ಕರ್ನಾಟಕ ಕರಾವಳಿ ಪ್ರವಾಸೋದ್ಯಮ: ಒಂದೆರಡು ಬೇಸಿಕ್ ಪ್ರಶ್ನೆಗಳು - ರಾಜಾರಾಂ ತಲ್ಲೂರು ಬರಹ
ಕರಾವಳಿ ಪ್ರವಾಸೋದ್ಯಮ: ಕಥನೀ ಮತ್ತು ಕರನೀ.. ಒಂದೆರಡು ಬೇಸಿಕ್ ಪ್ರಶ್ನೆಗಳು - ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. ಪ್ರವಾಸೋದ್ಯಮದ ಉದ್ದೇಶ ಏನು, ಪರಿಸರವನ್ನು ಆನಂದಿಸುವುದಕ್ಕೆ ಅವಕಾಶ ಮಾಡಿಕೊಡುವುದೇ, ಅಥವಾ ಪರಿಸರವನ್ನು ತೋರಿಸಿ ಕಾಸು ಗೋರುವುದೇ ? ಪ್ರವಾಸಿಗರ ಉದ್ದೇಶ ಏನು ? ಮಜಾ ಉಡಾಯಿಸುವ ಹೆಸರಿನಲ್ಲಿ ಅಪರಿಚಿತ ಜಾಗದಲ್ಲಿ ಜೀವಕ್ಕೆ ಎರವಾಗುವಂತೆ ನಡೆದುಕೊಳ್ಳುವುದೇ, ಅಥವಾ ಪರಿಸರಕ್ಕೆ ಧಕ್ಕೆ ಬಾರದಂತೆ ದುಡಿಮೆಯ ದಣಿವು ಆರಿಸಿಕೊಳ್ಳುವುದೇ
ಮಲ್ಪೆ ಸಮೀಪ ನಿನ್ನೆ (ಸೋಮವಾರ -ಜನವರಿ 26ರಂದು) ಮಧ್ಯಾಹ್ನ ದೋಣಿ ಮಗುಚಿ, ಎರಡು ಜೀವಗಳು ಇಲ್ಲವಾದವು, ಮತ್ತಿಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ, ಬೋಟು ಮಗುಚಿದಾಗ, ಒಟ್ಟು 14 ಮಂದಿ ಅದರಲ್ಲಿದ್ದವರು ಅಪಾಯಕ್ಕೆ ಸಿಲುಕಿದ್ದರು. ಈಗ ಘಟನೋತ್ತರ "ತು ತು... ಮೈ ಮೈ" ಶುರು ಆಗಿದೆ. ಇವೆಲ್ಲ ಫೈನಲಿ ಎಲ್ಲಿಗೆ ಹೋಗಿ ಮುಟ್ಟುತ್ತವೆ ಎಂಬುದು ಕರಾವಳಿಗೆ ಹೊಸದೇನಲ್ಲ. ಒಟ್ಟಿನಲ್ಲಿ ಎಲ್ಲರೂ ಹೇಳುವುದು ಒಂದು, ಆಗುವುದು ಮತ್ತೊಂದು. ಕಥನೀ ಮತ್ತು ಕರನೀಗೆ ಸಂಬಂಧವೇ ಇಲ್ಲ.

ಪರಿಸರ ಪ್ರವಾಸಗಳು ಉದ್ಯಮ ಆದಾಗ, ಅವು ಒಂದೋ ಗ್ರಾಹಕರಿಗೆ ಇಲ್ಲವೇ ಪರಿಸರಕ್ಕೆ ಧಕ್ಕೆ ತಂದೇ ತರುತ್ತವೆ. ನಿಯಮ ಪುಸ್ತಕಗಳಲ್ಲಿ ಹೇಳಿರುವುದರ ಅರ್ಧದಷ್ಟನ್ನಾದರೂ "ಉದ್ಯಮ"ಗಳು ಪಾಲಿಸಿದರೆ, ಅವರು ಅಂಗಡಿ ಮುಚ್ಚಿಕೊಂಡು ಹೋಗುವುದು ಅನಿವಾರ್ಯ. ಮೋಜು, ಕುಡಿತ, ಅಪಾಯಕಾರಿ ನಡೆವಳಿಕೆಗಳು, ಹಿಂಡು ವರ್ತನೆಗಳು, ಉಡಾಫೆ ಎಲ್ಲವನ್ನೂ ಹೊತ್ತು ಬರುವ ಪ್ರವಾಸಿಗರು ಇಲ್ಲಿ ಪರಿಸರವನ್ನು ಆನಂದಿಸುವುದೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡಿ ಹೋಗುತ್ತಾರೆ. ಅದೇ ಇಲ್ಲಿ ಪ್ರವಾಸೋದ್ಯಮದ "ಕಾಸು" ಆಗಿ ಪರಿವರ್ತನೆ ಆಗುವುದು. ಕಳೆದ ಹತ್ತು ವರ್ಷಗಳಲ್ಲಿ ಕರಾವಳಿಯುದ್ದಕ್ಕೂ ನಡೆದಿರುವ ಘಟನೆಗಳು, ಹೋಗಿರುವ ಜೀವಗಳೇ ಇದಕ್ಕೆಲ್ಲ ಸಾಕ್ಷಿ.
