ಬಿಲ್ ಕಟ್ಟಲಾಗದಷ್ಟು ದರಿದ್ರ ಇಲ್ಲ ಅಂದಿದ್ರು ಅಂಬರೀಶ್
ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಟ ಕಮ್ ರಾಜ್ಯ ವಸತಿ ಸಚಿವ ಅಂಬರೀಷ್ ಅವರ ಖರ್ಚುವೆಚ್ಚವನ್ನು ಸೂಪರ್ ಸ್ಟಾರ್ ರಜನಿಕಾಂತ್ ಪಾವತಿಸಿದ್ದರು, ಅಂಬಿ ಮದ್ಯಪಾನಿಯೆಂದು ವಿಕಿಪಿಡಿಯಾದಲ್ಲಿ ದಾಖಲಾಗಿತ್ತು.
ಸುದ್ದಿ ಹರಡಿ ಅದು ರಾದ್ಧಾಂತವಾದ ನಂತರ ವಿಕಿಪಿಡಿಯಾ ಅದನ್ನು ಹಿಂದಕ್ಕೆ ಪಡೆದಿತ್ತು. ಆಸ್ಪತ್ರೆಯ ದುಡ್ಡು ಕಟ್ಟಲಾಗದಷ್ಟು ದಾರಿದ್ರ್ಯ ನನಗೆ ಬಂದಿಲ್ಲ ಎಂದು ಅಂಬರೀಶ್ ಕೂಡಾ ಆಕ್ರೋಶ ವ್ಯಕ್ತ ಪಡಿಸಿದ್ದರು. ಶಾಸಕರಿಗೆ ವೈದ್ಯಕೀಯ ಬಿಲ್ಲಿನಲ್ಲಿ ಐದರಿಂದ ಏಳು ಲಕ್ಷದಷ್ಟು ಮೊತ್ತವನ್ನು ಸರಕಾರ ಮರುಪಾವತಿಸ ಬಹುದು ಎನ್ನುವುದು ಈಗಿರುವ ಕಾನೂನು.
ಆದರೆ, ಅಂಬರೀಶ್ ಅವರ ವಿಚಾರದಲ್ಲಿ ಹಣಕಾಸು ಖಾತೆಯನ್ನೂ ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಸ್ಪೆಷಲ್ ಕೇಸ್' ಎಂದು 1.16 ಕೋಟಿ ರೂಪಾಯಿ ಮಂಜೂರು ಮಾಡಿರುವುದು ಈಗ ಚರ್ಚಾಸ್ಪದ ವಿಷಯ. ಇದರಲ್ಲಿ ಆಸ್ಪತ್ರೆಯ ವೆಚ್ಚದ ಜೊತೆ ಕುಟುಂಬದವರ ವಿಮಾನ ಪ್ರಯಾಣದ ವೆಚ್ಚವೂ ಸೇರಿದೆ. (ಅಂಬರೀಶ್ ಅನಾರೋಗ್ಯ; ಲೇಟೆಸ್ಟ್ ರಿಪೋರ್ಟ್)
ಸರಕಾರದ ಈ ನಿರ್ಧಾರದಿಂದ ತೆರಿಗೆದಾರರ ಕಣ್ಣು ಈಗ ಕೆಂಪಾಗಿರುದರಲ್ಲಿ ಆಶ್ಚರ್ಯವೇನೂ ಇಲ್ಲ. ಯಾಕೆಂದರೆ, ಕೇಂದ್ರ ವಿತ್ತ ಸಚಿವರು ವರ್ಷದ ಆಯವ್ಯಯ ಮಂಡಿಸುತ್ತಿರಬೇಕಾದರೆ ತೆರಿಗೆದಾರ ಸಚಿವರು ಏನಾದರೂ ಇನ್ನೂ ಹೆಚ್ಚು 'ತೆರಿಗೆ ವಿನಾಯತಿ' ದಯಪಾಲಿಸುತ್ತಾರೆನೋ ಎನ್ನುವ ಆಶಾದಾಯಕ ಮನಸ್ಸಿನಲ್ಲಿರುತ್ತಾನೆ.

ಇನ್ನೊಂದೆಡೆ, ಆಸ್ಪತ್ರೆಯ ಖರ್ಚು ಭರಿಸಲಾಗದಷ್ಟು ಅಂಬರೀಷ್ ಅಶಕ್ತರೇ ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ನೆ. ಚಿತ್ರರಂಗದ ಒಳಗೆ, ಹೊರಗೆ ಮತ್ತು ರಾಜಕೀಯದಲ್ಲಿ ಅಸಂಖ್ಯಾತ ಅಭಿಮಾನಿಗಳು ಮತ್ತು ಸ್ನೇಹಿತರನ್ನು ಹೊಂದಿರುವ ಅಂಬಿಗೆ ಆಸ್ಪತ್ರೆಯ ಬಿಲ್ ಭರಿಸಲಾಗದಷ್ಟು ದಾರಿದ್ರ್ಯ ಇರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಚಿತ್ರರಂಗದಲ್ಲಿ 'ಕಲಿಯುಗದ ಕರ್ಣ' ಎಂದೇ ಹೆಸರು ಮಾಡಿರುವ ಅಂಬರೀಶ್ ಬಯಸಿದ್ದಲ್ಲಿ ಕೋಟಿ ರೂಪಾಯಿಗಿಂತ ಹೆಚ್ಚೇ ಆರ್ಥಿಕ ನೆರವು ಹರಿದುಬರುತ್ತಿತ್ತು. ಆದರೂ ಸರಕಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆ ಮತ್ತು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯ ಬಿಲ್ಲನ್ನು ಮಂಜೂರು ಮಾಡಿರುವುದು ಸರಕಾರದ ದ್ವಂದ್ವ ನೀತಿಯನ್ನು ಪ್ರಶ್ನಿಸುವಂತಾಗಿದೆ.
ಅಂಬರೀಷ್ ವೈದ್ಯಕೀಯ ಬಿಲ್ಲನ್ನು ಯಾಕೆ ಸರಕಾರ ಭರಿಸಬೇಕೆಂದು ವಿರೋಧ ಪಕ್ಷದವರೂ ತುಟಿ ಪಿಟಿಕ್ ಅನ್ನುತ್ತಿಲ್ಲ. ಯಾಕೆಂದರೆ ಒಂದು ವೇಳೆ ಅದನ್ನು ಕೆದಕಿದರೆ ಎಲ್ಲಿ ನಮ್ಮ ಬುಡಕ್ಕೆ ಬರುತ್ತೋ ಎನ್ನುವ ಭಯ ಅವರಿಗೆ ಕಾಡಿರಬಹುದು ಅಥವಾ ಮುಂದೊಂದು ದಿನ ಅಂಬರೀಶ್ ಅವರಂತೆ ನಮ್ಮ ವೈದ್ಯಕೀಯ ಬಿಲ್ಲನ್ನೂ ಭರಿಸಿ ಎಂದು ಸರಕಾರಕ್ಕೆ ತಾಕೀತು ಮಾಡಲು ಸುಲಭವಾಗಬಹುದು ಎನ್ನುವ ದೂರಾಲೋಚನೆ ಇದ್ದರೂ ಇರಬಹುದು.
ಪತ್ರಿಕೆ, ಮಾಧ್ಯಮಗಳಲ್ಲಿ ಆಸ್ಪತ್ರೆಯ ಬಿಲ್ ಪಾವತಿಸಲಾಗದೇ ಪಡಬಾರದ ನೋವು ಅನುಭವಿಸಿ ಹಣಕಾಸಿನ ನೆರವು ಬಯಸುವ ಅದೆಷ್ಟೋ ಕುಟುಂಬಗಳ ಕರುಣಾಜನಕ ಕಥೆಯನ್ನು ದಿನನಿತ್ಯ ಓದುತ್ತಿರುತ್ತೇವೆ. ಅಂಬರೀಶ್ ವಿಚಾರದಲ್ಲಿ ಸರಕಾರ ತೋರಿದ ಇಚ್ಚಾಶಕ್ತಿ ಇಂತಹ ಕುಟುಂಬಗಳ ವಿಚಾರದಲ್ಲೂ ತೋರಿದರೆ ದೇವರು ಅವರ ಕೆಲಸವನ್ನು ಮೆಚ್ಚಿಯಾನು.












Click it and Unblock the Notifications