'ಹಲವು ಕಟ್ ಆಗಿರುವ ಬಿಜೆಪಿಯ ಕೊನೆಯ ಅಸ್ತ್ರ ಹಲಾಲ್ ಬಜೆಟ್'
ಬೆಂಗಳೂರು, ಮಾರ್ಚ್ 08: 2025-26ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಅಂದರೆ ಮಾರ್ಚ್ 07 ಶುಕ್ರವಾರ ಮಂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆ 16ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಬಜೆಟ್ ಗಾತ್ರ 4,09,549 ಕೋಟಿ ರೂಪಾಯಿ ಆಗಿದೆ. ಈ ಬಾರಿ ಕರ್ನಾಟಕದ ಬಜೆಟ್‌ನಲ್ಲಿ ವಿಶೇಷ ಅನುದಾನಗಳ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ವಿಶೇಷ ಆದ್ಯತೆ ನೀಡಿ ಅನುದಾನ ನೀಡಲಾಗಿದೆ.
2025-26ನೇ ಸಾಲಿನ ಕರ್ನಾಟಕ ಬಜೆಟ್ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯ ಬಜೆಟ್ ಎಂದು ಕಾಂಗ್ರೆಸ್ ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ, ಇದೊಂದು ಕೆಲವೇ ಕೆಲವು ಸಮಾಜದ ಪರವಾದ ಬಜೆಟ್ ಎಂದು ವಿರೋಧ ಪಕ್ಷಗಳು ವ್ಯಾಪಕವಾಗಿ ವಿರೋಧಿಸುತ್ತಿವೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ವಿರೋಧ ಪಕ್ಷಗಳ ಆರೋಪಕ್ಕೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕೊಟ್ಟಿರುವ ಸಚಿವರು, 'ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವು ನೀತಿಗಳು ಮತ್ತು ನಿರ್ಧಾರಗಳ ಕುರಿತು ಸರ್ಕಾರವನ್ನು ರಚನಾತ್ಮಕವಾಗಿ ಪ್ರಶ್ನಿಸುತ್ತವೆ. ನಮ್ಮ ಸರ್ಕಾರದ ಬಜೆಟ್‌ನಲ್ಲಿ ರಚನಾತ್ಮಕ ಟೀಕೆಗಳಿಗೆ ಅವಕಾಶವೇ ಇಲ್ಲದಿರುವಾಗ ರಾಜ್ಯದ ಬಿಜೆಪಿ ನಾಯಕರು ಹಲಾಲ್ ಬಜೆಟ್ ಎಂಬ ಟೊಳ್ಳು ಟೀಕೆಯ ಮೊರೆ ಹೋಗಿದ್ದಾರೆ. ಈ ಸ್ಟಿರಿಯೋಟೈಪ್ ಟೀಕೆಯ ಮೂಲಕ ಬಿಜೆಪಿಗರು ತಮ್ಮ ಬೌದ್ಧಿಕ ದಿವಾಳಿತನವನ್ನು ತಾವೇ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಮೌಲ್ಯಯುತ ರಾಜಕಾರಣಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂದರು.
ಬಜೆಟ್ ಬಗ್ಗೆ ಅರ್ಥಪೂರ್ಣ ಚರ್ಚೆ ಮಾಡಲು ಸಾಮರ್ಥ್ಯವಿಲ್ಲದ ಬಿಜೆಪಿಗೆ ಹಲಾಲ್ ಬಜೆಟ್ ಕೊನೆಯ ಅಸ್ತ್ರವಾಗಿದೆ. ಹಿಂದೆ ಹೀಗೆಯೇ ಹಲಾಲ್, ಜಟ್ಕಾ ಕಟ್ ಎಂಬ ವಿಭಜನಾತ್ಮಕ ರಾಜಕೀಯ ಮಾಡಿದ್ದ ಬಿಜೆಪಿಯನ್ನು ರಾಜ್ಯದ ಜನತೆ ಜಟ್ಕಾ ಕಟ್ ಮಾಡಿ ಬಿಸಾಡಿದ್ದಾರೆ, ಅಲ್ಲದೆ, ಬಿಜೆಪಿ ಪಕ್ಷವು ಬಣ ಬಡಿದಾಟದ ಹಲಾಲ್ ಕಟ್ ನಿಂದಾಗಿ ಹಲವು ತುಂಡುಗಳಾಗಿದೆ ಎಂದು ಲೇವಡಿ ಮಾಡಿದರು.

ಬಜೆಟ್ ಬಗ್ಗೆ ರಚನಾತ್ಮಕ ಟೀಕೆಗಳನ್ನು ಎದುರಿಸಲು ನಾವು ಸದಾ ಸಿದ್ದರಿದ್ದೇವೆ, ಚರ್ಚೆಗೆ ಮುಕ್ತವಾಗಿದ್ದೇವೆ, ಉತ್ತರಿಸಲು ತಯಾರಿದ್ದೇವೆ, ಆದರೆ ಬಿಜೆಪಿ ಚರ್ಚೆಗೆ ಸಿದ್ದವಿದೆಯೇ? ಕರ್ನಾಟಕದ ಸಮಗ್ರ ಏಳಿಗೆಗೆ, ಆರ್ಥಿಕ ಸುಸ್ಥಿರತೆಗೆ, ಸಾಮಾಜಿಕ ಉನ್ನತಿಗೆ ನಮ್ಮ ಬಜೆಟ್ ಪೂರಕವಾಗಿರುವುದನ್ನು ಸಹಿಸದ ಬಿಜೆಪಿ ಸದಾ ಕನ್ನಡಿಗರನ್ನು ಅವಮಾನಿಸುವ ರಾಜಕಾರಣದಲ್ಲಿ ತೊಡಗಿರುವುದು ದುರಂತ. ಅರ್ಥಪೂರ್ಣ ಹೊಣೆಗಾರಿಕೆ ಪ್ರದರ್ಶಿಸಬೇಕಾದ ವಿರೋಧ ಪಕ್ಷವು ನೈತಿಕ ಹಾಗೂ ಬೌದ್ಧಿಕ ದಿವಾಳಿತನ ಪ್ರದರ್ಶಿಸಿದಾಗ ರಾಜಕೀಯ ವ್ಯವಸ್ಥೆ ಮಾತ್ರವಲ್ಲ ಸಾಮಾಜಿಕ ಸ್ವಾಸ್ಥ್ಯವೂ ಕೆಡುತ್ತದೆ. ಇದಕ್ಕೆ ಬಿಜೆಪಿಯೇ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.












Click it and Unblock the Notifications