ಅಗ್ನಿಪರೀಕ್ಷೆ ಗೆದ್ದು, ವಿರೋಧಿಗಳಿಗೆ ಸೆಡ್ಡು ಹೊಡೆಯುತ್ತಾರಾ ಸಿದ್ದು?

ಮೈಸೂರು, ಏಪ್ರಿಲ್ 13: ಈ ಬಾರಿಯ ವಿಧಾನಸಭಾ ಚುನಾವಣೆ ಇದುವರೆಗೆ ನಡೆದಿರುವ ಚುನಾವಣೆಗಳಿಗೆ ಹೋಲಿಸಿದರೆ ಒಂದಷ್ಟು ಭಿನ್ನವಾಗಿರುವುದಂತು ಸತ್ಯ. ಒಂದೆಡೆ ಮೋದಿ ಅಲೆ, ಮತ್ತೊಂದೆಡೆ ಕಾಂಗ್ರೆಸ್ ಗೆ ಅಧಿಕಾರ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ, ಇದೆಲ್ಲದರ ನಡುವೆ ಪುತ್ರ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು.
2 ಕ್ಷೇತ್ರಗಳಲ್ಲಿ ಸ್ಪರ್ಧೆ: ಸಿದ್ದು, ಪರಂ ಬೇಡಿಕೆಗೆ ಹೈಕಮಾಂಡ್ ನಕಾರ?!
ಒಟ್ಟಾರೆ ಎಲ್ಲರೂ ಗೆದ್ದೇ ಗೆಲ್ಲಬೇಕೆಂಬ ಪಣತೊಟ್ಟು ಚುನಾವಣಾ ಅಖಾಡಕ್ಕಿಳಿದಿದ್ದು, ಗೆಲುವಿಗಾಗಿ ಏನೆಲ್ಲ ಕಸರತ್ತು, ತಂತ್ರ ಮಾಡಬಹುದೋ ಅದೆಲ್ಲವನ್ನು ಮಾಡತೊಡಗಿದ್ದಾರೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತನ್ನದೇ ಆದ ವರ್ಚಸ್ಸನ್ನು ಕಳೆದೊಂದು ದಶಕದಿಂದ ಪಡೆದುಕೊಂಡಿದ್ದಾರೆ. ಆ ವರ್ಚಸ್ಸಿನ ಮೇಲೆಯೇ ಅವರು ವಿರೋಧಪಕ್ಷದ ನಾಯಕನಾಗಿದ್ದುಕೊಂಡೇ ಬಿಜೆಪಿ ವಿರುದ್ಧ 2013ರಲ್ಲಿ ರಣಕಹಳೆ ಮೊಳಗಿಸಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾದರು.
ಸಿದ್ದರಾಮಯ್ಯ ಸೋಲಿಗಾಗಿ ಕಾದು ಕುಳಿತ ನಾಯಕರ ಪಟ್ಟಿ!
ಕಳೆದ ಐದು ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ರೀತಿ ಮತ್ತು ಅವರ ಹಲವು ಯೋಜನೆಗಳು ಅವರನ್ನು ಕಾಂಗ್ರೆಸ್ ನ ಕ್ಯಾಪ್ಟನ್ ಆಗಿ ಮಾಡಿದೆ. ಇವತ್ತು ಅವರ ಸಾರಥ್ಯದಲ್ಲೇ ಕಾಂಗ್ರೆಸ್ ನಾಯಕರು ಚುನಾವಣೆಗೆ ಹೋಗುತ್ತಿದ್ದಾರೆ. ಹೈಕಮಾಂಡ್ ಗೂ ಇವರು ಹತ್ತಿರವಾಗಿದ್ದಾರೆ.

ಗೆಲ್ಲುವ ವಿಶ್ವಾಸ ಕಳೆದುಕೊಂಡರಾ ಸಿದ್ದರಾಮಯ್ಯ..?!
ಕಳೆದೊಂದು ತಿಂಗಳ ಹಿಂದೆ ನಮ್ಮದೇ ಗೆಲುವು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬರುತ್ತಿದ್ದಂತೆಯೇ ಮೊದಲಿನಷ್ಟು ವಿಶ್ವಾಸ ಇಲ್ಲದಾಗಿದೆ ಎಂಬುದು ಅವರ ವರ್ತನೆಗಳು, ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಹೇಳುತ್ತಿವೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತೇನೆ. ಇಲ್ಲಿನ ಮತದಾರರು ನನಗೆ ರಾಜಕೀಯವಾಗಿ ಮರುಜನ್ಮ ನೀಡಿದವರು. ಹೀಗಾಗಿ ಇದರೊಂದಿಗೆ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎನ್ನುವುದು ಬರೀ ಗಾಸಿಪ್ ಎಂದು ತಳ್ಳಿಹಾಕಿದ್ದರು.
ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

ನಂತರ ಬಾದಾಮಿ ಕ್ಷೇತ್ರದ ಮೇಲೆ ಸಿದ್ದು ಕಣ್ಣು
ಆದರೆ ದಿನಕಳೆದಂತೆಲ್ಲ ಪರಿಸ್ಥಿತಿ ಜಟಿಲವಾಗುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಅಷ್ಟೊಂದು ಸುಲಭವಲ್ಲ ಎಂಬುದು ಸಿಎಂಗೆ ಗೊತ್ತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ ಸಿಎಂಗೆ ಸದ್ಯದ ಸ್ಥಿತಿ ಪರಿಚಯವಾಗಿದೆ. ಹೀಗಾಗಿ ಅವರು ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಮೊದಮೊದಲು ಬಾದಾಮಿ ಟಿಕೆಟ್ ಆಕಾಂಕ್ಷಿ ಬಿ.ಬಿ.ಚಿಮ್ಮನಕಟ್ಟಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅವರ ಮನವೊಲಿಸುವ ಯತ್ನವಾಗಿತ್ತು.

ಸಿದ್ದರಾಮಯ್ಯಗೆ ಅಗ್ನಿ ಪರೀಕ್ಷೆ
ಸಿಎಂ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಕೂಡ ಇದೇ ನಿರ್ಧಾರಕ್ಕೆ ಬಂದಿದ್ದರು. ಇದು ಪಕ್ಷದಲ್ಲಿ ಭಾರೀ ಗೊಂದಲ, ಆಕ್ರೋಶಕ್ಕೆ ಕಾರಣವಾಗಿತ್ತು.ಇದೀಗ ಹೈಕಮಾಂಡ್ ಒಂದೇ ಕಡೆ ಸ್ಪರ್ಧಿಸುವಂತೆ ಖಡಕ್ ಸೂಚನೆ ನೀಡಿದ್ದು ಎರಡು ಕ್ಷೇತ್ರದಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಲು ಅವರ ವಿವೇಚನೆಗೆ ಬಿಟ್ಟಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಾರೀ ಶಾಕ್ ನೀಡಿದೆ. ಇದೆಲ್ಲದರ ನಡುವೆ ಏ.16ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅದೇ ದಿನ ಆ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎನ್ನಲಾಗುತ್ತಿದ್ದು, ಒಟ್ಟಾರೆ ಜಿದ್ದಾಜಿದ್ದಿಗೆ ಚಾಮುಂಡೇಶ್ವರಿ ಕ್ಷೇತ್ರ ಸಾಕ್ಷಿಯಾಗುತ್ತಿದ್ದು, ಸಿದ್ದರಾಮಯ್ಯ ಅವರಿಗಂತೂ ಈ ಬಾರಿಯ ಚುನಾವಣೆ ಅಗ್ನಿಪರೀಕ್ಷೆಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನು ಮುಂದಿದೆ ಮತ್ತಷ್ಟು ಸವಾಲು
ಇಲ್ಲಿವರೆಗೆ ಏನು ಬೆಳವಣಿಗೆ ನಡೆದಿದೆಯೋ ಅದಕ್ಕಿಂತ ಹೆಚ್ಚು ಮತ್ತು ವಿಭಿನ್ನವಾದ ಬೆಳವಣಿಗೆ ಇನ್ನು ಮೇಲೆ ನಡೆಯುವ ಸಾಧ್ಯತೆಯಿದೆ. ಏಕೆಂದರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಷ್ಟರಲ್ಲೇ ಬಿಡುಗಡೆಯಾಗಲಿದ್ದು, ಈ ವೇಳೆ ಟಿಕೆಟ್ ಸಿಗದವರು ಅಸಮಾಧಾನಗೊಳ್ಳುವ ಸಾಧ್ಯತೆಯಿದೆ. ಅವರೆಲ್ಲರನ್ನು ಸಮಾಧಾನಪಡಿಸಿ ಚುನಾವಣಾ ಅಖಾಡಕ್ಕೆ ಸಿದ್ಧತೆ ಮಾಡಬೇಕಾದ ಜವಾಬ್ದಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಗಲೇರಲಿದೆ. ಎಲ್ಲವನ್ನು ಸರಿಪಡಿಸಿಕೊಂಡು ಸಿದ್ದರಾಮಯ್ಯ ಹೇಗೆ ಚುನಾವಣೆಯನ್ನು ಎದುರಿಸುತ್ತಾರೆ ಎಂಬುದಕ್ಕೆ ಮುಂದಿನ ದಿನಗಳು ಸಾಕ್ಷಿಯಾಗಲಿವೆ.