ಕಾಂಗ್ರೆಸ್‌ಗೆ ಮರಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್- ಇನ್‌ಸೈಡ್ ಸ್ಟೋರಿ
ಯಲ್ಲಾಪುರ, ಆಗಸ್ಟ್ 19: ರಾಜ್ಯ ರಾಜಕಾರಣದಲ್ಲಿ 'ಘರ್ ವಾಪ್ಸಿ' ಚರ್ಚೆ ಮುನ್ನೆಲೆಗೆ ಬಂದಿದೆ. 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕರು ಮತ್ತೆ 'ಕೈ' ಹಿಡಿಯಲು ಮುಂದಾಗಿದ್ದಾರೆ. ಕಾಂಗ್ರೆಸ್ ಸೇರಲು ಬಯಸುತ್ತಿರುವ ನಾಯಕರಲ್ಲಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪ್ರಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಬ್ಬಾರ್ ಅವರು ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಳ್ಳುವ ಕುರಿತು ಹೆಚ್ಚುಕಮ್ಮಿ ನಿರ್ಧರಿಸಿದ್ದಾರೆ. ಈ ಮಹತ್ವದ ನಿರ್ಧಾರದ ಕುರಿತು ತಮ್ಮ ಬೆಂಬಲಿಗರು ಹಾಗೂ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಅವರು, ಇದೀಗ ಪಕ್ಷಕ್ಕೆ ಮರಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಮುಖಂಡರಾದ ರಮೇಶ್ ಜಾರಕಿಹೊಳಿ, ಎಸ್ ಟಿ ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜ್, ಬಿ ಸಿ ಪಾಟೀಲ್, ಎಚ್ ವಿಶ್ವನಾಥ್, ಕೆ ಸುಧಾಕರ್, ಎಂ ಟಿ ಬಿ ನಾಗರಾಜ್ ಸೇರಿದಂತೆ ಮುಂತಾದವರ ಜೊತೆ ಶಿವರಾಮ್ ಹೆಬ್ಬಾರ್ ಅವರು 2019ರಲ್ಲಿ ಬಿಜೆಪಿ ಸೇರಿದ್ದರು.
ಉತ್ತರ ಕನ್ನಡದ ಏಕೈಕ ಸಚಿವರಾಗಿದ್ದ ಅವರು ಬಿ ಎಸ್ ಯಡಿಯೂರಪ್ಪ ಅವರ ಆಡಳಿತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿ ಉಸ್ತುವಾರಿ ಸಚಿವರಾಗಿದ್ದರು.

ಸ್ಥಳೀಯ ಬಿಜೆಪಿ ನಾಯಕರು ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಶಿವರಾಮ್ ಹೆಬ್ಬಾರ್ ಮಾಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಲಾಗಿವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಕಾರ್ಯಕರ್ತರು ಹೆಬ್ಬಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಬ್ಬಾರ್ ಅವರು ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಇದು 2023 ರ ಕದಂಬೋತ್ಸವದ ಸಂದರ್ಭದಲ್ಲಿ ಸ್ಪಷ್ಟವಾಗಿ ಹೋಯಿತು.
ಇತ್ತ ಕಡೆ, ಕಾಂಗ್ರೆಸ್ ಕಾರ್ಯಕರ್ತರು ಹೆಬ್ಬಾರ್ ವಿರುದ್ಧ ಆಕ್ರಮಣಕಾರಿ ಪ್ರಚಾರವನ್ನು ಮಾಡಿದರು. ಬನವಾಸಿ ಉತ್ಸವದಲ್ಲಿ 'ಪೇಸಿಎಂ' ಅಭಿಯಾನವನ್ನು ಕೈ ಕಾರ್ಯಕರ್ತರು ಮಾಡಿದರು. ಮೂಲಗಳ ಪ್ರಕಾರ, ಶಿವರಾಮ್ ಹೆಬ್ಬಾರ್ ಅವರು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಆದರೆ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಇದು ಸಾಧ್ಯವಾಗಲಿಲ್ಲ. ಈಗ ಹೆಬ್ಬಾರ್ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮುಂಡಗೋಡಿನಲ್ಲಿ ಹೆಬ್ಬಾರ್ ಅವರು ತಮ್ಮ ಬೆಂಬಲಿಗರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿರುವ ವಿಡಿಯೋ ಕೂಡ ಹರಿದಾಡುತ್ತಿದೆ. ಅವರ ಬೆಂಬಲಿಗರು ಅವರನ್ನು ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗುವಂತೆ ಒತ್ತಾಯಿಸಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಅವರಿಗೆ ತಿಳಿಸಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದಾರೆ ಎಂದು ಹೆಬ್ಬಾರ್ ಅವರು ಆರೋಪ ಮಾಡಿದ್ದಾರೆ. ಇದು ಕರ್ನಾಟಕ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವನ್ನು ಹೆಚ್ಚಿಸಿದೆ.
ಹೆಬ್ಬಾರ್ ಅವರ ಮೇಲೆ ಬಿಜೆಪಿ ನಾಯಕರು ನಿಗಾ ಇರಿಸಿದ್ದಾರೆ. ಒಂದು ವೇಳೆ, ಅವರು ಕಾಂಗ್ರೆಸ್ ಸೇರ್ಪಡೆಗೊಂಡು ಉಪ ಚುನಾವಣೆ ನಡೆದರೆ, ಅವರ ವಿರುದ್ಧ ಅನಿರೀಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷವು ಈಗಾಗಲೇ ಚಿಂತನೆ ನಡೆಸುತ್ತಿದೆ. ಶಿರಸಿಯಲ್ಲಿ ಸೋತಿರುವ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಕೇಳಿ ಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಲು ಹೆಬ್ಬಾರ್ ನಿರಾಕರಿಸಿದ್ದಾರೆ.












Click it and Unblock the Notifications