DK Shivakumar Helicopter: ಗ್ರೇಟ್ ಎಸ್ಕೇಪ್; ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು,ಮೇ2: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಮಧ್ಯಾಹ್ನ ಕೋಲಾರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ತುರ್ತು ಭೂ ಸ್ಪರ್ಶ ಮಾಡಲಾಗಿದ್ದು, ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜತೆಗಿದ್ದು, ನನ್ನನ್ನು ಕಾಪಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಹೆಲಿಕಾಪ್ಟರ್ ನಲ್ಲಿ ಇದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಪೈಲಟ್ ಜಾಗರೂಕತೆಯಿಂದ ಭಾರಿ ಅವಘಡ ತಪ್ಪಿದೆ. ಶಿವಕುಮಾರ್ ಅವರು ಮುಳಬಾಗಿಲಿನಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮಕ್ಕೆ ಮಂಗಳವಾರ ಮಧ್ಯಾಹ್ನ 12.10 ಸುಮಾರಿಗೆ ಜಕ್ಕೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡಿದ್ದು, ಹೊಸಕೋಟೆ ಸಮೀಪ ಹದ್ದು ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ಗಾಜು ಒಡೆದಿದೆ. ಈ ಸಂದರ್ಭದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದಿದ್ದು, ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಅನ್ನು ತುರ್ತು ಭೂ ಸ್ಪರ್ಶ ಮಾಡಿದ್ದಾರೆ.

ಇನ್ನೂ ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ನಾನು ನಂಬಿರುವ ಶಕ್ತಿ ಹಾಗೂ ದೇವರು ನನ್ನ ಜತೆಗಿದ್ದು, ನನ್ನನ್ನು ಕಾಪಾಡಿದ್ದಾರೆ. ನಮ್ಮ ಹೆಲಿಕಾಪ್ಟರ್ ಟೇಕಾಫ್ ಆಗಿ 7 ರಿಂದ8 ನಿಮಿಷ ಕಳೆದಿತ್ತು. ನಾವು ಹೊಸಕೋಟೆ ಹತ್ತಿರ ತಲುಪಿದಾಗ ದೊಡ್ಡ ಹದ್ದು ಬಂದು ಡಿಕ್ಕಿ ಹೊಡೆಯಿತು. ಮಾಧ್ಯಮದವರು ಪಕ್ಷದ ಪ್ರಣಾಳಿಕೆ ಕುರಿತು ಸಂದರ್ಶನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪೈಲಟ್ ಹೆಲಿಕಾಪ್ಟರ್ ಹಾರಾಟದ ಎತ್ತರವನ್ನು ಕಡಿಮೆ ಮಾಡಿ ನಮ್ಮನ್ನು ರಕ್ಷಿಸಿದ್ದಾರೆ. ಈಗ ಬೇರೆ ಹೆಲಿಕಾಪ್ಟರ್ ಸಿಗದ ಕಾರಣ, ರಸ್ತೆ ಮಾರ್ಗವಾಗಿ ಮುಳಬಾಗಿಲಿಗೆ ತೆರಳುತ್ತಿದ್ದೇವೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ, ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಭೂಸ್ಪರ್ಶವಾಗಿದೆ.

ಪ್ರಯಾಣದ ವೇಳೆ ಮೂರು ಹದ್ದುಗಳು ಎದುರಾಗಿದ್ದು, ಪೈಲಟ್ ಎರಡು ಹದ್ದುಗಳನ್ನು ದಾಟಿದ್ದರು. ಮೂರನೇ ಹದ್ದು ಕೆಳಗಡೆಯಿಂದ ಮೇಲೆ ಬಂದು ಡಿಕ್ಕಿ ಹೊಡೆಯಿತು. ಯಾರೂ ಇದರಿಂದ ಗಾಬರಿಯಾಗುವುದು ಬೇಡ, ಇದೊಂದು ಆಕಸ್ಮಿಕ, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಸಾಗೋಣ ಎಂದು ತಿಳಿಸಿದರು.
ಘಟನೆ ಏನು?
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಪ್ರಚಾರದ ಸಂಬಂಧ ಮಂಗಳವಾರ (ಮೇ 02) ಮುಳಬಾಗಿಲಿಗೆ ಹೆಲಿಕಾಪ್ಟರ್ ಮೂಲಕ ಸಂಚಾರ ಮಾಡುತ್ತಿದ್ದಾಗ ಹೊಸಕೋಟೆ ಬಳಿ ರಣ ಹದ್ದು ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹೆಲಿಕಾಪ್ಟರ್ ಗಾಜು ಪುಡಿಯಾಗಿದ್ದು, ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.
ಅದೃಷ್ಟ ವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೇ ಹೆಲಿಕಾಪ್ಟರ್ ಅನ್ನು ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅವರು ಸುರಕ್ಷಿತವಾಗಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆತಂಕ ಪಡಡುವ ಅಗತ್ಯವಿಲ್ಲ.












Click it and Unblock the Notifications