದಿನಗಳ ನಂತರವಷ್ಟೇ ಯಾವುದೇ ಗ್ರಾಮ, ನಗರ, ಜಿಲ್ಲೆ ಮತ್ತು ರಾಜ್ಯವನ್ನು ಕೋವಿಡ್ 19 ಮುಕ್ತ ಎಂದು ಘೋಷಣೆ ಮಾಡಬಹುದಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications