ಕರ್ನಾಟಕ ಚುನಾವಣೆ: ಪ್ರಪ್ರಥಮ ಬಾರಿಗೆ ಈ ಅರ್ಹರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ, ಪ್ರಕ್ರಿಯೆ ಹೇಗಿರಲಿದೆ? ತಿಳಿಯಿರಿ
ನವದೆಹಲಿ/ಬೆಂಗಳೂರು, ಮಾರ್ಚ್ 29: ಬಹುನಿರೀಕ್ಷೆಯ ಕರ್ನಾಟಕ ವಿಧಾನಸಭಾ ಚುನಾವಣೆ 2023 ದಿನಾಂಕ ಪ್ರಕಟಗೊಂಡಿದ್ದು, ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದೆ. ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ ಕೇಂದ್ರ ಚುನಾವಣಾಧಿಕಾರಿಗಳು ಮತ್ತೊಂದು ಹೊಸ ವಿನೂತನ ಪ್ರಯತ್ನವೊಂದಕ್ಕೆ ಕೈ ಹಾಕಿರುವ ಬಗ್ಗೆ ಪ್ರಕಟಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಇದೇ ಪ್ರಪ್ರಥಮ ಬಾರಿಗೆ ಹಲವರಿಗೆ ಮನೆಯಿಂದಲೇ ಮತ ಹಾಕುವುದಕ್ಕೆ (ಮತದಾನ) ಕೇಂದ್ರ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಹಾಗಾದರೆ ಮನೆಯಲ್ಲಿ ಮತದಾನ ಮಾಡುವವರು ಯಾರು? ಅವರ ಮತದಾನದ ಪ್ರಕ್ರಿಯೆ ಹೇಗಿರಲಿದೆ, ಯಾರು ಮನೆಯಿಂದ ಮತದಾನಕ್ಕೆ ಅರ್ಹರು ಎಂಬ ಮಾಹಿತಿ ಇಲ್ಲಿ ತಿಳಿಯಬಹುದು.

ರಾಷ್ಟ್ರ ರಾಜಧಾನಿ ನೆವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷದ ಹಿರಿಯನಾಗರಿಕರು, ಅದಕ್ಕೂ ಮೇಲ್ಪಟ್ಟ ಹಿರಿಯರು/ವೃದ್ಧರು ಅಂಗವೈಕಲ್ಯವುಳ್ಳವರು ಮತ್ತು ಹಾಸಿಗೆ ಹಿಡಿದು ಎದ್ದು ಬರಲಾಗದ ಸ್ಥೀತಿಯಲ್ಲಿರುವವರು ಮನೆಯಿಂದಲೇ ಮತದಾನ ಮಾಡಲು ಅರ್ಹರು.
ಮೇ 10ರಂದು ಜರುಗಲಿರುವ ಮತದಾನದ ದಿನದಂದು ಇಂತವರಿಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ನೀಡಲಾಗಿದೆ. ಈ ಬಾರಿ ರಾಜ್ಯದಲ್ಲಿ ಅತಿ ಹಿರಿಯ ಮತದಾರರಿಗೆ ಅನುಕೂಲವಾಗುವಂತೆ ಹೊಸ ಪ್ರಯೋಗವೊಂದನ್ನು ನಾವು ಮಾಡಲಿದ್ದೇವೆ. ಇದು ಇದೇ ಮೊದಲ ಭಾರಿ ಎನ್ನುವುದು ಮತ್ತೊಂದು ವಿಶೇಷ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಒಟ್ಟು 5.21 ಕೋಟಿ ಮತದಾರರು ಮತದಾನದ ಅರ್ಹತೆ ಹೊಂದಿದ್ದಾರೆ. ಅದರಲ್ಲಿ 80 ವರ್ಷ ಮೇಲ್ಪಟ್ಟ 12,15,763 ಮತದಾರರು ಇದ್ದಾರೆ. 100 ವರ್ಷ ಮೇಲ್ಪಟ್ಟವರು 16,976 ಮಂದಿ ಇದ್ದಾರೆ. ಅದೇ ರೀತಿ ವಿಕಲಚೇತನರ ಸಂಖ್ಯೆ ರಾಜ್ಯದಲ್ಲಿ 5.55 ಲಕ್ಷದಷ್ಟಿದೆ. ಅವರೆಲ್ಲರು ಈ ಬಾರಿ ತಮ್ಮ ಮನೆಗಳಿಂದಲೇ ಮನತದಾನ ಮಾಡಬಹುದಾಗಿದೆ ಎಂದರು.

ಮತದಾನ ನಮ್ಮ ಸಾಂವಿಧಾನಿಕ ಹಕ್ಕು. ಅದನ್ನು ಚಲಾಯಿಸುವ ಮೂಲಕ ಅರ್ಹರನ್ನು ಆಯ್ಕೆ ಮಾಡಬೇಕಿದೆ. ಈ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು. ಈ ಮಹತ್ತರ ಕಾರಣದಿಂದಲೇ ಮತಗಟ್ಟೆಗಳಿಗೆ ಬರಲು ಆಗದ ದಿವ್ಯಾಂಗರು, ಕಾಯಿಲೆಗಳಿಂದ ಹಾಸಿಗೆ ಹಿಡಿದವರು ಮತ್ತು 80 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು/ವೃದ್ಧರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ಕಲ್ಪಿಸಲಾಗಿದ್ದು, ಅದಕ್ಕಾಗಿ ವಿಶೇಷ ಸೌಲಭ್ಯ ನೀಡಲಾಗುವುದು ಎಂದು ಅವರು ವಿವರಿಸಿದರು.
ಮನೆಯಿಂದ ಮತದಾನ: ಪ್ರಕ್ರಿಯೆ ಹೇಗಿರುತ್ತದೆ?
* ಮನೆಯಿಂದ ಮತಹಾಕುವವರಿಗೆ ಚುನಾವಣೆ ಆಯೋಗದ ವೆಬ್‌ಸೈಟ್, ವೋಟರ್ ಹೆಲ್ಪ್‌ಲೈನ್ ಇಲ್ಲವೇ ಸಕ್ಷಮ್ ಆ್ಯಪ್‌ನಲ್ಲಿ ನೋಂದಣಿ ಕಡ್ಡಾಯ.
* ಸ್ಥಳೀಯ ಬೂತ್ ಮಟ್ಟದ ಚುನಾವಣಾಧಿಕಾರಿಗಳ ಕಚೇರಿಗಳಲ್ಲೂ ನೋಂದಣಿ ಮಾಡಬಹುದು.
* ನೋಂದಣಿ ಬಳಿಕ ಮತದಾರರ ಮನೆಗೆ ಪೊಲೀಸ್ ಭದ್ರತೆ ಸಹಿತಿ ಅಂಚೆ ಮತಚೀಟಿ ರವಾನೆ ಆಗಲಿದೆ.
* ಮನೆಯಲ್ಲಿ ಗೌಪ್ಯವಾಗಿ ಮತ ಹಾಕಲು ವ್ಯವಸ್ಥೆ ಮಾಡುವ ಜೊತೆಗೆ ಆ ಪ್ರಕ್ರಿಯೆಯನ್ನು ವಿಡಿಯೋ ಮೂಲಕ ಚಿತ್ರೀಕರಣ,
* ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ರಾಜಕೀಯ ಪಕ್ಷ ಮೊದಲೇ ಮಾಹಿತಿ ಒದಗಿಸುವುದು.












Click it and Unblock the Notifications