Lingayat CM Candidate: ತಾಕತ್ತಿದ್ದರೆ ಲಿಂಗಾಯತ ಸಿಎಂ ಅಭ್ಯರ್ಥಿ ಘೋಷಿಸಲಿ; ಬಿಜೆಪಿ ಸವಾಲಿಗೆ ಕಾಂಗ್ರೆಸ್ ನಿರುತ್ತರ!
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ವಾಪಸ್ ಪಡೆಯುವ ಪ್ರಕ್ರಿಯೆಗಳು ನಡೆಯಲಿವೆ.
ಈ ಬಾರಿಯ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದು, ಮೂರೂ ಪ್ರಮುಖ ಪಕ್ಷಗಳಲ್ಲಿ ಗೆಲುವಿನ ಆಸೆ ಗರಿಗೆದರಿದೆ. ಆಯಾ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮತದಾರ ಪ್ರಭುವಿನ ಮನ ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆ ರಾಜಕೀಯ ಪಕ್ಷಗಳು ಜಾತಿ ಮತ್ತು ಧರ್ಮದ ವಿಚಾರವನ್ನು ಚುನಾವಣೆ ಎಳೆದು ತರುತ್ತಿರುವುದು ಹೊಸದೇನಲ್ಲ.

ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಹೆಚ್ಚು ಸದ್ದು ಮಾಡುತ್ತಿರುವುದು ಲಿಂಗಾಯತ ಪದ. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಅಸ್ತ್ರಗಳಾಗಿ ಬಳಸಿಕೊಳ್ಳುತ್ತಿವೆ. ಲಿಂಗಾಯತರ ಮತ ಪಡೆಯಲು ಎರಡೂ ಪಕ್ಷಗಳು ಸರ್ಕಸ್ ಮಾಡುತ್ತಿವೆ ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ಪಕ್ಷ ಸೇರಿದ ಲಿಂಗಾಯತ ನಾಯಕರು
ಒಂದು ಕಡೆ ಬಿಜೆಪಿ ಪಕ್ಷವು ಲಿಂಗಾಯತ ಸಮುದಾಯವನ್ನು ಮತ್ತು ನಾಯಕರನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದೆ ಅವಮಾನಿಸಿದೆ. ಹಾಗಾಗಿ ಲಿಂಗಾಯತ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಉದಾಹರಣೆ ಸಮೇತ ಬಿಜೆಪಿಗೆ ಟಾಂಗ್ ನೀಡುತ್ತಿದೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ, 33 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಿಎಂ ಆಗಿಲ್ಲ. ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಮೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. 80ರ ದಶಕದಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಅವಮಾನಕರವಾಗಿ ಕೆಳಗಿಳಿಸಿದ ಕಳಂಕ ಕಾಂಗ್ರೆಸ್‌ಗಿದೆ ಎಂದು ತಿರುಗೇಟು ನೀಡುತ್ತಿದೆ.

ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪ್ರಾಬಲ್ಯ
2023ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಬೇಕೆಂದರೆ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪ್ರಾಬಲ್ಯವಿದ್ದು, ಹೆಚ್ಚಿನ ಶಾಸಕರು ಲಿಂಗಾಯತ ಸಮುದಾಯದಿಂದ ಆಯ್ಕೆಯಾಗುತ್ತಾರೆ.
ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬೀದರ್, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲಿಂಗಾಯತ ಮತಗಳೇ ಅಗ್ರಗಣ್ಯವಾಗಿವೆ. ಕಳೆದ ಎರಡು ದಶಕಗಳಿಂದ ಶೇ.70ಕ್ಕೂ ಹೆಚ್ಚಿನ ಲಿಂಗಾಯತ ಸಮುದಾಯ ಭಾರತೀಯ ಜನತಾ ಪಕ್ಷದ ಬೆನ್ನಿಗೆ ನಿಂತಿದೆ.
ಲಿಂಗಾಯತ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್
ಕಳೆದ ಚುನಾವಣೆ ವೇಳೆ ಲಿಂಗಾಯತ ಸಮುದಾಯ ವಿಭಜನೆ ಪ್ರಯತ್ನದ ಕಳಂಕ ಕಾಂಗ್ರೆಸ್ ಪಕ್ಷದ ಮೇಲಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲಿಂಗಾಯತ ಸಮುದಾಯ ತುಸು ಹೆಚ್ಚು ಕೋಪಗೊಂಡಿದೆ. ಹಾಗಾಗಿ ಲಿಂಗಾಯತರ ಮತ ಗೆಲ್ಲಲು ಬಿಜೆಪಿಯನ್ನು ಟೀಕಿಸಲು ಮುಂದಾಗಿದೆ.

ಬಿಜೆಪಿಯಲ್ಲಿ ಲಿಂಗಾಯತರಿಗಿಂತ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿದೆ. ಬಿ.ಎಸ್. ಯಡಿಯೂರಪ್ಪ ಸಹಿತ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ "ಲಿಂಗಾಯತ ಅಸ್ತ್ರ' ಪ್ರಯೋಗಿಸಿದ್ದು, ಬಿಜೆಪಿ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.
ಲಿಂಗಾಯತ ಸಿಎಂ ಬ್ರಹಾಸ್ತ್ರ ಬಿಟ್ಟ ಬಿಜೆಪಿ
ಇದೀಗ ಕಾಂಗ್ರೆಸ್‌ನ ಲಿಂಗಾಯತ ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿ ಪಕ್ಷವು ಹೊಸ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿ ಆಗುತ್ತಾರೆ. ಲಿಂಗಾಯತ ಸಮುದಾಯ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಅರುಣ್ ಸಿಂಗ್, ಸೋಮಣ್ಣ ಆದಿಯಾಗಿ ಬಿಜೆಪಿ ನಾಯಕರು ಲಿಂಗಾಯತ ಸಮುದಾಯದ ಮತಗಳು ಚದುರಿ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಕಾಂಗ್ರೆಸ್ ಪಕ್ಷ ನಿರುತ್ತರವಾಗಿದ್ದು, ಲಿಂಗಾಯತ ಮತ ಪಡೆಯಲು ಬಿಜೆಪಿ ಮೇಲೆ ಪ್ರಯೋಗಿಸಿದ ಅಸ್ತ್ರವೇ ಕಾಂಗ್ರೆಸ್‌ಗೆ ತಿರುಗು ಬಾಣವಾಗಿದೆ. ಏಕೆಂದರೆ, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಇದರ ಮಧ್ಯೆ ಲಿಂಗಾಯತ ಸಿಎಂ ಎಂಬ ಕೂಗು ಕೇಳಿಬರಲು ಸಾಧ್ಯವಿಲ್ಲದಂತಾಗಿದೆ.
ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿ ಲಿಂಗಾಯತ ಸಮುದಾಯದ ಹಲವು ನಾಯಕರಿದ್ದರೂ, ಅವರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಬರುವುದು ಕಷ್ಟಸಾಧ್ಯ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ತಿರುಗೇಟು ನೀಡಲು ಸಜ್ಜಾಗಿದೆ.
ಒಟ್ಟಾರೆಯಾಗಿ, ರಾಜ್ಯದ ಪ್ರಬಲ ಸಮುದಾಯದ ಮತಗಳಿಗಾಗಿ ಒಬ್ಬರ ಮೇಲೆ ಒಬ್ಬರು ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಿರುವುದಂತು ಸತ್ಯ. ಲಿಂಗಾಯತ ಸಮುದಾಯ ಯಾವ ಪಕ್ಷದ ಬೆನ್ನಿಗೆ ನಿಲ್ಲುತ್ತದೆಯೋ ಆ ಪಕ್ಷ ರಾಜ್ಯದಲ್ಲಿ ಸರ್ಕಾರ ನಡೆಸಲಿದೆ.












Click it and Unblock the Notifications