ಇನ್ನು ಮುಂದೆ ಡಾಕ್ಟರ್‌ಗಳಂತೆ ಇಂಜಿನಿಯರ್‌ಗಳಿಗೂ ವಿಶೇಷ ಮಾನ್ಯತೆ: ಹೆಸರಿನ ಮುಂದೆ 'Er' ಬಳಸಲು ಸರ್ಕಾರ ಆದೇಶ
ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಇಂಜಿನಿಯರ್ಸ್ ದಿನದಂದೇ ರಾಜ್ಯದ ಲಕ್ಷಾಂತರ ಅಭಿಯಂತರರಿಗೆ (ಇಂಜಿನಿಯರ್) ಕರ್ನಾಟಕ ಸರ್ಕಾರವು ಭರ್ಜರಿ ಉಡುಗೊರೆಯೊಂದನ್ನ ನೀಡಿದೆ.
ಹೌದು, ವೈದ್ಯರು ತಮ್ಮ ಹೆಸರಿನ ಮುಂದೆ ಹೇಗೆ 'ಡಾಕ್ಟರ್' ಎಂದು ಹಾಕಿಕೊಳ್ಳುತ್ತಾರೋ, ಅದೇ ಮಾದರಿಯಲ್ಲಿ ಇನ್ನು ಮುಂದೆ ಇಂಜಿನಿಯರ್‌ಗಳು ಸಹ ತಮ್ಮ ಹೆಸರಿನ ಮೊದಲು 'Er' (ಇಂಜಿನಿಯರ್) ಎಂಬ ಶೀರ್ಷಿಕೆಯನ್ನ ಬಳಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ. ಈ ಕುರಿತು ಮಹತ್ವದ ಆದೇಶವನ್ನ ಹೊರಡಿಸಲಾಗಿದ್ದು, ರಾಜ್ಯದ ಇಂಜಿನಿಯರಿಂಗ್ ಸಮುದಾಯದಲ್ಲಿ ಹರ್ಷ ಮೂಡಿಸಿದೆ.

ವೈದ್ಯಕೀಯ ವೃತ್ತಿಪರರು, ವಕೀಲರು ಹಾಗೂ ಇತರ ವೃತ್ತಿಪರರು ಸಮಾಜದಲ್ಲಿ ತಮ್ಮದೇ ಆದ ವಿಶೇಷ ಶೀರ್ಷಿಕೆಗಳನ್ನ ಹೊಂದಿದ್ದಾರೆ. ಹಾಗೆಯೇ ಇತ್ತಿಚೆಗೆ ಶಿಕ್ಷಕರ ದಿನಾಚರಣೆಯ ದಿನ ಶಿಕ್ಷಕರಿಗೂ 'Tr' ಎನ್ನುವ ವಿಶೇಷ ಮಾನ್ಯತೆ ಸರ್ಕಾರ ನೀಡಿದೆ.
ಆದರೆ ದೇಶದ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಹಗಲಿರುಳು ಶ್ರಮಿಸುವ ಇಂಜಿನಿಯರ್‌ಗಳಿಗೆ ಇಂತಹದ್ದೊಂದು ನಿರ್ದಿಷ್ಟ ಹಾಗೂ ಅಧಿಕೃತ ಶೀರ್ಷಿಕೆ ಇರಲಿಲ್ಲ. ಇದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಇಂಜಿನಿಯರ್ ಗಳ ಸೇವೆ ಮತ್ತು ಕೊಡುಗೆಯನ್ನ ಸ್ಮರಿಸಿ ಗೌರವಿಸುವ ಸಲುವಾಗಿ, ಅವರ ಹೆಸರಿನ ಮೊದಲು "Er" ಎಂಬ ಪೂರ್ವಪ್ರತ್ಯಯವನ್ನ ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದರಿಂದ ಇಂಜಿನಿಯರ್‌ಗಳಿಗೆ ಸಮಾಜದಲ್ಲಿ ಒಂದು ಪ್ರತ್ಯೇಕ ಮತ್ತು ಗೌರವಾನ್ವಿತ ವೃತ್ತಿಪರ ಗುರುತು ಸಿಕ್ಕಂತಾಗಿದೆ.
ಸೆಪ್ಟೆಂಬರ್ 15 ಅಧಿಕೃತ 'ಇಂಜಿನಿಯರ್ಸ್ ದಿನ'ವಾಗಿ ಘೋಷಣೆ
ದೇಶಾದ್ಯಂತ ಸೆಪ್ಟೆಂಬರ್ 15ರಂದು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವನ್ನ ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಇದೀಗ ಕರ್ನಾಟಕ ಸರ್ಕಾರವು ಈ ಆಚರಣೆಗೆ ಮತ್ತಷ್ಟು ಅಧಿಕೃತ ಮುದ್ರೆ ಒತ್ತಿದೆ.
ಪ್ರತಿವರ್ಷ ಸೆಪ್ಟೆಂಬರ್ 15 ರಂದು 'ಇಂಜಿನಿಯರ್ಸ್ ದಿನ'ವಾಗಿ ಆಚರಿಸುವುದನ್ನು ರಾಜ್ಯ ಸರ್ಕಾರವು ತನ್ನ ಆದೇಶದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ. ಇದು ರಾಜ್ಯದ ಇಂಜಿನಿಯರ್‌ಗಳ ಪಾಲಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ನಾಡಿನ ಹೆಮ್ಮೆಯ ಪುತ್ರರಾದ ವಿಶ್ವೇಶ್ವರಯ್ಯನವರ ಜನ್ಮದಿನಕ್ಕೆ ಸರ್ಕಾರ ನೀಡಿರುವ ಅತ್ಯುನ್ನತ ಗೌರವ ಇದಾಗಿದೆ.
ನಾಡಿನ ಅಭಿವೃದ್ಧಿಯಲ್ಲಿ ಅಭಿಯಂತರರ ಪಾತ್ರ
ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ಇಂಜಿನಿಯರ್‌ಗಳ ಕಾರ್ಯವೈಖರಿ ಮತ್ತು ಅವರ ಮಹತ್ವವನ್ನ ಮುಕ್ತ ಕಂಠದಿಂದ ಪ್ರಶಂಸಿಸಲಾಗಿದೆ. "ಇಂಜಿನಿಯರ್‌ಗಳು ಎಂದರೆ ಕೇವಲ ಯಂತ್ರಗಳನ್ನು ವಿನ್ಯಾಸಗೊಳಿಸುವವರು ಅಥವಾ ಕಟ್ಟಡಗಳನ್ನ ಕಟ್ಟುವವರಷ್ಟೇ ಅಲ್ಲ. ಅವರು ಮಾನವ ಸಮುದಾಯ ಎದುರಿಸುತ್ತಿರುವ ನಾನಾ ಸವಾಲುಗಳಿಗೆ ಅತ್ಯಾಧುನಿಕ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭವಿಷ್ಯವನ್ನ ರೂಪಿಸುವ ನಿಜವಾದ ಶಿಲ್ಪಿಗಳಾಗಿದ್ದಾರೆ" ಎಂದು ಆದೇಶದಲ್ಲಿ ಹೇಳಲಾಗಿದೆ. ಡಿಜಿಟಲ್ ಯುಗದಿಂದ ಹಿಡಿದು ಬಾಹ್ಯಾಕಾಶ ಸಂಶೋಧನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿಯಂತರರ ಪಾತ್ರ ನಿರ್ಣಾಯಕವಾಗಿದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಸಮಾಜಕ್ಕೆ ಅವರು ನೀಡುತ್ತಿರುವ ನಿಸ್ವಾರ್ಥ ಹಾಗೂ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ, ಅವರಿಗೆ ಈ ವಿಶೇಷ 'Er' ಶೀರ್ಷಿಕೆಯ ಗೌರವವನ್ನು ಪ್ರದಾನ ಮಾಡಲಾಗಿದೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ವೃತ್ತಿಪರರಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗಿದೆ.
ತಂತ್ರಜ್ಞಾನ ಮತ್ತು ಮೂಲಸೌಕರ್ಯ ವಲಯದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದ್ದು, ಈ ಸಾಧನೆಯ ಹಿಂದಿರುವ ಇಂಜಿನಿಯರ್‌ಗಳಿಗೆ ಸಿಕ್ಕ ತಕ್ಕ ಪ್ರತಿಫಲ ಇದಾಗಿದೆ.


Click it and Unblock the Notifications
