ಬಿಜೆಪಿ ಮುಂದೆ ಈ ಸ್ಥಾನದಲ್ಲಿರುತ್ತೆ.. ಭವಿಷ್ಯ ನುಡಿದ ಸಿಎಂ ಸಿದ್ದರಾಮಯ್ಯ
ಉಪಚುನಾವಣೆಯಲ್ಲಿ ರಾಜ್ಯದ ಜಾಗೃತ ಮತದಾರರು ನೀಡಿದ್ದಾರೆ. ಇದರಿಂದಲೂ ಬುದ್ಧಿ ಕಲಿಯದೆ ಇದ್ದರೆ ರಾಜ್ಯದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ವಿರೋಧಪಕ್ಷದಲ್ಲಿಯೇ ಕೂರಿಸುವುದು ಖಚಿತ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ಆಸ್ತಿ ವಿಚಾರದಲ್ಲಿ ಕರ್ನಾಟಕದ ಬಿಜೆಪಿ ಪಕ್ಷದ ಆತ್ಮವಂಚನೆಯ ನಡವಳಿಕೆ ಮತ್ತೆ ಮತ್ತೆ ಬಯಲಾಗುತ್ತಿದ್ದರೂ ಕನಿಷ್ಠ ನಾಚಿಕೆ-ಮರ್ಯಾದೆ ಇಲ್ಲದೆ ಬೀದಿಗಿಳಿದು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಆ ಪಕ್ಷದ ರಾಜಕೀಯ ದಿವಾಳಿತನ ಮತ್ತು ಹತಾಶ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

ಬಣ ರಾಜಕೀಯದಿಂದ ಒಡೆದುಹೋಗಿರುವ ರಾಜ್ಯ ಬಿಜೆಪಿಯ ನಾಯಕರು ಪ್ರತಿಭಟನೆಯನ್ನು ನಡೆಸುತ್ತಿರುವುದು ವಕ್ಫ್ ಆಸ್ತಿ ರಕ್ಷಣೆಗೆ ಅಲ್ಲ, ಇದು ಬೀದಿಪಾಲಾಗಿರುವ ತಮ್ಮ ಮಾನರಕ್ಷಣೆಗೆ ಎನ್ನುವುದನ್ನು ರಾಜ್ಯದ ಜನರು ಅರ್ಥಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ಸಂರಕ್ಷಣೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ನೋಟಿಸ್ ನೀಡಿರುವುದು ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎನ್ನುವುದನ್ನು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯ ವಿಧಾನ ಮಂಡಲದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯೇ ವರದಿ ನೀಡಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ತಿವಿದಿದ್ದಾರೆ.
ತನ್ನ ಬಣ್ಣ ಬಯಲಾದ ನಂತರವಾದರೂ ಬುದ್ಧಿ ಕಲಿತು ಈ ಪ್ರತಿಭಟನೆಯ ನಾಟಕವನ್ನು ನಿಲ್ಲಿಸಿ ತಮ್ಮ ಮಾನ-ಮರ್ಯಾದೆಯನ್ನು ಉಳಿಸಿಕೊಳ್ಳಬೇಕೆಂದು ಅವರಿಗೆ ಸಲಹೆ ನೀಡುತ್ತೇನೆ. ಇಂತಹ ಸುಳ್ಳು ಆರೋಪ ಮತ್ತು ಅಪಪ್ರಚಾರಕ್ಕೆ ಸರಿಯಾದ ಶಿಕ್ಷೆಯನ್ನು ಇತ್ತೀಚಿನ ಚುನಾವಣೆಯಲ್ಲಿ ಮತದಾರರು ನೀಡಿದ್ದಾರೆ ಎಂದು ಉಪಚುನಾವಣೆ ಫಲಿತಾಂಶವನ್ನು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರು ಮಾಡಿದ ಅಪಪ್ರಚಾರ, ಷಡ್ಯಂತ್ರಗಳಿಗೆ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಗೆ ಮೂರು ವಿಧಾನಸಭಾ ಉಪಚುನಾವಣೆಯ ಫಲಿತಾಂಶದ ಮೂಲಕ ಜನ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಇಬ್ಬರೂ ಸೇರಿ ಅಪಪ್ರಚಾರ ಮಾಡಿದರು. ಇಬ್ಬರೂ ಒಟ್ಟಾಗಿ ಪಾದಯಾತ್ರೆ ಮಾಡಿದ್ದೇನು? ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿ ನಿರಂತರವಾಗಿ ಫಲಾನುಭವಿಗಳನ್ನು ಅವಮಾನಿಸಿದ್ದೇನು? ಸರ್ಕಾರ ಬೀಳಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದೇನು? ಜೊತೆಜೊತೆಗೆ ಚುನಾವಣಾ ಪ್ರಚಾರ ಮಾಡಿದ್ದೇನು? ಇವೆಲ್ಲವನ್ನೂ ಜನರು ಬಹಳ ತಾಳ್ಮೆಯಿಂದ ನೋಡಿ, ಪ್ರಜ್ಞಾಪೂರ್ವಕವಾಗಿ ಯೋಚಿಸಿ ಜನ ಮತ ನೀಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ ಕರ್ನಾಟಕದಲ್ಲಿ ಗ್ಯಾರಂಟಿಗಳೇ ಜಾರಿ ಆಗಿಲ್ಲ ಎಂದು ಸುಳ್ಳು ಜಾಹಿರಾತನ್ನೇ ನೀಡಿತ್ತು. ನಿರಂತರ ಸುಳ್ಳು, ಅಪಪ್ರಚಾರದಲ್ಲೇ ಈ ಉಪಚುನಾವಣೆ ನಡೆಸಿದ್ದರು. ಎಲ್ಲಾ ಸುಳ್ಳು, ಅಪಪ್ರಚಾರಗಳಿಗೂ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಅಪಪ್ರಚಾರದ ಮೂಲಕ ಧಾರ್ಮಿಕ ಉನ್ಮಾದಗಳನ್ನು ಸೃಷ್ಟಿಸಿ, ಜಾತಿ-ಧರ್ಮಗಳ ನಡುವೆ ಒಡಕು ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಯತ್ನಿಸಿದೆ. ಕರ್ನಾಟಕದ ಜಾತ್ಯತೀತ ಮತ್ತು ಶಾಂತಿಪ್ರಿಯ ಸಮಾಜ ಇದನ್ನು ಒಪ್ಪಿಕೊಳ್ಳದೆ ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು 136 ಸ್ಥಾನಗಳನ್ನು ನೀಡಿ ನಮ್ಮನ್ನು ಗೆಲ್ಲಿಸಿದ್ದಾರೆ. ಆದರೆ ಚುನಾವಣಾ ಫಲಿತಾಂಶದ ಮರುದಿನದಿಂದಲೇ ಬಿಜೆಪಿ ಮತ್ತು ಜೆಡಿಎಸ್ ಕೂಡಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನ ಶುರು ಮಾಡಿದ್ದರು. ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದು ನಮ್ಮ ಶಾಸಕರನ್ನು ಖರೀದಿಸುವ ದುಷ್ಟ ಪ್ರಯತ್ನ ಮಾಡಿದ್ದರು. ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ರಾಜ್ಯದ ಜನತೆ ಸಹಿಸುವುದಿಲ್ಲ ಎನ್ನುವುದನ್ನೂ ಈ ಫಲಿತಾಂಶ ಹೇಳಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications