Shivarajkumar: ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ ನಟ ಶಿವರಾಜ್ ಕುಮಾರ್
ಬೆಂಗಳೂರು, ಮಾರ್ಚ್ 08: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 07 ರಂದು 16ನೇ ಬಜೆಟ್‌ನಲ್ಲಿ ತಮ್ಮ ಜಿಲ್ಲೆ ಮೈಸೂರಿಗೆ ಭರಪೂರ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಮೈಸೂರಿನಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದಾರೆ. ಮೈಸೂರಿನಲ್ಲಿ ವಿಶ್ವದರ್ಜೆಯ ಫಿಲಂ ಸಿಟಿ ನಿರ್ಮಾಣಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಟ ಶಿವರಾಜ್ ಕುಮಾರ್ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ನಟ ಶಿವರಾಜ್‌ಕುಮಾರ್ ಅವರು ಧನ್ಯವಾದ ತಿಳಿಸಿದ್ದು, ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ ಬೆಳೆಯಲು ತೆಗೆದುಕೊಂಡ ನಿರ್ಧಾರಗಳಿಗೆ ಕರ್ನಾಟಕ ಸರ್ಕಾರಕ್ಕೆ ನನ್ನ ಅಭಿನಂದನೆಗಳು. ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಇಳಿಕೆ, ಕನ್ನಡ ಸಿನಿಮಾಗಳನ್ನು ಅಂತಾರಾಷ್ರೀಯ ಮಟ್ಟಕ್ಕೆ ತಲುಪಿಸಲು ರಾಜ್ಯ ಸರ್ಕಾರದಿಂದ ಹೊಸ ಓಟಿಟಿ, ಮೈಸೂರಿನಲ್ಲಿ ವಿಶ್ವದರ್ಜೆಯ ಫಿಲಂ ಸಿಟಿ ನಿರ್ಮಾಣಕ್ಕೆ ಬೆಂಬಲ ನೀಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯಯರವರಿಗೆ ನನ್ನ ಹಾಗೂ ಚಿತ್ರರಂಗದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. ಶೀಘ್ರವೇ ಈ ಎಲ್ಲಾ ಯೋಜನೆಗಳಿಗೆ ಚಾಲನೆ ಸಿಗಲಿ ಎಂದು ಆಶಿಸುತ್ತೇನೆ ಎಂದು ನಟ ಡಾ. ಶಿವರಾಜ್ ಕುಮಾರ್ ಅವರು ಹೇಳಿದರು.

ಫಿಲ್ಮ್ ಸಿಟಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಮೈಸೂರಿನಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿಯನ್ನು ನಿರ್ಮಿಸುತ್ತೇವೆ. ಇದಕ್ಕಾಗಿ ಈಗಾಗಲೇ 150 ಎಕರೆ ಜಾಗವನ್ನು ಗುರುತಿಸಿ, ನಿಯೋಜಿಸಲಾಗಿದೆ. ಫಿಲಂ ಸಿಟಿ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣವನ್ನೂ ಸಹ ಮೀಸಲಿಡಲಾಗಿದೆ. 'ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲ ಅವಕಾಶಗಳನ್ನು ಸೃಷ್ಟಿಸಬಹುದು. ಇದಕ್ಕಾಗಿ ವಿಶ್ವ ದರ್ಜೆಯ ಅತ್ಯುನ್ನತ ಗುಣಮಟ್ಟದ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಿಸುತ್ತಿದ್ದೇವೆ. ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಸೆಯುವ ಸಿನಿಮಾಗಳನ್ನು ವಿಶ್ವದರ್ಜೆಯ ಗುಣಮಟ್ಟದಲ್ಲಿ ಇಲ್ಲಿ ನಿರ್ಮಾಣ ಆಗಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಚಿತ್ರೋತ್ಸವ ವಿಶ್ವ ಸಮುದಾಯದ ಸಂಸ್ಕೃತಿಯ ಪ್ರತಿಬಿಂಬ. ಇದನ್ನು ನೋಡುಗರು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮಲ್ಲಿ ಅಸಹನೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಸಂಪತ್ತಿನ ಅಸಮಾನ ಹಂಚಿಕೆ ಈ ಅಸಂತೋಷಕ್ಕೆ ಕಾರಣ. ದೇಶದ 1% ಜನರ ಕೈಯಲ್ಲಿ ದೇಶದ 50% ಸಂಪತ್ತು ಸೇರಿಕೊಂಡಿದೆ. ಇದಕ್ಕೆ ಕಲಾ ಮಾಧ್ಯಮ ಆಗಿರುವ ಸಿನಿಮಾಗಳು ಪರಿಹಾರ ಹುಡುಕಬೇಕು. ಸಮಾಜವನ್ನು ಕಲಾ ಮಾಧ್ಯಮದ ಮೂಲಕ ಬೆಸೆಯಬೇಕು.
ಹಳೆಯ ಸಿನಿಮಾಗಳನ್ನು ನೆನಪು ಮಾಡಿಕೊಂಡ ಸಿದ್ದರಾಮಯ್ಯ, 'ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿದ್ದ ಮೌಲ್ಯಗಳು ಮತ್ತು ಘನತೆ ಈಗಿನ ಸಿನಿಮಾಗಳಲ್ಲಿ ಕಾಣುತ್ತಿಲ್ಲ. ರಾಜ್ ಕುಮಾರ್ ಸಿನಿಮಾಗಳಲ್ಲಿ ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳು ತುಂಬಿರುತ್ತಿದ್ದವು. ಹೀಗಾಗಿ ಸರ್ವರಿಗೂ ಅವರ ಸಿನಿಮಾಗಳು ಇಷ್ಟ ಆಗುತ್ತಿದ್ದವು, ಈಗ ಮತ್ತೊಮ್ಮೆ ಸಿನಿಮಾಗಳಲ್ಲಿ ಮೌಲ್ಯಗಳನ್ನು ತರಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಮೌಡ್ಯಗಳನ್ನು ಬಿತ್ತುವ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಸಿನಿಮಾಗಳು ಸಮಾಜಕ್ಕೆ ಒಳ್ಳೆಯದಲ್ಲ. ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸಿನಿಮಾಗಳು ಮತ್ತೆ ಮೌಡ್ಯಗಳನ್ನು ಬಿತ್ತುವುದಕ್ಕೆ ಹೋಗಬಾರದು. ಈಗ ತಂತ್ರಜ್ಞಾನ ಬೆಳೆದು ಕೃತಕ ಬುದ್ದಿಮತ್ತೆವರೆಗೂ ಬೆಳೆದು ಬಂದಿದೆ. ನಮ್ಮ ತಳಮಳಗಳಿಗೆ ಪರಿಹಾರ ಹುಡುಕುವ ಸಿನಿಮಾಗಳು ಬಂದಾಗ ಅಂತಹ ಸಿನಿಮಾಗಳು ಶಾಶ್ವತವಾಗಿ ಸಮಾಜದಲ್ಲಿ ಉಳಿಯುತ್ತವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications