ದರ ಕಡಿತಗೊಳಿಸಿ ಸರ್ಕಾರದ ಅಧಿಸೂಚನೆ: ಇನ್ಮುಂದೆ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಎಷ್ಟು?
ಬೆಂಗಳೂರು, ನ.4: ಬುಧವಾರ ಘೋಷಣೆ ಮಾಡಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ದವರನ್ನು ಕಡಿತಗೊಳಿಸಿ ಗುರುವಾರ ಆದೇಶ ಮಾಡಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲಿಯೇ ನ.4ರ ಸಂಜೆಯಿಂದಲೇ ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ 7 ರೂ. ಇಳಿಕೆ ಮಾಡಿ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಹೀಗಾಗಿ ಪೆಟ್ರೋಲ್ ದರ 10 ರೂಪಾಯಿ ಹಾಗೂ ಡಿಸೇಲ್ ದರ 5 ರೂಪಾಯಿಗಳಿಗೆ ಇಳಿಸಿತ್ತು. ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಈ ಆದೇಶ ಹೊರ ಬಿದ್ದ ತಕ್ಷವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಅದರಂತೆ ದೇಶದ ಮೊದಲ ರಾಜ್ಯವಾಗಿ ಇಂಧನ ದರ ಇಳಿಸುವ ನಿರ್ಧಾರ ಮಾಡಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಅಬಕಾರಿ ತೆರಿಗೆಯನ್ನು ಕಡತಗೊಳಿಸಿದ್ದರಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ರಾಜ್ಯದಲ್ಲಿ ಇನ್ಮುಂದೆ ಎಷ್ಟು ರೂಪಾಯಿಗಳಿಗೆ ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಸಿಗಲಿದೆ ಎಂಬುದರ ಮಾಹಿತಿ ಮುಂದಿದೆ.

ಪೆಟ್ರೋಲ್, ಡಿಸೇಲ್ ದರದಲ್ಲಿ ಕಡಿತಗೊಳಿಸಿ ಅಧಿಸೂಚನೆ
ಕರ್ನಾಟಕ ಸೇಲ್ಸ್ ಟ್ಯಾಕ್ಸ್ ಕಾನೂನು 1957ರ ಸೆಕ್ಷನ್ 21ರಂತೆ 30-03-202ರಂದು ಪ್ರಕಟಿಸಿದ್ದಂತೆ ತೆರಿಗೆಗೆ ತಿದ್ದುಪಡಿ ಮಾಡಿ ಆದೇಶ ಮಾಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ ಶೇ. 25.9ಕ್ಕೆ ಇಳಿಕೆ ಮಾಡಿದೆ. ಜೊತೆಗೆ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24ರಿಂದ ಶೇ. 14.34ಕ್ಕೆ ಇಳಿಸಿ ಆದೇಶ ಮಾಡಿದೆ. ಪೆಟ್ರೋಲ್ ದರ 13.3 ರೂಪಾಯಿ ಕಡಿತವಾಗಲಿದ್ದು, ಡಿಸೇಲ್ ದರದಲ್ಲಿ 19.47 ರೂ. ಕಡಿತವಾಗಲಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ತಿಳಿಸಿದೆ.

ಇನ್ಮುಂದೆ ರಾಜ್ಯದಲ್ಲಿ ಪೆಟ್ರೋಲ್-ಡಿಸೇಲ್ ದರವೆಷ್ಟು?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಬಕಾರಿ ಹಾಗೂ ಮಾರಾಟ ಸುಂಕ ಕಡಿತಗೊಳಿಸಿದ್ದರಿಂದ ಶತಕ ದಾಟಿದ್ದ ಡಿಸೇಲ್ ದರ ಶತಕದೊಳಗೆ ಬಂದಿದೆ. ಆದರೆ ಪಟ್ರೋಲ್ ಮಾತ್ರ ಶತಕ ಭಾರಿಸಿದೆ. ಇನ್ಮುಂದೆ ರಾಜ್ಯದಲ್ಲಿ ಪೆಟ್ರೋಲ್ 100.63 ರೂಪಾಯಿ ಹಾಗೂ ಡಿಸೇಲ್ ದರ 85.03 ರೂಪಾಯಿ ಆಗಲಿದೆ ಎಂದು ಸಿಎಂ ಸಚಿವಾಲಯ ತಿಳಿಸಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿ ಆದೇಶ ಮಾಡಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರವು ತನ್ನ ಪಾಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸುವುದಾಗಿ ನಿನ್ನೆ ಬುಧವಾರ ಸಂಜೆ ಸಿಎಂ ಬೊಮ್ಮಾಯಿ ತಿಳಿಸಿದ್ದರು.

ದೀಪಾವಳಿ ಕೊಡುಗೆ ಎಂದಿದ್ದ ಸಿಎಂ ಬೊಮ್ಮಾಯಿ!
ಅಧಿಸೂಚನೆ ಹೊರಡಿಸುವ ಮೊದಲು ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ, "ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ಜನತೆಗೆ ದೀಪಾವಳಿ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರ ನಿನ್ನೆ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿದ ಕೂಡಲೇ ಕೇಂದ್ರ ಹಣಕಾಸು ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 7 ರೂ.ಗಳನ್ನು ಕಡಿಮೆ ಮಾಡಿದೆ. ಗುರುವಾರ ಸಂಜೆಯಿಂದಲೇ ಇದು ಜಾರಿಯಾಗಲಿದೆ" ಎಂದು ತಿಳಿಸಿದ್ದರು.

ಸುಂಕ ಕಡಿತದಿಂದ ರಾಜ್ಯ ಸರ್ಕಾರಕ್ಕೆ ಹೊರೆ!
"ಅಂದಾಜಿನಂತೆ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಮಾರಾಟ ಸುಂಕ ಕಡಿತಗೊಳಿಸುವುದರಿಂದ ರಾಜ್ಯ ಸರ್ಕಾರಕ್ಕೆ 2,100 ಕೋಟಿ ರೂ. ತೆರಿಗೆಯಲ್ಲಿ ಕಡಿತ ಉಂಟಾಗಲಿದೆ. ಆದರೆ ಪೆಟ್ರೋಲ್ ಹಾಗೂ ಡೀಸಲ್ ಬೆಲೆ 100 ರೂ.ಗಳು ದಾಟಿದಾಗಿನಿಂದಲೂ ದರ ಇಳಿಕೆ ಮಾಡಬೇಕೆಂಬ ಚಿಂತನೆ ಸರ್ಕಾರಕ್ಕೆ ಇತ್ತು. ಅದರಂತೆ ಮಾಡಿದ್ದೇವೆ. ನಮ್ಮ ಸರ್ಕಾರ ಜನಪರವಾಗಿದೆ" ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.