ನನಗೆ ಕೇಳಲಿಕ್ಕಿರುವುದು ಇಷ್ಟೇ: ಈಗಲೇ ಹೀಗೆ. ಇನ್ನು ಪ್ರವಾಸೋದ್ಯಮ ಪೂರ್ಣ ಪ್ರಮಾಣದ "ರೋಗ" ಆದ ಬಳಿಕ ಕರಾವಳಿ ಪೇಷಂಟನ್ನು ಯಾವ ಆಸ್ಪತ್ರೆ, ಯಾವ ಚಿಕಿತ್ಸೆ ಉಳಿಸೀತು? ಇಲ್ಲಿ ಬರಲಿರುವ ಮುಸುಕಿನ ಮರೀನಾಗಳು, ಒಳನಾಡು ಜಲಮಾರ್ಗಗಳು, ಅದರೊಂದಿಗೆ ಬರಲಿರುವ ಮದ್ಯ-ಮೋಜು, ಬೇಜವಾಬ್ದಾರಿಯ ಪ್ರವಾಸಿಗರು... ಇದನ್ನೆಲ್ಲ ನಿಯಂತ್ರಿಸುವುದಕ್ಕೆ, ಇಲ್ಲಿನ ನಿವಾಸಿಗಳಿಗೆ-ಉದ್ಯಮದ ಹಿತಾಸಕ್ತಿಗಳಿಗೆ-ಪ್ರವಾಸಿಗರಿಗೆ ಎಲ್ಲರಿಗೂ ಅನುಕೂಲ ಆಗಬಲ್ಲ ಮತ್ತು ಪರಿಸರಕ್ಕೆ ಹಾನಿ ಆಗದ "ರೂಲ್ ಬುಕ್" ಏನಾದರೂ ಸಿದ್ಧ ಆಗಿದೆಯ? ಕರಾವಳಿಗೆ "what to expect?" ಎಂದು ಮನವರಿಕೆ ಮಾಡಲಾಗಿದೆಯೆ?
ಆಗಿರುವ ಪರಿಸರ ನಾಶದ ಸುಧಾರಣೆ-ನಿಯಂತ್ರಣಕ್ಕೆ ಗಣಿ ಉದ್ಯಮದಲ್ಲಿ ಜಿಲ್ಲಾ ಮಿನರಲ್ ಫಂಡ್ ಇರುವಂತೆ ಕರಾವಳಿ ಪರಿಸರ ಫಂಡ್ ಕೂಡ ಸ್ಥಾಪನೆ ಆಗುವುದು - ಇಲ್ಲಿಗೆ ಬಂದ ಪ್ರತೀ ಪ್ರವಾಸಿ ತನ್ನ ಕಡೆಯಿಂದ ಆಗಿರುವ ಪರಿಸರ ಹಸ್ತಕ್ಷೇಪಕ್ಕೆ "Polluter pays" ತತ್ವದಡಿ ತೆರಿಗೆ ನೀಡುವುದು ಬೇಡವೇ? ಮಾನ್ಯ ಮುಖ್ಯಮಂತ್ರಿಗಳು Chief Minister of Karnataka, Siddaramaiah ದಯವಿಟ್ಟು ಇತ್ತ ಗಮನಿಸಿ.












Click it and Unblock the Notifications