Karnataka Budget 2026: 10,000 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ವಿಸ್ತರಣೆ ಸಾಧ್ಯತೆ
Karnataka Budget 2026: ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ತಗ್ಗುತ್ತಿದ್ದು, ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ. ಪೂರ್ವ ಪ್ರಾಥಮಿಕ ತರಗತಿಗಳ (LKG-UKG) ಮೂಲಕವೇ ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಲು ಮುಂದಾಗಿದೆ. 2026ರ ಬಜೆಟ್‌ನಲ್ಲಿ ರಾಜ್ಯದ 10 ಸಾವಿರ ಶಾಲೆಗಳಿಗೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ವಿಸ್ತರಿಸುವ ನಿರೀಕ್ಷೆಯಿದೆ. ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರನ್ನು ಮತ್ತು ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗಳತ್ತ ಸೆಳೆಯಲು ಇದು ಪ್ರಮುಖ ಅಸ್ತ್ರವಾಗಲಿದೆ.
ನಲಿ-ಕಲಿ ಬದಲು ಎಲ್‌ಕೆಜಿ, ಯುಕೆಜಿಯತ್ತ ಒಲವು
ಸರ್ಕಾರಿ ಶಾಲೆಗಳಲ್ಲಿ ದಶಕಗಳಿಂದ ಜಾರಿಯಲ್ಲಿದ್ದ 'ನಲಿ-ಕಲಿ' ಯೋಜನೆಯನ್ನು ಕೈಬಿಡಲು ಸರ್ಕಾರ ತೀರ್ಮಾನಿಸಿರುವ ಹೊತ್ತಿನಲ್ಲಿಯೇ, ಪೂರ್ವ ಪ್ರಾಥಮಿಕ ತರಗತಿಗಳನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂಬ ಬಲವಾದ ಬೇಡಿಕೆ ಕೇಳಿಬಂದಿದೆ.
ಈಗಾಗಲೇ 2018-19ನೇ ಸಾಲಿನಿಂದ 2024-25ರ ಅವಧಿಯಲ್ಲಿ ರಾಜ್ಯದ 2,619 ಸರ್ಕಾರಿ ಶಾಲೆಗಳಲ್ಲಿ ಯಶಸ್ವಿಯಾಗಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಗೊಂಡಿವೆ. ಈ ಯೋಜನೆಯನ್ನು ಉಳಿದೆಲ್ಲಾ ಶಾಲೆಗಳಿಗೂ ಹಂತಹಂತವಾಗಿ ವಿಸ್ತರಿಸುವಂತೆ ಮತ್ತು ವಿಶೇಷವಾಗಿ ಈ ವರ್ಷ 25 ಸಾವಿರ ಶಾಲೆಗಳಿಗೆ ವಿಸ್ತರಿಸುವಂತೆ 'ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ' ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಆರ್ಥಿಕ ಸಂಪನ್ಮೂಲಗಳು ಹಾಗೂ ಮೂಲಸೌಕರ್ಯಗಳ ಲಭ್ಯತೆಯನ್ನು ಪರಿಗಣಿಸಿ, ಮುಂಬರುವ ಬಜೆಟ್‌ನಲ್ಲಿ 10,000 ಶಾಲೆಗಳಿಗೆ ಪೂರ್ವ ಪ್ರಾಥಮಿಕ ತರಗತಿಗಳನ್ನು ವಿಸ್ತರಿಸುವ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಪೋಷಕರಿಂದ ಉತ್ತಮ ಸ್ಪಂದನೆ
2025-26ನೇ ಸಾಲಿನ ಆಯವ್ಯಯದಲ್ಲಿ (ಬಜೆಟ್) 5 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವುದಾಗಿ ಸರ್ಕಾರ ಘೋಷಿಸಿತ್ತು. ಆ ಭರವಸೆಯಂತೆ ಈಗಾಗಲೇ 4,056 ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಲು ಅಧಿಕೃತ ಆದೇಶವನ್ನು ಹೊರಡಿಸಿ, ಅನುಷ್ಠಾನಕ್ಕೆ ತರಲಾಗಿದೆ. ಈಗ ಸರ್ಕಾರ ಇನ್ನೂ ಹೆಚ್ಚಿನ ಶಾಲೆಗಳಲ್ಲಿ ಈ ಜನಪ್ರಿಯ ಯೋಜನೆಯನ್ನು ವಿಸ್ತರಿಸಲು ಉದ್ದೇಶಿಸಿದೆ.
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಹಾಗೂ 'ಸಮಗ್ರ ಶಿಕ್ಷಣ ಕರ್ನಾಟಕ' ಯೋಜನೆಯಡಿ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಬಿಸಿಯೂಟ, ಹಾಲು ಮತ್ತು ವಾರಕ್ಕೆ ಎರಡು ದಿನ ಮೊಟ್ಟೆ ಅಥವಾ ಬಾಳೆಹಣ್ಣು ಪೂರೈಸಲಾಗುತ್ತಿದೆ. ಪೌಷ್ಟಿಕಾಂಶಯುಕ್ತ ಆಹಾರದ ಜೊತೆಗೆ ಉಚಿತವಾಗಿ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ಸಿಗುತ್ತಿರುವುದರಿಂದ ಪೋಷಕರಿಂದಲೂ ಈ ಯೋಜನೆ ಬಗ್ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸುವುದು ಕೇವಲ ಘೋಷಣೆಯಷ್ಟೇ ಆಗಬಾರದು, ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಒದಗಿಸುವುದು ಕೂಡ ಸರ್ಕಾರದ ಮುಂದಿರುವ ಸವಾಲಾಗಿದೆ. ಪುಟಾಣಿ ಮಕ್ಕಳನ್ನು ಆಕರ್ಷಿಸುವಂತಹ ಬಣ್ಣಬಣ್ಣದ ತರಗತಿ ಕೊಠಡಿಗಳು, ಆಟದ ಮೈದಾನ, ಆಟಿಕೆಗಳು ಹಾಗೂ ವಿಶೇಷ ಶೌಚಾಲಯಗಳ ನಿರ್ಮಾಣ ಅತ್ಯಗತ್ಯವಾಗಿದೆ. ಇದರ ಜೊತೆಗೆ, ಅಂಗನವಾಡಿ ಕಾರ್ಯಕರ್ತೆಯರು ಅಥವಾ ಈಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪೂರ್ವ ಪ್ರಾಥಮಿಕ ಮಟ್ಟದ ವಿಶೇಷ ತರಬೇತಿಯನ್ನು ನೀಡಬೇಕಾಗುತ್ತದೆ. ಮಕ್ಕಳ ಮನೋವಿಜ್ಞಾನವನ್ನು ಅರಿತು 'ಆಟದೊಂದಿಗೆ ಪಾಠ' ಮಾಡುವ ಕೌಶಲವನ್ನು ಶಿಕ್ಷಕರಲ್ಲಿ ಬೆಳೆಸಿದಾಗ ಮಾತ್ರ ಈ ಯೋಜನೆಯ ಮೂಲ ಉದ್ದೇಶ ಯಶಸ್ವಿಯಾಗುತ್ತದೆ.
ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಅಂಕಿಅಂಶಗಳು
ಪ್ರಸ್ತುತ ಶಿಕ್ಷಣ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 41,279 ಸರ್ಕಾರಿ ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 19,603 ಕಿರಿಯ ಪ್ರಾಥಮಿಕ ಶಾಲೆಗಳಾದರೆ, 21,676 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಬೃಹತ್ ಜಾಲದಲ್ಲಿ 10 ಸಾವಿರ ಶಾಲೆಗಳಿಗೆ ಎಲ್‌ಕೆಜಿ, ಯುಕೆಜಿ ವಿಸ್ತರಣೆ ಮಾಡಿದರೆ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಶಾಲೆಗಳಿಗೂ ಈ ಯೋಜನೆ ವಿಸ್ತರಣೆಯಾದರೆ, ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕ್ರಾಂತಿಯೇ ಸೃಷ್ಟಿಯಾಗಲಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು.












Click it and Unblock the Notifications