Ramya: ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳಾ ಶಾಸಕರಿಗೆ ಅವಕಾಶ ಸಿಗದಿರುವ ಬಗ್ಗೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 3 ರಂದು ಡಿ ಕೆ ಶಿವಕುಮಾರ್ ಸಂಪುಟಕ್ಕೆ 19 ಸಚಿವರು ಸೇರ್ಪಡೆಯಾಗಿದ್ದು, ಈ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ಸಿಗಬೇಕಿತ್ತು ಎಂದು ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ ಅವರು, ಸಿಎಂ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಐವರು ಮಹಿಳಾ ಶಾಸಕರ ಪೈಕಿ ಕನಿಷ್ಠ 2-3 ಜನರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು. ನನ್ನ ಪ್ರಕಾರ ಕನಿಷ್ಠ ಒಬ್ಬರನ್ನಾದರೂ ಸಚಿವರನ್ನಾಗಿ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದರೆ ಸರ್ಕಾರದ ಮೇಲೆ ಜನರಲ್ಲಿ ಇನ್ನಷ್ಟು ಉತ್ತಮ ಸಂದೇಶ ಹೋಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ಪ್ರತಿನಿಧಿತ್ವವು ಆಡಳಿತದಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಮಹಿಳಾ ಶಾಸಕರಿಗೆ ಸೂಕ್ತ ಅವಕಾಶ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ವೇಳೆ ಕಾವೇರಿ ವಿವಾದದ ಬಗ್ಗೆ ಮಾತನಾಡಿದ ರಮ್ಯಾ, ನಾನು ಯಾವಾಗಲೂ ಕರ್ನಾಟಕ, ಕಾವೇರಿ ಮತ್ತು ರೈತರ ಪರವಾಗಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು. ಕಾವೇರಿ ನೀರು ಹಂಚಿಕೆ ವಿವಾದದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರ ನಡೆದ ಕಾನೂನು ಹೋರಾಟದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಭಾಗಿಯಾಗಿದ್ದ ವಿಚಾರವನ್ನೂ ಅವರು ನೆನಪಿಸಿಕೊಂಡರು. ರಾಜ್ಯದ ಹಿತಾಸಕ್ತಿಯ ವಿಷಯ ಬಂದಾಗ ಸದಾ ಕರ್ನಾಟಕದ ಪರವಾಗಿ ನಿಲ್ಲುವ ನಿಲುವು ನನ್ನದು, ನಾನು ಮಂಡ್ಯದವಳು, ನಾನು ಯಾವಾಗಲೂ ರೈತರ ಪರವಾಗಿಯೇ ನನ್ನ ಹೋರಾಟ ಎಂದು ಹೇಳಿದರು.
ಮಹಿಳೆಯರಿಗಾಗಿ 'ಋತುತಾರೆ' ಯೋಜನೆ
ಈ ಕುರಿತು ಮಾತನಾಡಿದ ನಟಿ ರಮ್ಯಾ, ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ? ಮತ್ತು ಟ್ರೀಟ್‌ಮೆಂಟ್ ಏನೆಂಬ ಬಗ್ಗೆ ಸಿಟಿ ಭಾಗದವರಿಗೂ ಹೆಚ್ಚಾಗಿ ಗೊತ್ತಿಲ್ಲ.
ಗ್ರಾಮೀಣ ಭಾಗದವರಿಗಂತೂ ಇದರ ಬಗ್ಗೆ ಮಾಹಿತಿ ಅತಿ ಕಡಿಮೆ ಇದೆ. ಹೀಗಾಗಿ ಇದರ ಬಗ್ಗೆ ಗೃಹಾರೋಗ್ಯ ಪುಸ್ತಕದಲ್ಲಿ ಸೇರಿಸಿ ಅಂತ ಮನವಿ ಇಟ್ಟುಕೊಂಡು ಬಂದಿದ್ದೆವು. ಆದರೆ ಘೋಷಿಸಿರುವ ಯೋಜನೆಗೆ ಸರ್ಕಾರ ತನ್ನನ್ನೇ ಬ್ರ್ಯಾಂಡ್ ಅಂಬಾಸಿಡರ್ ಮಾಡಿರುವುದು ಖುಷಿ ಇದೆ ಎಂದವರು ತಿಳಿಸಿದ್ದಾರೆ.
ನಗರ ಹಾಗೂ ಗ್ರಾಮೀಣ ಎರಡೂ ಭಾಗಗಳಲ್ಲಿ ಮೆನೋಪಾಸ್ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುತ್ತದೆ. ಮೆನೋಪಾಸ್ ಸಮಯದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಹಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಬಗ್ಗೆ ಸಾಕಷ್ಟು ಮಹಿಳೆಯರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ಮಹಿಳೆಯರಲ್ಲಿ ಅರಿವು ಹೆಚ್ಚಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೆನೋಪಾಸ್ ಕುರಿತು ಮಹಿಳೆಯರಿಗೆ ಕೆಲವು ಪ್ರಶ್ನೆಗಳಿರುವ ವಿಶೇಷ ಫಾರಂ ನೀಡಲಾಗುತ್ತದೆ. ಮಹಿಳೆಯರು ಭರ್ತಿ ಮಾಡಿದ ಮಾಹಿತಿಯ ಆಧಾರದ ಮೇಲೆ ಸಮಸ್ಯೆಗಳಿರುವವರನ್ನು ಗುರುತಿಸಿ, ಅಗತ್ಯವಿದ್ದರೆ ಸ್ಕ್ಯಾನಿಂಗ್ ನಡೆಸಲಾಗುತ್ತದೆ. ಬಳಿಕ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.


Click it and Unblock the Notifications
