ಮತದಾನ; ನೆರೆ ರಾಜ್ಯದಿಂದ ಬಂದ ಪೊಲೀಸರ ಅಂಕಿ ಸಂಖ್ಯೆ
ಬೆಂಗಳೂರು, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಬಿರುಸಿನಿಂದ ಸಾಗಿದೆ. ಜನರ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಸಂಜೆ 6 ಗಂಟೆಯ ತನಕ ಜನರು ತಮ್ಮ ಹಕ್ಕು ಚಲಾವಣೆ ಮಾಡಲು ಅವಕಾಶವಿದೆ.
ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 5,30,85,566 ಜನರು ಮತಚಲಾವಣೆ ಮಾಡಲು ಅರ್ಹರು.

ಒಂದೇ ಹಂತದಲ್ಲಿ ಮತದಾನ ನಡೆಯುತ್ತಿರುವುದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 84,119 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇವರಲ್ಲಿ 304 ಡಿವೈಎಸ್‌ಪಿ, 991 ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದ್ದಾರೆ.
2610 ಪಿಎಸ್ಐ, 5803 ಎಎಸ್‌ಐ, 46421 ಹೆಚ್‌ಸಿ/ಪಿಸಿ, ಹೋಂ ಗಾರ್ಡ್‌ಗಳು 27,990 ನಿಯೋಜನೆ ಮಾಡಲಾಗಿದೆ. ಕರ್ನಾಟಕದ ಪೊಲೀಸರು ಮಾತ್ರವಲ್ಲ ನೆರೆ ರಾಜ್ಯಗಳಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ಹೆಚ್ಚುವರಿ ಪೋಲಿಸ್ ಮತ್ತು ಹೋಮ್ ಗಾರ್ಡ್‌ಗಳನ್ನು ಕರೆಸಲಾಗಿದೆ.

ಎಷ್ಟು ಸಿಬ್ಬಂದಿಗಳು; 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಅದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರದಿಂದ ಹೋಂ ಗಾರ್ಡ್‌ಗಳು 3 ಸಾವಿರ ಜನರು ಆಗಮಿಸಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿ ಕರೆಸಿಲ್ಲ.
ಗೋವಾದಿಂದ 100 ಪೊಲೀಸ್, 100 ಹೋಂ ಗಾರ್ಡ್ ಆಗಮಿಸಿದ್ದಾರೆ. ಕೇರಳದಿಂದ 600 ಪೊಲೀಸರನ್ನು ಕರೆಸಲಾಗಿದೆ. ತಮಿಳುನಾಡಿನಿಂದ 500 ಪೊಲೀಸ್ ಮತ್ತು 1 ಸಾವಿರ ಹೋಂ ಗಾರ್ಡ್ ಆಗಮಿಸಿದ್ದಾರೆ.
ಆಂಧ್ರ ಪ್ರದೇಶದಿಂದ 1000 ಪೊಲೀಸ್ ಮತ್ತು 1000 ಹೋಂ ಗಾರ್ಡ್ ಕರೆಸಿದ್ದಾರೆ. ತೆಲಂಗಾಣದಿಂದ 516 ಪೊಲೀಸ್ ಮತ್ತು 684 ಹೋಂ ಗಾರ್ಡ್ ಕರ್ನಾಟಕದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಮತದಾನ ಪ್ರಮಾಣ; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಕಾರ್ಯ ಪ್ರಗತಿಯಲ್ಲಿದೆ. ಬೆಳಗ್ಗೆ 9 ಗಂಟೆಯ ತನಕ ರಾಜ್ಯದಲ್ಲಿ ಶೇ 8.26ರಷ್ಟು ಮತದಾನವಾಗಿದೆ. ಹಲವು ಕ್ಷೇತ್ರಗಳ ಗಣ್ಯರು ಮತದಾನ ಮಾಡಿ ಜನರು ಸಹ ತಪ್ಪದೇ ಮತದಾನ ಮಾಡಿ ಎಂದು ಕರೆ ನೀಡುತ್ತಿದ್ದಾರೆ.
ಶಾಂತಿಯುತ ಮತದಾನಕ್ಕಾಗಿ ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಸೆಕ್ಷನ್ 144 ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾನ ಸಂದರ್ಭದಲ್ಲಿ ಯಾವುದೇ ತೊಂದರೆ ಅಥವಾ ಭಯ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಚುನಾವಣಾ ಸಹಾಯವಾಣಿ 1950 ಗೆ ಅಥವಾ ಪೊಲೀಸ್ ಸಹಾಯವಾಣಿ, 112 ಗೆ ಕರೆ ಮಾಡಬಹುದು.
ಸಂಜೆ 6 ಗಂಟೆಗೆ ಮತದಾನ ಪೂರ್ಣಗೊಂಡ ಬಳಿಕ ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ನಿಗದಿತ ಮತಎಣಿಕೆ ಕಾರ್ಯಕ್ಕೆ ಸಾಗಣೆ ಮಾಡಲಾಗುತ್ತದೆ. ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ.












Click it and Unblock the Notifications