Karnataka Weather: ರಾಜ್ಯದ ಒಳನಾಡಿನೆಲ್ಲಡೆ ಕವಿದ ಇಬ್ಬನಿ, ತಾಪಮಾನ ಹೆಚ್ಚಳದ ಮುನ್ಸೂಚನೆ, ಅಲರ್ಟ್
ಬೆಂಗಳೂರು: ಕರ್ನಾಟಕದಾದ್ಯಂತ ಚಳಿ ಕಡಿಮೆಯಾಗಿದ್ದು, ಬಿಸಿಲಿನ ಪ್ರಮಾಣ ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿದೆ. ಗರಿಷ್ಠ ತಾಪಮಾನದಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದೆ. ರಾಜ್ಯದ ಉತ್ತರ ಒಳನಾಡಿನೆಲ್ಲಡೆ ಇಂದು ಮಂಗಳವಾರ ಇಬ್ಬನಿ ಕವಿದಿದ್ದು ಕಂಡು ಬಂತು. ಇದು ಗರಿಷ್ಠ ತಾಪಮಾನದಲ್ಲಿ ಮತ್ತಷ್ಟು ಏರಿಕೆಯ ಮುನ್ಸೂಚನೆಯಾಗಿದೆ. ವಾಡಿಕೆಯಂತೆ ಶಿವರಾತ್ರಿ ಸಮೀಪಿಸುತ್ತಿದ್ದಂತೆ ಒಣಹವೆ ಪ್ರಮಾಣ ಏರಿಕೆ ಆಗುತ್ತದೆ. ಇದೇ ತಿಂಗಳಾಂತ್ಯಕ್ಕೆ ಬಿಸಿಲಿನ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಪ್ರಕಾರ, ರಾಜ್ಯದ ಕರಾವಳಿ ಭಾಗದಲ್ಲಿ ಈಗಾಗಲೇ ಒಣಹವೆ ಸೃಷ್ಟಿಯಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ ಸೇರಿ ವಿವಿಧೆಡೆ ಕೊಂಚ ಚಳಿ, ತಂಪು ವಾತಾವರಣ ನಿರ್ಮಾಣವಾಗಿತ್ತು. ಉತ್ತರ ಒಳನಾಡಿನಲ್ಲಿ ಕ್ರಮೇಣ ಬಿಸಿಲು ಹೆಚ್ಚಾಗುತ್ತಿದೆ. ಇದು ಶಾಖದ ಅಲೆಯ ಮುನ್ಸೂಚನೆಯು ಆಗಿದೆ. ಎರಡು ದಿನದಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ 1-2 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಆಗಿದೆ.

ಇಬ್ಬನಿ ಅಬ್ಬರ: ಶಾಖದ ಅಲೆ ಮುನ್ಸೂಚನೆ
ಇಂದು ಮಂಗಳವಾರ ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಗದಗ, ಕೊಪ್ಪಳ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಇಬ್ಬನಿ (ಮಂಜು/ಕಾವಳ) ಹೇರಳ ಪ್ರಮಾಣದಲ್ಲಿ ದಾಖಲಾಗಿತ್ತು. ಇದರಿಂದ ಎದುರಿನ ವಸ್ತು, ವ್ಯಕ್ತಿಗಳು, ದಾರಿ ಕಾಣದಷ್ಟು ಅಗೋಚರತೆ ಸೃಷ್ಟಿಯಾಗಿತ್ತು. ಈ ರೀತಿ ಆದಾಗ ಆ ದಿನ ಪೂರ್ತಿ ಹೆಚ್ಚಿನ ತಾಪಾಮಾನ, ಶಾಖದ ಅನುಭವವಾಗುತ್ತದೆ. ಒಳನಾಡಿನ ಜನರು ಇಂದಿನಿಂದ ಬಿರು ಬೇಸಿಗೆ ಎದುರಿಸಲಿದ್ದಾರೆ.
ಮೈಸೂರಲ್ಲಿ ರಾಜ್ಯದ ಗರಿಷ್ಠ ತಾಪಮಾನ ದಾಖಲು
ಮುಂದಿನ ಒಂದು ವಾರ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಾದ್ಯಂತ ಶುಷ್ಕ ವಾತಾವರಣ ಮುಂದುವರಿಯಲಿದೆ. ಗರಿಷ್ಠ ತಾಪಮಾನದಲ್ಲಿ ಏರಿಕೆ ನಿರೀಕ್ಷೆ ಇದೆ. ನೆನ್ನೆ ಸೋಮವಾರ (ಫೆಬ್ರವರಿ 09) ಭಾರತದಲ್ಲೇ ಅತೀ ಗರಿಷ್ಠ ತಾಪಮಾನ ಕರ್ನಾಟಕ ಕಾರವಾರದಲ್ಲಿ (37 ಡಿ.ಸೆ) ದಾಖಲಾಗಿದೆ. ಇಂದು ಕಾರವಾರದಲ್ಲಿ ಗರಿಷ್ಠ ತಾಪಮಾನ 33.6 ಡಿಗ್ರಿ ಸೆಲ್ಸಿಯಸ್, ಮೈಸೂರಲ್ಲಿ (ಸುತ್ತೂರು) ರಾಜ್ಯದ ಅತ್ಯಧಿಕ ಗರಿಷ್ಠ ತಾಪಮಾನ 35.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಉಳಿದಂತೆ ಕಲಬುರಗಿ ಮತ್ತು ಬಳ್ಳಾರಿಯಲ್ಲಿ 34 ಡಿಗ್ರಿ ಸೆಲ್ಸಿಯಸ್, ವಿಜಯಪುರ 32 ಡಿಗ್ರಿ ಸೆಲ್ಸಿಯಸ್, ತುಮಕೂರು, ಗದಗ, ಕೊಪ್ಪಳದಲ್ಲಿ ತಲಾ 32 ಡಿಗ್ರಿ ಸೆಲ್ಸಿಯಸ್, ಹಾಸನ, ಚಿತ್ರದುರ್ಗ, ಹಿರಿಯೂರು, ಕೋಲಾರ, ಹಾವೇರಿ, ಧಾರವಾಡ, ಬೆಳಗಾವಿ ಏರ್‌ಪೋರ್ಟ್, ಹೊನ್ನಾವರ, ಮಂಗಳೂರು ವಿಮಾನ ನಿಲ್ದಾಣ ದಲ್ಲಿ ತಲಾ 31 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಇನ್ನೂ ಬೆಂಗಳೂರಿನಲ್ಲಿ ಇಂದು ಮಂಗಳವಾರ ಬೆಳಗ್ಗೆ ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 15-16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ ನಗರದ ಕೆಲವೆಡೆ ಮಂಜು ಕವಿಯುವ ನಿರೀಕ್ಷೆ ಇದೆ. ಸ್ವಚ್ಚ ನೀಲಿ ಆಕಾಶ, ಹಗಲು ಒಣಹವೆ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications