ರಾಜೀನಾಮೆ ಸುಳಿವು ಕೊಟ್ಟ ಕಾಂಗ್ರೆಸ್ ಸಚಿವ ಕೆಎನ್ ರಾಜಣ್ಣ, ಕಾರಣವೇನು?
ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಕೈ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಸುಧೀರ್ಘ ಚರ್ಚೆ ನಡೆಸಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ದೆಹಲಿ ಅಂಗಳದಲ್ಲಿರುವ ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಹೌದು, ಸಹಕಾರ ಸಚಿವರೂ ಆಗಿರುವ ಕೆ.ಎನ್.ರಾಜಣ್ಣ ಅವರು ಈಗಾಗಲೇ ತಮ್ಮ ಹಾಸನ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಾರೆ. ಈಗ ತಮ್ಮ ಸಚಿವ ಸ್ಥಾನದಿಂದಲೂ ಕೆಳಗಿಳಿಯುವ ಬಗ್ಗೆ ಅವರು ಮಾತನಾಡಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ಕೊಟ್ಟಿದ್ದಾರೆ.

ಸದ್ಯ ಹೈಕಮಾಂಡ್ ಈ ಹಿಂದೆಯೇ ಲೋಕಸಭೆ ಚುನಾವಣೆವರೆಗೆ ಮಾತ್ರವೇ ಕೆಪಿಸಿಸಿ ಅಧ್ಯಕ್ಷರು ಇರುತ್ತಾರೆ ಎಂದು ತಿಳಿಸಿದ್ದರು. ಆದರೆ ಇನ್ನೂ ಬದಲಾವಣೆಯಾಗಿಲ್ಲ. ನಾವು ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಸ್ಥಾನದಿಂದ ಕೆಳಗಿಳಿಯಬೇಕು ಎನ್ನುತ್ತಿಲ್ಲ. ಆದರೆ, ಈಗ ಎದುರಾಗಿರುವ ಗೊಂದಲವನ್ನು ಪರಿಹರಿಸಬೇಕು ಎಂದು ರಾಜಣ್ಣ ಹೇಳಿದ್ದಾರೆ. ಅಲ್ಲದೆ, ಹೈಕಮಾಂಡ್ ನಾಯಕರು ಸೂಚಿಸಿದರೆ, ನಾನು ಸಚಿವ ಸ್ಥಾನ ಬಿಟ್ಟು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದೂ ಹೇಳಿದ್ದಾರೆ.
ನಾನು ಯಾವ ಜಿಲ್ಲೆಯ ಉಸ್ತುವಾರಿಯೂ ಕೇಳಲ್ಲ. ಮುಂದಿನ ಸ್ಥಳೀಯ ಚುನಾವಣೆಗಳಲ್ಲಿ ಸಾಕಷ್ಟು ಕೆಲಸ ಮಾಡಬೇಕು. ಲೋಕಸಭೆ ಚುನಾವಣೆಗೆ ಜವಾಬ್ದಾರಿ ಕೊಟ್ಟಿದ್ದರು. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನೂ ಬಲಪಡಿಸಬೇಕು. ವಿಧಾನ ಪರಿಷತ್‌ಗೆ ಅತಿ ಹಿಂದುಳಿದ ನಾಯಕರನ್ನು ಆಯ್ಕೆ ಮಾಡಬೇಕು. ತಳ ಸಮುದಾಯದವರನ್ನು ಬ್ಲಾಕ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಬೇಕು. ಈ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿದ್ದೇನೆ ಎಂದಿದ್ದಾರೆ.

ನಾನು ಎಸ್‌ಸಿ ಮತಗಳಿಂದ ಮಾತ್ರ ಗೆದ್ದಿಲ್ಲ. ನಮಗೆ ಎಲ್ಲ ಸಮುದಾಯದವರು ಬೇಕು. ದಲಿತರು ಸಿಎಂ ಸ್ಥಾನ ಕೇಳಿದ್ರೆ ತಪ್ಪೇನಿದೆ. ಯಾರಿಗೆ ಸಿಎಂ ಸ್ಥಾನ ಕೊಡಬೇಕು ಎಂಬುದನ್ನು ಹೈಜಮಾಂಡ್ ನಿರ್ಧರಿಸಲಿದೆ. ಸಿಎಂ ಸ್ಥಾನವನ್ನು ಯಾರು ಬೇಕಾದರೂ ಕೇಳಬಹುದು. ಆದರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುವುದೇ ಶಿಸ್ತು ಎಂದಿದ್ದಾರೆ.
ದಲಿತ ಸಮಾವೇಶ ಮಾಡಲು ಕೆಪಿಸಿಸಿ ಅಧ್ಯಕ್ಷರನ್ನು ಕೇಳಬೇಕಾಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ರಾಜಣ್ಣ ಟಾಂಗ್ ನೀಡಿದ್ದಾರೆ. ಇಲ್ಲಿ ಕೆಪಿಸಿಸಿ ಅಧ್ಯಕ್ಷರು ದೊಡ್ಡವರೋ ಅಥವಾ ಎಐಸಿಸಿ ಅಧ್ಯಕ್ಷರು ದೊಡ್ಡವರೋ? ಎಂದಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿಯೇ ಈ ಸಮಾವೇಶ ನಡೆಯುತ್ತೆ. ಈ ಸಮಾವೇಶಕ್ಕಾಗಿ ಮೂರು ಜಿಲ್ಲೆಗಳಲ್ಲಿ ಪ್ಲ್ಯಾನ್ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಹೈಕಮಾಂಡ್ ನಾಯಕರನ್ನು ಕರೆಯುತ್ತೇವೆ ಎಂದು ರಾಜಣ್ಣ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವುದಾದರೆ, ನಾನು ನನ್ನ ಸಚಿವ ಸ್ಥಾನವನ್ನು ಬಿಡುತ್ತೇನೆ ಎನ್ನುವ ಮೂಲಕ ರಾಜಣ್ಣ ಅವರು ಡಿಕೆ ಶಿವಕುಮಾರ್ ಅವರಿಗೆ ಶಾಕ್ ನೀಡಿದ್ದಾರೆ. ಸದ್ಯ ದೆಹಲಿಯಲ್ಲಿರುವ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಮಗೆ ನೀಡುವಂತೆ ಹೈಕಮಾಂಡ್ ನಾಯಕರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಣ್ಣ ಅವರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ.












Click it and Unblock the Notifications