ಗೃಹ ಸಚಿವ ಜಾರ್ಜ್ ಅವರಿಗೆ ಬೆದರಿಕೆ ಕರೆ ಬರುತ್ತಿದೆ
ಬೆಂಗಳೂರು, ಜು.1 : ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರಿಗೆ ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಕರೆ ಬರುತ್ತಿದೆ. ಈ ವಿಷಯವನ್ನು ಸ್ವತಃ ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತರಿಗೆ ಭೂಗತ ಪಾತಿಕಿಗಳು ಕರೆ ಮಾಡುವುದನ್ನು ಪತ್ತೆ ಹಚ್ಚಲು ಮುಂದಾಗುತ್ತಿರುವ ನನಗೆ ಬೆದರಿಕೆ ಕರೆ ಬರುತ್ತಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಮಂಗಳವಾರದ ಕಲಾಪದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಭಾವಿಗಳಿಗೆ ಹಾಗೂ ವ್ಯಾಪಾರಿ ಗಳಿಗೆ ಅನಾಮಧೇಯ ಭೂಗತ ಪಾತಕಿಗಳು ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡಲು ನಿರಾಕರಿಸುವವರನ್ನು ಹತ್ಯೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದೊಂದು ದೊಡ್ಡ ದಂಧೆಯಾಗಿದ್ದು, ಜನ ಸಾಮಾನ್ಯರು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು.

ಈ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಯಾವ ಪ್ರಕರಣಗಳು ದಾಖಲಾಗಿಲ್ಲ. ಆದರೆ, ಉಡುಪಿ ಜಿಲ್ಲೆಯಲ್ಲಿ 2012 ರಲ್ಲಿ 6, 2013ರಲ್ಲಿ 9, 2014 ರಲ್ಲಿ 7 ಪ್ರಕರಣಗಳು ದಾಖಲಾಗಿವೆ. ಇವುಗಳಿಗೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇಂತಹ ಬೆದರಿಕೆ ಕರೆ ತಡೆಯಲು ಪ್ರಯತ್ನ ನಡೆಸುತ್ತಿರುವ ನನಗೂ ಬೆದರಿಕೆ ಕರೆ ಬರುತ್ತಿದೆ ಎಂದು ಸಚಿವರು ತಿಳಿಸಿದರು.
ಪರಿಷತ್ತಿನಲ್ಲಿ ಗುಡುಗಿದ ಈಶ್ವರಪ್ಪ : ಅಧಿವೇಶನಕ್ಕೆ ಬಂದ ಮೊದಲ ದಿನವೇ ವಿಧಾನಪರಿಷತ್ತಿನಲ್ಲಿ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಗಣಿ ಪರವಾನಿಗೆಗಳನ್ನು ಹರಾಜು ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಬೇಕಾದವರಿಗೆ ಗಣಿ ಲೈಸೆನ್ಸ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂಗಾರು ಅಧಿವೇಶನದ ಏಳನೇ ದಿನವಾದ ಮಂಗಳವಾರ ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರು. ಕಲಾಪ ಆರಂಭವಾಗುತ್ತಿದ್ದಂತೆ ಸುಪ್ರೀಂಕೋರ್ಟ್ ಆದೇಶದ ಅನ್ವಯ 19 ಗಣಿಗಾರಿಕೆ ಪರವಾನಿಗೆಗಳನ್ನು ಮುಖ್ಯಮಂತ್ರಿಗಳು ಹರಾಜು ಹಾಕದೆ, ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು. ಬಿಜೆಪಿ ಸದಸ್ಯರು ಈಶ್ವರಪ್ಪ ಮಾತಿಗೆ ಧ್ವನಿ ಗೂಡಿಸಿದರು.
ಗಣಿ ಪರವಾನಿಗೆ ನೀಡುವ ಸರ್ಕಾರದ ವಿಳಂಬ ಧೋರಣೆಯಿಂದಾಗಿ ಸುಮಾರು ಆರು ಲಕ್ಷ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿ ನಾಯಕರ ಒತ್ತಾಯಿಸಿದರು. ಇದಕ್ಕೆ ಸಭಾನಾಯಕ ಎಸ್.ಆರ್.ಪಾಟೀಲ್ ಮತ್ತು ಕಾಂಗ್ರೆಸ್ ಸದಸ್ಯ ವೀರಣ್ಣ ಮತ್ತೀಕಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸದಸ್ಯರ ನಡುವೆ ಕೆಲವು ಕಾಲ ಮಾತಿನ ಚಕಮಕಿ ನಡೆಯಿತು. [ಪರಮೇಶ್ವರ್, ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್]
ಬಿಜೆಪಿ ನಾಯಕರ ಮನವಿಗೆ ಸ್ಪಂದಿಸಿದ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ನೀಡಲಾಗುವುದು ಎಂದರು. ಆದರೆ, ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು, ಈಗಲೇ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸದಸ್ಯರ ಆರೋಪಗಳಿಗೆ ತಿರುಗೇಟು ನೀಡಿದ ಸಭಾನಾಯಕ ಎಸ್.ಆರ್.ಪಾಟೀಲ್, ಅಕ್ರಮ ಗಣಿಗಾರಿಕೆಯಲ್ಲಿ ಯಾರು ತೊಡಗಿದ್ದಾರೆ? ಏನು ಮಾಡಿದ್ದಾರೆ ಎಂಬುದು ಜಗತ್ತಿಗೆ ತಿಳಿದಿದೆ ಎಂದು ಕುಟುಕಿದರು. ಬಿಜೆಪಿ ಒತ್ತಡಕ್ಕೆ ಮಣಿದ ಡಿ.ಎಚ್.ಶಂಕರಮೂರ್ತಿ ಅವರು, ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸಿದರು.












Click it and Unblock the Notifications