ಸಾರಿಗೆ ನೌಕರರಿಗೆ ಡಬಲ್ ಧಮಾಕಾ: ಶೇ.12.5ರಷ್ಟು ವೇತನ ಹೆಚ್ಚಳ, ಹಿಂಬಾಕಿ ಪಾವತಿಗೆ 450 ಕೋಟಿ ರೂ. ಬಿಡುಗಡೆ

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳು ಹಾಗೂ ನೌಕರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಬಹುದಿನಗಳ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್ ನೀಡಿರುವ ಸರ್ಕಾರ, ಮೂಲ ವೇತನವನ್ನು ಶೇ.12.50 ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ನೌಕರರಿಗೆ ಪಾವತಿಸಬೇಕಿದ್ದ ಹಳೆಯ ವೇತನ ಹಿಂಬಾಕಿಯ ಮೊದಲ ಕಂತಿನ ಹಣವನ್ನು ಸಹ ಬಿಡುಗಡೆ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕೆಕೆಆರ್‌ಟಿಸಿ) ನೌಕರರಿಗೆ 2021ರ ಜನವರಿ 01 ರಿಂದ 2023ರ ಫೆಬ್ರವರಿ 28ರವರೆಗಿನ ಒಟ್ಟು 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಸರ್ಕಾರ ಈ ಹಿಂದೆಯೇ ಅನುಮೋದನೆ ನೀಡಿತ್ತು. ಒಟ್ಟು 1271.92 ಕೋಟಿ ರೂ. ಮೊತ್ತದ ಭಾರಿ ಹಿಂಬಾಕಿಯಲ್ಲಿ, ಇದೀಗ ವಿಳಂಬ ಮಾಡದೇ ಮೊದಲ ಕಂತಾಗಿ 450.00 ಕೋಟಿ ರೂ.ಗಳನ್ನು ಆಯಾ ನಿಗಮವಾರು ಬಿಡುಗಡೆಗೊಳಿಸಿ ಮಹತ್ವದ ಆದೇಶ ಹೊರಡಿಸಲಾಗಿದೆ.

Karnataka

ಮೂಲ ವೇತನ ಶೇ.12.50 ರಷ್ಟು ಹೆಚ್ಚಳ

ಇದರ ಜೊತೆಗೆ, ನೌಕರರು 2025ರ ಮಾರ್ಚ್‌ 31 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.12.50 ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಸರ್ಕಾರ ಆದೇಶಿಸಿದೆ. ಈ ಭಾರಿ ವೇತನ ಹೆಚ್ಚಳವು ಉನ್ನತ ವೇತನ ಶ್ರೇಣಿ ಹಾಗೂ ಮಧ್ಯಂತರ ವೇತನ ಶ್ರೇಣಿ ಸೇರಿದಂತೆ ಪ್ರಸ್ತುತ ನಿಗಮದಲ್ಲಿರುವ ಎಲ್ಲಾ ವೇತನ ಶ್ರೇಣಿಗಳಿಗೂ ಅನ್ವಯವಾಗಲಿದೆ. ಈ ಹೊಸ ವೇತನ ಪರಿಷ್ಕರಣೆಯು ಜುಲೈ ತಿಂಗಳ ವೇತನದಲ್ಲಿ ಅನುಷ್ಠಾನಗೊಂಡು ಎಲ್ಲಾ ಅರ್ಹ ಅಧಿಕಾರಿ ಹಾಗೂ ನೌಕರರಿಗೆ ಪಾವತಿಯಾಗಲಿದೆ.

ಹಿಂಬಾಕಿ ಕುರಿತು ಸರ್ಕಾರ ಸ್ಪಷ್ಟನೆ

ಹೊಸದಾಗಿ ಪರಿಷ್ಕರಿಸಲಾದ ವೇತನದ ಹಿಂಬಾಕಿ ಕುರಿತಾಗಿಯೂ ಸರ್ಕಾರ ಸ್ಪಷ್ಟನೆ ನೀಡಿದೆ. 2025ರ ಏಪ್ರಿಲ್‌ 1ರಿಂದ 2026ರ ಜೂನ್‌ 30ರವರೆಗಿನ ಅವಧಿಯ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ತಕ್ಷಣವೇ ನೀಡಲು ಸಾಧ್ಯವಿಲ್ಲ. ಬದಲಾಗಿ, ಮುಂದಿನ ದಿನಗಳಲ್ಲಿ ಆಯಾ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಸಾರಿಗೆ ನಿಗಮಗಳು ಕಳೆದ ಹಲವಾರು ವರ್ಷಗಳಿಂದ ಭಾರೀ ನಷ್ಟವನ್ನು ಅನುಭವಿಸುತ್ತಿದ್ದು, ಪ್ರಸ್ತುತ 7130.80 ಕೋಟಿ ರೂ. ಗಳಷ್ಟು ಬೃಹತ್ ಹೊಣೆಗಾರಿಕೆ ಪಾವತಿಸುವುದು ಬಾಕಿ ಉಳಿದಿದೆ. ಈ ಎಲ್ಲಾ ಆರ್ಥಿಕ ಹೊಣೆಗಾರಿಕೆಗಳನ್ನು ಹಾಗೂ ನಿಗಮಗಳ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿಯೇ ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ.

ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ (ಸಾರಿಗೆ ಇಲಾಖೆ) ಪುಷ್ಪ ವಿ.ಎಸ್. ಅವರು ಮೇ 12, 2026 ರಂದು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಒಟ್ಟಾರೆಯಾಗಿ, ಒಂದೆಡೆ ಹಳೆಯ 26 ತಿಂಗಳ ಹಿಂಬಾಕಿಯ ಮೊದಲ ಕಂತು ಬಿಡುಗಡೆಯಾಗಿರುವುದು ಹಾಗೂ ಮತ್ತೊಂದೆಡೆ ಹೊಸದಾಗಿ ಶೇ.12.50ರಷ್ಟು ವೇತನ ಹೆಚ್ಚಳವಾಗಿರುವುದು ಸಾರಿಗೆ ನೌಕರರಿಗೆ ಆರ್ಥಿಕವಾಗಿ ಆನೆಬಲ ತಂದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+