ಸಿದ್ದರಾಮಯ್ಯ ಬದಲಾವಣೆ ಪಕ್ಕಾನಾ? ಸತೀಶ್ ಜಾರಕಿಹೊಳಿ - ಖರ್ಗೆ ರಹಸ್ಯ ಭೇಟಿ; ಮುಂದಿನ ಸಿಎಂ ಇವರೇನಾ?
ಬೆಂಗಳೂರು, ಅಕ್ಟೋಬರ್ 06: ರಾಜ್ಯದಲ್ಲಿ ಮುಡಾ ಪ್ರಕರಣದಲ್ಲಿ ಕಾಂಗ್ರೆಸ್ ಗೆ ದೊಡ್ಡ ಕಂಟಕವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಮುಡಾ ಸುತ್ತಿಕೊಂಡಿದೆ. ಮುಡಾ ಪ್ರಕರಣದಿಂದಾಗಿ ಸಿಎಂ ಬದಲಾವಣೆಯ ಬಗ್ಗೆ ಕೈ ಪಾಳಯದಲ್ಲಿ ಗುಸು ಗುಸು ಚರ್ಚೆ ಜೋರಾಗಿದ್ದು, ಇತ್ತ ವಿಪಕ್ಷಗಳು ಸಹ ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
ಮುಡಾ ಹಗರಣದ ಕುರಿತು ಸಿದ್ದರಾಮಯ್ಯ ಅವರು ರಾಜೀನಾಮೆಯನ್ನ ನೀಡಲ್ಲ. ಅವರ ಬೆನ್ನಿಗೆ ಶಾಸಕರು ಹಾಗೂ ಸಚಿವರು ನಿಂತಿದ್ದೇವೆ ಎಂದು ಹೇಳಿಕೊಂಡ್ರು ಕೂಡ, ಒಳಗೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಕೆಳಗಿದ್ರೆ ನಾನೂ ಕೂಡ ಸಿಎಂ ಆಗಬೇಕು ಅನ್ನೋ ಲೆಕ್ಕಾಚಾರ ನಡೆಯುತ್ತಿದೆ.

ಸಿಎಂ ಬದಲಾವಣೆಯ ಚರ್ಚೆಯ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ದೆಹಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿರುವುದು ಹಲವು ಅನುಮಾನಗಳು ಹುಟ್ಟಿಕೊಳ್ಳುವಂತೆ ಮಾಡಿದೆ. ಇನ್ನು ಸಿಎಂ ಬದಲಾವಣೆಯ ಚರ್ಚೆ ಮುನ್ನಲೆಗೆ ಬಂದಾಗ ಪ್ರಮುಖವಾಗಿ ಸತೀಶ್ ಜಾರಕಿಹೊಳಿ ಹೆಸರು ಪಕ್ಷದ ವಲಯದಲ್ಲಿ ಓಡಾಡುತ್ತಿತ್ತು. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆಯನ್ನ ನೀಡಲ್ಲ ಎಂದು ಕೈ ನಾಯಕರು ಹೇಳಿದರು ಸಹ, ಮುಡಾದಲ್ಲಿ ಕಾನೂನಿನ ಕುಣಿಕೆ ಬಿಗಿಯಾದ್ರೆ, ರಾಜೀನಾಮೆ ಕೊಡೋ ಪ್ರಸಂಗ ಬಂದ್ರೆ, ಮುಂದೆ ಯಾರನ್ನ ಸಿಎಂ ಕುರ್ಚಿ ಮೇಲೆ ಕೂರಿಸೋದು ಅನ್ನೋ ಚರ್ಚೆ ನಡೆಯುತ್ತಿದೆ.
ಮುಂದಿನ ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಜೊಳಿ ಹೆಸರು ಮುನ್ನೆಲೆಗೆ ಬಂದಿದೆ. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಭೇಟಿಯಾಗಿದ್ದು, ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಮೊದಲಿನಿಂದಲೂ ಸಹ ಸಿಎಂ ಕುರ್ಚಿಯ ಮೇಲೆ ಸತೀಶ್ ಜಾರಕಿಹೊಳಿ ಅವರು ಕಣ್ಣೀಟ್ಟಿದ್ದು, ಸಿಎಂ ರೇಸ್‌ನಲ್ಲಿರುವ ನಾಯಕರಾದ ಡಿಕೆ ಶಿವಕುಮಾರ್, ಪರಮೇಶ್ವರ್ ಕೂಡ ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿ ಮಾತನಾಡುತ್ತಿರವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಮಾತ್ರವಲ್ಲದೇ ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕೂಡ ಭೇಟಿ ಮಾಡಿದ್ದರು ಕೈ ಪಾಳಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯನವರು ಕೆಳಗಿಳಿದರೆ ಅವರ ಸ್ಥಾನಕ್ಕೆ ದಲಿತ ನಾಯಕರೊಬ್ಬರನ್ನು ತರಬೇಕೆಂಬ ಆಗ್ರಹ ಜೋರಾಗಿ ಕೇಳುತ್ತಿದೆ. ಕಾಂಗ್ರೆಸ್ ಅಷ್ಟೇ ಅಲ್ಲ, ಅತ್ತ ಬಿಜೆಪಿಯಿಂದಲೂ ಅದೇ ರೀತಿಯ ಮಾತುಗಳು ಕೇಳಿಬರುತ್ತಿವೆ.
ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನಾನೇ ಐದು ವರ್ಷವೂ ಸಿಎಂ, ನಾನು ಯಾರಿಗೂ ಹೆದರಲ್ಲ, ನಾನು ತಪ್ಪು ಮಾಡಿಲ್ಲ ಅಂತ ಬಹಿರಂಗವಾಗಿಯೇ ವಿಪಕ್ಷಗಳಿಗೂ ಹಾಗೂ ಸ್ವಪಕ್ಷದ ಸಿಎಂ ಆಕಾಂಕ್ಷಿಗಳಿಗೆ ಸಂದೇಶ ರವಾನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸುವುದಕ್ಕೆ ಹೈಕಮಾಂಡ್ ಮುಂದಾಗುವುದಿಲ್ಲ. ಒಂದು ವೇಳೇ ಕೆಳಗೆ ಇಳಿಯುವ ಪ್ರಸಂಗ ಬಂದಿದ್ದೇ ಆದಲ್ಲಿ ಮುಂದಿನ ಸಿಎಂ ಡಿಕೆ ಶಿವಕುಮಾರ್ ಆದ್ರೆ ತಮ್ಮ ವಿರೋಧ ಎಂಬ ಮಾತನ್ನು ಹೇಳಿದ್ದಾರಂತೆ ಎಂದು ಮೂಲಗಳು ತಿಳಿಸಿದೆ.
ಒಟ್ನಾಲಿ, ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಹತ್ತು ಹಲವು ನಾಯಕರು ರೇಸ್ ನಲ್ಲಿದ್ದು, ಸಂಪೂರ್ಣ ಅವದಿಯವರೆಗೂ ನಾನೇ ಸಿಎಂ, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ. ಇತ್ತ ಸಿದ್ದರಾಮಯ್ಯ ಅವರ ಮೇಲೆ ಇಷ್ಟೇಲ್ಲ ಆರೋಪ ಬಂದ್ರು ಕೂಡ ಸಿದ್ದರಾಮಯ್ಯನವರ ಹಿಂದೆ ಹೈಕಮಾಂಡ್ ಗಟ್ಟಿಯಾಗಿ ನಿಂತಿದ್ದು, ಯಾವ ತಂತ್ರಕ್ಕೆ ಹೈಕಮಾಂಡ್ ಮುಂದಾಗುತ್ತೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications