ಮುಖ್ಯಮಂತ್ರಿ ಚಂದ್ರು ಹಲ್ಲುಕಿತ್ತ ಹಾವಿನಂತಾಗಿದ್ದಾರೆ
ಪ್ರ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆ ಕರ್ನಾಟಕ ರಕ್ಷಣಾ ವೇದಿಕೆ ಕೈಜೋಡಿಸಿದರೆ ಕೆಲಸ ಇನ್ನೂ ತ್ವರಿತಗತಿಯಲ್ಲಿ ಆಗುತ್ತದಲ್ಲವೆ? ಕರವೇ ಅದನ್ನೇಕೆ ಮಾಡುತ್ತಿಲ್ಲ?
ನಾ. ಗೌಡ : ನೋಡಿ, ಅಧಿಕಾರ ಇಲ್ಲದಾಗ ಕನ್ನಡದ ಜನ ಭಾರೀ ಪ್ರೀತಿ ವ್ಯಕ್ತಪಡಿಸುತ್ತಾರೆ. ಅದೇ ಅಧಿಕಾರ ಸಿಕ್ಕಾಗ ಕರವೇಯನ್ನು ಮರೆತುಬಿಡುತ್ತಾರೆ. ಹಿಂದೆ ಅಧಿಕಾರವಿಲ್ಲದಿದ್ದಾಗ ಪ್ರಾದೇಶಿಕ ಪಕ್ಷ ಕಟ್ಟಬೇಕು ಎಂದವರೇ ಮುಖ್ಯಮಂತ್ರಿ ಚಂದ್ರು ಅವರು. ಆದರೆ, ಅಧಿಕಾರ ಸಿಕ್ಕಮೇಲೆ, ಪಿತ್ಥ ನೆತ್ತಿಗೇರಿದ ಮೇಲೆ ಚಂದ್ರು ನಮ್ಮೊಡನೆ ಕನ್ನಡ ಅಭಿವೃದ್ಧಿಯ ಬಗ್ಗೆ ಯಾವತ್ತೂ ಚರ್ಚೆ, ಸಂವಾದ ಮಾಡಿಲ್ಲ, ಸಲಹೆ ಸೂಚನೆ ಪಡೆದುಕೊಂಡಿಲ್ಲ. ಹಿಂದೆ ಚಂಪಾ (ಚಂದ್ರಶೇಖರ ಪಾಟೀಲ) ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಪತ್ರ ಬರೆಯುತ್ತಿದ್ದರು. ಚಂದ್ರು ಅಂಥ ಯಾವ ಕೆಲಸವನ್ನೂ ಮಾಡಿಲ್ಲ.
ಚಂದ್ರು ಅವರಿಗೆ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಸರಕಾರ ಕೊಟ್ಟಿಲ್ಲ. ಅವರು ಹಲ್ಲುಕಿತ್ತ ಹಾವಿನಂತಾಗಿದ್ದಾರೆ. ಬರೀ ಬುಸುಗುಡುವ ಹಾವಿನಂತಾಗಿದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಹಿಂದೆ, ಕನ್ನಡ ಕಾವಲು ಸಮಿತಿ ಅಧ್ಯಕ್ಷ ಪಾಟೀಲ ಪುಟ್ಟಪ್ಪನವರು ಕನ್ನಡ ಟೈಪ್ ರೈಟರ್ ಬಳಸದಿದ್ದರೆ ಅವುಗಳನ್ನೇ ಕಿತ್ತು ಎಸೆಯುವಷ್ಟು ಗಂಡಸ್ತನದ ಕೆಲಸ ಮಾಡುತ್ತಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆ ರೀತಿ ಗಟ್ಟಿಯಾಗಿರಬೇಕು. ಪತ್ರ ಮುಖೇನವೂ ಕೆಲಸ ಮಾಡಿಸುವಂತಿರಬೇಕು. ಕೇಳಲಿಲ್ಲವೆಂದರೆ ಗರ್ಜಿಸಿ ಕೆಲಸ ಮಾಡಿಸುವ ಶಕ್ತಿ ಅದಕ್ಕಿರಬೇಕು.

ಪ್ರಾಧಿಕಾರದ ಅಧ್ಯಕ್ಷರು ಬರುತ್ತಿದ್ದಾರೆಂದರೆ ಪ್ರೀತಿಯೂ ಇರಬೇಕು, ಭೀತಿಯೂ ಇರಬೇಕು. ಬರೀ ಸತ್ಕಾರ ಸನ್ಮಾನ ಮಾಡಿಸಿಕೊಂಡು ತಿರುಗಿದರೆ ಏನು ಬಂತು? ಕನ್ನಡಿಗರ ಉದ್ಯೋಗಕ್ಕೆ ಕುತ್ತು ಬಂದಾಗ ಸರೋಜಿನಿ ಮಹಿಷಿ ವರದಿಯ ಬಗ್ಗೆ ಚಂದ್ರು ಏನೂ ಮಾತಾಡಲಿಲ್ಲ. ನಾವು ಮಾತಾಡಿದ ಮೇಲೆ ಅವರೂ ಮಾತಾಡಲು ಶುರು ಮಾಡಿದ್ದಾರೆ. ಹಾಗಾಗಿ ಸರಕಾರಿ ಸಂಸ್ಥೆಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡದ ಬಗ್ಗೆ ಹೆಚ್ಚು ಕೆಲಸ ಮಾಡಬೇಕು. ಬರೀ ಸಾಂಸ್ಕೃತಿಕ ಕೆಲಸ ಮಾಡಿದರೆ ಸಾಲದು.
ಕೋಲಾರದ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಹೋಂಡಾ ಕಂಪನಿ ಶುರುವಾಯಿತು. ಶೇ.85ರಷ್ಟು ಕನ್ನಡಿಗರಿಗೆ ಕೊಡುವುದಾಗಿ ಮುಚ್ಚಳಿಕೆ ಬರೆಯಿಸಿಕೊಂಡು ಅವರಿಗೆ 122 ಎಕರೆ ಭೂಮಿ (ಎಕರೆಗೆ 25 ಲಕ್ಷ ರು.), ಕೇಂದ್ರಕ್ಕೆ ಕಟ್ಟುವ ಸಾರಿಗೆ ಶುಲ್ಕ ಶೇ.50ರಷ್ಟು ಕಟ್ಟುವ, ಶೇ.45ರಷ್ಟು ತೆರಿಗೆ ರಿಯಾಯಿತಿ ನೀಡಿ ಹಲವಾರು ಸವಲತ್ತು ಪಡೆದುಕೊಂಡಿದೆ. ಆದರೆ, ಕನ್ನಡಿಗರಿಗೆ ಎಲ್ಲಿ ಕೆಲಸ ಕೊಟ್ಟಿದೆ? ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನೂ ಮಾಡಿಲ್ಲ. ಕರವೇ ಹೋರಾಟ ಮಾಡಿ, ನಮ್ಮ ಕನ್ನಡಿಗರನ್ನು ಅವರಲ್ಲಿಗೆ ಕಳಿಸಿ 400ರಿಂದ 500ರಷ್ಟು ಕನ್ನಡಿಗರಿಗೆ ಕೆಲಸ ಸಿಗುವಂತೆ ಮಾಡಿದೆ.












Click it and Unblock the Notifications