ಜ.25 ರಂದು ಕರ್ನಾಟಕ ಬಂದ್, ಫೆ.4 ರಂದು ಬೆಂಗಳೂರು ಬಂದ್
Recommended Video

ಬೆಂಗಳೂರು, ಜನವರಿ 25: ಕರ್ನಾಟಕದ ಜನತೆಗೆ ಬಂದ್ ಬಿಸಿ ಮತ್ತೊಮ್ಮೆ ಬಲವಾಗಿ ತಟ್ಟಲಿದೆ. ಕರ್ನಾಟಕ ಬಂದ್ ಹಾಗೂ ಬೆಂಗಳೂರು ಬಂದ್ ಗೆ ಸಿದ್ಧರಾಗುವಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಜನವರಿ 25ರಂದು ಕರ್ನಾಟಕ ಬಂದ್ ಹಾಗೂ ಫೆಬ್ರವರಿ 04ರಂದು ಬೆಂಗಳೂರು ಬಂದ್.
ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಕಳಸಾ ಬಂಡೂರಿ ಹೋರಾಟಗಾರರು, ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನಾಕಾರರು ಬಂದ್ ಗೆ ಕರೆ ನೀಡಿದ್ದಾರೆ.
ಬಂದ್ ದಿನಾಂಕ ಗೊಂದಲ: ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಕೆಎಫ್ ಸಿಸಿ ಅಧ್ಯಕ್ಷ ಸಾ.ರಾ ಗೋವಿಂದು ಸೇರಿದಂತೆ ಕನ್ನಡ ಒಕ್ಕೂಟದವರು ಮೊದಲಿಗೆ ಜನವರಿ 27 ಶನಿವಾರದಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದರು.

ಜನವರಿ 28 (ಭಾನುವಾರ) ರಂದು ಮೋದಿ ಕರ್ನಾಟಕ ಭೇಟಿ ನಿಗದಿಯಾಗಿತ್ತು. ಹೀಗಾಗಿ, ಬಂದ್ ಅನ್ನು ಜನವರಿ 25ಕ್ಕೆ ಹಿಂದೂಡಲಾಯಿತು.
ಆದರೆ, ಪ್ರಧಾನಿ ಮೋದಿ ಭೇಟಿ ಈಗ ಫೆಬ್ರವರಿ 04ರಂದು ನಿಗದಿಯಾಗುತ್ತಿದ್ದಂತೆ, ಮತ್ತೆ ಬಂದ್ ದಿನಾಂಕ ಗೊಂದಲ ಆರಂಭವಾಯಿತು.
ಈ ಮಧ್ಯೆ ಕಳಸಾ ಬಂಡೂರಿ ಸಮನ್ವಯ ಸಮಿತಿ ಭಾನುವಾರದಂದು ವಾಟಾಳ್ ನಾಗರಾಜ್ ಅವರ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿ, 'ಯಾರನ್ನು ಕೇಳಿ ಬಂದ್ ದಿನಾಂಕ ನಿಗದಿ ಮಾಡಿದ್ದೀರಿ?' ಎಂದು ಪ್ರಶ್ನಿಸಿದರು.
ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹಿಸುತ್ತಿರುವ ಹೋರಾಟಗಾರರು, ಮೋದಿ ಅವರು ಬೆಂಗಳೂರಿಗೆ ಬರುವ ದಿನದಂದೇ ಬಂದ್ ಆಚರಿಸುವಂತೆ ಆಗ್ರಹಿಸಿದರು.
ಈ ನಡುವೆ ಫೆಬ್ರವರಿ 04ರಂದು ಬೆಂಗಳೂರು ಬಂದ್ ಗೆ ಕಳಸಾ ಬಂಡೂರಿ ಹೋರಾಟಗಾರರು ಕರೆ ನೀಡಿದರು. ಜತೆಗೆ ವಾಟಾಳ್ ಅವರು ಫೆಬ್ರವರಿ 04ರಂದು ಕರ್ನಾಟಕ ಬಂದ್ ಮಾಡಲು ಸಮ್ಮತಿಸಿದರು. ಹೀಗಾಗಿ, ಎರಡು ದಿನಗಳಲ್ಲೂ ಬಂದ್ ಆಚರಣೆಗೆ ಸಿದ್ಧತೆ ನಡೆದಿದೆ.












Click it and Unblock the Notifications