BL Santosh: ಚುನಾವಣಾ ಪ್ರಚಾರದ ತಂತ್ರಗಾರಿಕೆಯಲ್ಲಿ ಬಿಜೆಪಿ ಮುನ್ನಡೆ ಪಡೆದಿದ್ದೇಗೆ ಎಂದು ತಿಳಿಸಿದ ಬಿಎಲ್ ಸಂತೋಷ್
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಆಡಳಿತರೂಢ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಮೇ 10ರಂದು ನಡೆಯುವ ಮತದಾನಕ್ಕೆ ಮುನ್ನ ಕೊನೆಯ ಹಂತದಲ್ಲಿ ಮತದಾರರ ಮನ ಗೆಲ್ಲಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.
ಇದೇ ವೇಳೆ ಕರುನಾಡ ಕುರುಕ್ಷೇತ್ರಕ್ಕೆ ರಾಜ್ಯ ನಾಯಕರ ಜೊತೆಗೆ ರಾಷ್ಟ್ರೀಯ ನಾಯಕರೂ ಧುಮುಕಿದ್ದು, ಅಬ್ಬರದ ಸಮಾವೇಶ ಮತ್ತು ರೋಡ್ ಶೋಗಳ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಇದು ಬಹುಮತ ಪಡೆಯುವಲ್ಲಿ ಯಾವ ಪಕ್ಷಕ್ಕೆ ಎಷ್ಟು ಲಾಭ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕು.

ಇದೀಗ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಇದೇ ವೇಳೆ ತಮ್ಮ ಪಕ್ಷದ ಚುನಾವಣಾ ಪ್ರಚಾರದ ತಂತ್ರಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ.
ಪಕ್ಷದ ಚುನಾವಣಾ ಪ್ರಚಾರ ಸರಿಯಾದ ಸಮಯದಲ್ಲಿ ಸಮರ್ಪಕವಾಗಿ ನಡೆಯುತ್ತಿದೆ ಎಂದಿರುವ ಬಿ.ಎಲ್. ಸಂತೋಷ್, ವಿಪಕ್ಷ ಕಾಂಗ್ರೆಸ್ ಬೇಗನೆ ಪ್ರಚಾರ ಆರಂಭಿಸಿ ಅಭಿಯಾನದ ಉತ್ತುಂಗ ಸ್ಥಿತಿಗೆ ತಲುಪಿತ್ತು. ಆದರೆ, ಬಿಜೆಪಿ ಪಕ್ಷ ಹಾಗಲ್ಲ. ಸರಿಯಾದ ಸಮಯದಲ್ಲಿ ಪ್ರಚಾರ ತೀವ್ರಗೊಳಿಸಿದೆ. ಇದರ ಪರಿಣಾಮವಾಗಿ ಸರಳ ಬಹುಮತ ಪಡೆಯಲಿದೆ ಎಂದು ತಿಳಿಸಿದ್ದಾರೆ.
"ಟ್ವಿಟ್ಟರ್ ಸ್ಪೇಸ್'ನಲ್ಲಿ ಮಾತನಾಡಿದ ಬಿ.ಎಲ್. ಸಂತೋಷ್, ಬಜರಂಗದಳ ದೇಶ ಕಟ್ಟುವ ಸಂಸ್ಥೆ. ಅಂಥ ಸಂಸ್ಥೆಯನ್ನು ಕಾಂಗ್ರೆಸ್ ಪಿಎಫ್ಐ ಜೊತೆ ಹೋಲಿಸಿ ನಿಷೇಧ ಮಾಡಲು ಹೊರಟಿದೆ ಎಂದು ಹರಿಹಾಯ್ದರು.

ಹಿಂದುತ್ವ ಮತ್ತು ಭಯೋತ್ಪಾದನೆ ಎರಡೂ ಜೊತೆಯಾಗಿರಲು ಸಾಧ್ಯವಿಲ್ಲ. ಹಿಂದೂ ಮತ್ತು ಉಗ್ರವಾದ ಈ ಎರಡೂ ಪದಗಳು ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ನಮಗೆ ಒಂದು ಸಮಸ್ಯೆಯನ್ನು ನೀಡಿದ್ದು, ನಾವು ಅವುಗಳನ್ನು ಬಗೆಹರಿಸುತ್ತೇವೆ ಎಂದು ಬಿ.ಎಲ್. ಸಂತೋಷ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಪರಿಣಾಮಕಾರಿ ಮತ್ತು ಆಕ್ರಮಣಕಾರಿ ಸ್ವರೂಪ ಪಡೆದುಕೊಂಡಿರುವ ಈ ಸಂದರ್ಭದಲ್ಲಿ ಚುನಾವಣಾ ತಂತ್ರಗಾರಿಕೆಯನ್ನು ಬಿ.ಎಲ್. ಸಂತೋಷ್ ಬಿಚ್ಚಿಟ್ಟಿದ್ದಾರೆ.
ವಿಪಕ್ಷ ಕಾಂಗ್ರೆಸ್ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವುದಕ್ಕಾಗಿ ಬಜರಂಗದಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಇದು ಅವರಿಗೆ ತಿರುಗುಬಾಣವಾಗುವ ಸಾಧ್ಯತೆಯನ್ನು ಬಿ.ಎಲ್. ಸಂತೋಷ್ ಬಿಚ್ಚಿಟ್ಟರು.
"ಬಿಜೆಪಿಯು ತನ್ನ ಪ್ರತಿ ಪ್ರಚಾರದಲ್ಲಿ ಆಂಜನೆಯನ ಬಗ್ಗೆ ಪ್ರಸ್ತಾಪಿಸಲು ಆರಂಭಿಸಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕರೊಬ್ಬರು ಹನುಮಂತನ ಮುಂದೆ ನಮಸ್ಕರಿಸುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕಾಂಗ್ರೆಸ್‌ನವರು ತಮ್ಮದೇ ಬಲೆಯೊಳಗೆ ಸಿಲುಕಿಕೊಳ್ಳುವುದು ಎಂದರೆ ಇದೆ," ಬಿ.ಎಲ್. ಸಂತೋಷ್ ಅಭಿಪ್ರಾಯಪಟ್ಟರು.
"ಆರಂಭದಲ್ಲಿ ಕಾಂಗ್ರೆಸ್‌ನ ನಿರಂತರ ಆರೋಪ ಮತ್ತು ವಾಗ್ದಾಳಿಯಿಂದ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಅಲ್ಪ ಹಿನ್ನಡೆಯಾಗಿತ್ತು ಎನ್ನುವುದನ್ನು ಒಪ್ಪಿಕೊಂಡ ಬಿ.ಎಲ್. ಸಂತೋಷ್, ರಾಜ್ಯ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ನಿರ್ಮಿಸುವಲ್ಲಿ ವಿರೋಧ ಪಕ್ಷಗಳು ವಿಫಲವಾದವು," ಎಂದು ತಿಳಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications