Karnataka Budget 2025: ಬಜೆಟ್‌ನಲ್ಲಿ ಐಷಾರಾಮಿ ಕಾರುಗಳ ಮೇಲಿನ ತೆರಿಗೆ ಇಳಿಕೆ ಸಾಧ್ಯತೆ
ಕರ್ನಾಟಕ ಬಜೆಟ್-2025ರ ಮಂಡನೆಗೆ ದಿನಗಣನೆ ಶುರುವಾಗುತ್ತಿದೆ. ಈ ಹಿನ್ನೆಲೆ ವಿವಿಧ ವಲಯಗಳಿಂದ ಸರ್ಕಾರಕ್ಕೆ ಬೇಡಿಕೆಗಳು ಬರುತ್ತಿವೆ. ಇದೀಗ ಐಷಾರಾಮಿ ಕಾರುಗಳ ಮೇಲಿನ ತೆರಿಗೆ ವಿಚಾರ ಕೂಡ ಬಜೆಟ್‌ಗೂ ಮುನ್ನವೇ ಪ್ರಸ್ತಾವವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಐಷಾರಾಮಿ ಕಾರುಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ ಎಂಬ ದೂರಿದೆ. ಈ ಕಾರಣದಿಂದಲೇ ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಐಷಾರಾಮಿ ಕಾರುಗಳು ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ ಎಂಬುದೂ ಬೆಳಕಿಗೆ ಬಂದಿದೆ.
ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅವರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ದೇಶದಲ್ಲೇ ಕರ್ನಾಟಕದಲ್ಲಿ ಐಷಾರಾಮಿ ಕಾರುಗಳ ಮೇಲೆ ಅಧಿಕ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಟ್ರಾವೆಲ್ಸ್ ನಡೆಸಲು ಕೂಡ ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಬಜೆಟ್‌ನಲ್ಲಾದರೂ ಐಷಾರಾಮಿ ಕಾರುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಕರ್ನಾಟಕದಲ್ಲಿ ಕಾರುಗಳ ಮೇಲೆ ದುಬಾರಿ ತೆರಿಗೆ ಇರುವುದರಿಂದ ಮಾಲೀಕರು ಕಡಿಮೆ ಬೆಲೆಗೆ ಹೊರರಾಜ್ಯಗಳಿಂದ ಕಾರುಗಳನ್ನು ಖರೀದಿಸುತ್ತಿದ್ದಾರೆ. ನೋಂದಣಿ ಕೂಡ ಕರ್ನಾಟಕದ ಬದಲಿಗೆ ಬೇರೆ ರಾಜ್ಯಗಳಲ್ಲೇ ಆಗುತ್ತಿದೆ. ಇದರಿಂದ ಬೇರೆ ರಾಜ್ಯಗಳಿಗೆ ಲಾಭವಾಗುತ್ತಿದೆಯೋ ಹೊರತು ಕರ್ನಾಟಕಕ್ಕೆ ನಷ್ಟವೇ ಸರಿ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಹೇಳಿದೆ.
ಸರ್ಕಾರದ ದುಬಾರಿ ತೆರಿಗೆ ನೀತಿಯಿಂದಾಗಿ ಬೇರೆ ರಾಜ್ಯಗಳಿಗೆ ಅನುಕೂಲವಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ನಷ್ಟವೂ ಆಗುತ್ತಿದೆ. ದುಬಾರಿ ತೆರಿಗೆಯಿಂದಾಗಿ ಜನ ಐಷಾರಾಮಿ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಈ ಬಜೆಟ್‌ನಲ್ಲಿ ತೆರಿಗೆ ಕಡಿಮೆ ಮಾಡಿದರೆ ಇಲ್ಲೇ ಹೆಚ್ಚು ಕಾರುಗಳನ್ನು ಖರೀದಿಸಬಹುದು. ರಾಜ್ಯ ಸರ್ಕಾರಕ್ಕೂ ಇದರಿಂದ ಲಾಭ ಎಂದು ಸಲಹೆ ನೀಡಿದೆ.
ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರದಲ್ಲಿ ಐಷಾರಾಮಿ ಕಾರುಗಳಿಗೆ ಶೇ 7.5ರಷ್ಟು ತೆರಿಗೆ ಪಾವತಿಸಬೇಕು. ಆಂಧ್ರಪ್ರದೇಶದಲ್ಲಿ ಶೇ 12ರಿಂದ 14ರವರೆಗೆ ತೆರಿಗೆ ಇದೆ. ತಮಿಳುನಾಡಿನಲ್ಲಿ ಶೇ 10ರಿಂದ 15ರವರೆಗೆ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಶೇ 13ರಿಂದ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರವೇ ಶೇ 18ರಷ್ಟು ತೆರಿಗೆ ಹಾಗೂ ಶೇ 1ರಷ್ಟು ಸೆಸ್ ವಿಧಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.

ಉದಾಹರಣೆಗೆ ಕರ್ನಾಟಕದಲ್ಲಿ ಸದ್ಯ ಒಂದು ಕೋಟಿ ರೂಪಾಯಿ ಬೆಲೆಬಾಳುವ ಕಾರನ್ನು ಖರೀದಿಸಿದರೆ 19 ಲಕ್ಷ ರೂಪಾಯಿವರೆಗೆ ತೆರಿಗೆಯೇ ಕಟ್ಟಬೇಕು. ಎರಡು ಕೋಟಿ ರೂಪಾಯಿ ದಾಟಿದರೆ ತೆರಿಗೆ ದುಪ್ಪಟ್ಟಾಗುತ್ತದೆ. ಈ ಭಾರಿ ಮೊತ್ತದ ತೆರಿಗೆ ಕಟ್ಟಬೇಕಿರುವುದರಿಂದ ಐಷಾರಾಮಿ ಕಾರುಗಳಿಂದ ಟ್ರಾವೆಲ್ಸ್ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಉದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ. ಹಾಗಾಗಿ ಈ ಬಜೆಟ್‌ನಲ್ಲಿ ತೆರಿಗೆಯನ್ನು ಕಡಿತಗೊಳಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಬೇಡಿಕೆ ಇಟ್ಟಿದ್ದಾರೆ.
ಈಗಾಗಲೇ ಬೆಂಗಳೂರಿನ ರಸ್ತೆಗಳಲ್ಲಿ ಪಾಂಡಿಚೆರಿ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ನೋಂದಣಿಯಾಗಿರುವ ಐಷಾರಾಮಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬಜೆಟ್‌ನಲ್ಲಿ ಸರ್ಕಾರ ತೆರಿಗೆ ಕಡಿಮೆ ಮಾಡುತ್ತಾ ಅನ್ನೋದು ಕಾದುನೋಡಬೇಕಿದೆ..












Click it and Unblock the Notifications