Government Job: ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ, ₹6 ಕೋಟಿ ನಗದು ಬಹುಮಾನ
ಉತ್ತಮ ತರಬೇತಿ, ತರಬೇತುದಾರರು ಹಾಗೂ ಸೌಲಭ್ಯಗಳಿದ್ದರೆ ಒಲಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಕಷ್ಟವೇನಲ್ಲ. ಕ್ರೀಡಾಪಟುಗಳು ತಮ್ಮ ಗುರಿಸಾಧನೆಗೆ ಹಗಲಿರುಳು ಶ್ರಮಿಸಬೇಕು. ಏಳು ಕೋಟಿ ಕನ್ನಡಿಗರಿರುವ ಕರ್ನಾಟಕದಿಂದ ಪದಕ ಗೆಲ್ಲುವುದು ಅಸಾಧ್ಯವೇನಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಹಾಗೂ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಪದಕ ವಿಜೇತರಿಗೆ ರಾಜ್ಯ ಸರ್ಕಾರದಿಂದ ಏನೆಲ್ಲ ಸೌಲಭ್ಯ ಸಿಗಲಿಗೆ ಎಂಬ ಮಾಹಿತಿ ನೀಡಿದ್ದಾರೆ.
ಕ್ರೀಡೆಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಒಲಂಪಿಕ್ಸ್ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂಪಾಯಿ ನಗದು ಬಹುಮಾನ, ಕ್ಲಾಸ್ 1 ಅಥವಾ 2ರಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುವುದು. ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂಪಾಯಿ ನಗದು ಬಹುಮಾನ, ಕಂಚು ಪದಕ ವಿಜೇತರಿಗೆ 3 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತಿದೆ ಎಂದಿದ್ದಾರೆ.

ಅದೇ ವರ್ಷವೇ ಪ್ರಶಸ್ತಿ ಪ್ರದಾನ
ಏಕಲವ್ಯ ಪ್ರಶಸ್ತಿಗಳನ್ನು 30 ಜನರಿಗೆ ನೀಡಲಾಗಿದ್ದು, 4 ಲಕ್ಷಗಳ ನಗದು ಬಹುಮಾನವನ್ನು ಈ ಪ್ರಶಸ್ತಿ ಒಳಗೊಂಡಿದೆ. ನಗದು ಬಹುಮಾನದ ಮೊತ್ತವನ್ನು ನನ್ನ ಅವಧಿಯಲ್ಲೇ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷದ ಪ್ರಶಸ್ತಿಗಳನ್ನ ಅದೇ ವರ್ಷವೇ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉತ್ತಮ ಕ್ರೀಡಾಪಟುಗಳನ್ನು ರಾಜ್ಯಕ್ಕೆ ನೀಡುವ ತರಬೇತುದಾರರಿಗೆ ಒಟ್ಟು 9 ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು, 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಒಳಗೊಂಡಿದೆ ಎಂದು ವಿವರಿಸಿದ್ದಾರೆ.
ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳ ಸಾಧಕರನ್ನು ಗುರುತಿಸಿ, ಒಟ್ಟು 15 ಕ್ರೀಡಾರತ್ನ ಪ್ರಶಸ್ತಿಗಳನ್ನು ನೀಡಲಾಗಿದ್ದು, ₹2 ಲಕ್ಷಗಳ ನಗದು ಬಹುಮಾನವನ್ನು ಒಳಗೊಂಡಿದೆ. ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಖಾಸಗಿ ಕ್ಷೇತ್ರದ ಸಂಸ್ಥೆಗಳನ್ನು ಗೌರವಿಸಲು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಲಾಗಿದೆ. ಕರ್ನಾಟಕದ ಕ್ರೀಡಾಪಟುಗಳಿಗೆ ಗೆಲ್ಲುವ ಸಾಧ್ಯತೆಗಳಿವೆ, ಪ್ರಯತ್ನ ಮಾಡಬೇಕು. 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ 60 ಜನರನ್ನು ಗುರುತಿಸಲಾಗಿದ್ದು, ಪ್ರತಿ ವರ್ಷ 10 ಲಕ್ಷ ರೂ.ಗಳನ್ನು ತರಬೇತಿಯ ಅವಧಿಯಲ್ಲಿಯೇ ನೀಡಲಾಗುವುದು ಎಂದಿದ್ದಾರೆ.
ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ. ಒಲಂಪಿಕ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಕರ್ನಾಟಕ ಉತ್ತಮ ಕ್ರೀಡಾಪಟುಗಳನ್ನು ಈವರೆಗೆ ರೂಪಿಸಿದೆ. ಹಾಕಿಯಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ಅಥ್ಲೆಟಿಕ್ಸ್‌ನಲ್ಲೂ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಬೇಡರ ಜಾತಿಗೆ ಸೇರಿದ ಏಕಲವ್ಯ ಗುರುವಿಲ್ಲದೆ ವಿದ್ಯೆಯನ್ನು ಕಲಿತವನು. ಅರ್ಜುನನಿಗಿಂತ ಮೀರಿ ಬಿಲ್ಲುವಿದ್ಯೆಯಲ್ಲಿ ಪರಿಣಿತಿ ಸಾಧಿಸಿದ್ದರಿಂದ ಅವನ ಹೆಬ್ಬೆರಳನ್ನ ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರು ಪಡೆಯುತ್ತಾರೆ. ಆ ಕಾಲದಲ್ಲೂ ಜಾತಿ ವ್ಯವಸ್ಥೆ ಇತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಏಕಲವ್ಯ ಪ್ರಶಸ್ತಿ ಪಡೆದವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ನಿಮ್ಮ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ ಎಂದಿದ್ದಾರೆ.












Click it and Unblock the Notifications