ಪ್ರೀತಿಯಿಂದ ಕನ್ನಡ ಕಲಿಸಬೇಕಾ, ರೌಡಿಸಂನಿಂದಲಾ?
ಪ್ರ : ಹಲವಾರು ಸಾಫ್ಟ್ ವೇರ್ ಇಂಜಿನಿಯರುಗಳು, ತಾವೇ ಸ್ವತಃ ಮುಂದಾಗಿ ಕನ್ನಡೇತರರಿಗೆ ತರಗತಿ ಮುಖಾಂತರ ಅಥವಾ ಆನ್ ಲೈನ್ ಮೂಲಕ ಕನ್ನಡ ಕಲಿಸುವ ಕೆಲಸಕ್ಕೆ ಮುಂದಾಗಿವೆ. ಕರವೇಯಿಂದ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸ ಏನು ನಡೆಯುತ್ತಿದೆ?
ನಾ. ಗೌಡ : ಕರವೇ ಅಂಗ ಸಂಸ್ಥೆಯಾದ ಬನವಾಸಿ ಬಳಗ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿರುವುದರ ಜೊತೆಗೆ, ಉದ್ಯೋಗ ಅಗತ್ಯವಿರುವ ಕನ್ನಡಿಗರಿಗೆ ಸಂದರ್ಶನ ಎದುರಿಸಲು ಸೂಕ್ತ ತರಬೇತಿ ನೀಡಿ ಅವರಿಗೆ ವಿವಿಧ ಐಟಿಬಿಟಿ ಕಂಪನಿಗಳಲ್ಲಿ, ಕೆಲಸ ಖಾಲಿ ಇರುವುದು ತಿಳಿದುಬಂದರೆ, ಕೆಲಸ ಕೊಡಿಸುವ ಕೈಂಕರ್ಯವನ್ನು ಕೈಗೊಂಡಿದೆ. ಐಟಿಬಿಟಿ ಉದ್ಯೋಗಿಗಳ ಜೊತೆ ವರ್ಷಕ್ಕೊಂದು ಬಾರಿ ಕನ್ನಡಿಗರ ಉದ್ಯೋಗದ ಅಗತ್ಯತೆಯ ಬಗ್ಗೆ, ಕನ್ನಡದ ಆಗುಹೋಗುಗಳ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ಪ್ರತಿವರ್ಷ ಜನವರಿಯಲ್ಲಿ ಚರ್ಚೆ ನಡೆಯುತ್ತದೆ.

ಪ್ರ : ಕನ್ನಡೇತರರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕಾ, ರೌಡಿಸಂನಿಂದ ಕನ್ನಡ ಕಲಿಸಬೇಕಾ? 'ಎಲಾ ಕುನ್ನಿ ಕರ್ನಾಟಕದಲ್ಲಿ ಕನ್ನಡ ಮಾತಾಡೋ' ಎಂಬಂತಹ ಭಾಷೆಯನ್ನು ರಕ್ಷಣಾ ವೇದಿಕೆ ಬಳಸುವುದು ಎಷ್ಟು ಸರಿ?
ನಾ. ಗೌಡ : ನನಗೆ ರೌಡಿಸಂನಲ್ಲಿ ಖಂಡಿತ ನಂಬಿಕೆ ಇಲ್ಲ. ಭಯೋತ್ಪಾದನೆ ಮಾಡಿ ನಮ್ಮ ಭಾಷೆಯನ್ನು, ಸಂಸ್ಕೃತಿಯನ್ನು ತಿಳಿಸುವ ಅಗತ್ಯವಿಲ್ಲ. ಆದರೆ, ನೋಡಿ ಕೆಲವೊಂದು ಸಾರಿ ಭೀತಿಯೂ ಅಗತ್ಯವಿದೆ. ಭೀತಿ ಅನ್ನುವುದಕ್ಕಿಂತ ಕ್ರಾಂತಿಯ ಅಗತ್ಯವಿದೆ ಅಂತ ಅನಿಸುತ್ತೆ. ಪ್ರೀತಿಯ ಹೋರಾಟಕ್ಕೆ ಯಶಸ್ಸು ಸಿಕ್ಕದಿದ್ದಾಗ ಇಂಥ ಕ್ರಾಂತಿ ಮಾಡಲೇಬೇಕಾಗುತ್ತದೆ. ಆದರೆ, ಫೇಸ್ ಬುಕ್ ನಲ್ಲಿ ಕರವೇ ಅಂತಹ ಭಾಷೆ ಬಳಸಿರುವ ಬಗ್ಗೆ ನನಗೆ ಗೊತ್ತಿಲ್ಲ. ನೋಡಿದ ಮೇಲೆ ಅಂಥ ಭಾಷೆ ಬಳಸದಂತೆ ನೋಡುತ್ತೇನೆ, ಸರಿಮಾಡಿಕೊಳ್ಳುತ್ತೇನೆ. 'ಕನ್ನಡ ಕಲಿ, ಇಲ್ಲವೇ ತೊಲಗಿ' ಅದು ನಮ್ಮ ಘೋಷಣೆ.
ಪ್ರ : ಬೆಳಗಾವಿ ವಿಚಾರಕ್ಕೆ ಬರುವುದಾದರೆ ಅಲ್ಲಿ ಮರಾಠಿಗರ ಪ್ರಾಬಲ್ಯದ ಮುಂದೆ ಕನ್ನಡಿಗರ ಹೋರಾಟದ ಧ್ವನಿ ಕಮ್ಮಿಯಾಗುತ್ತಿದೆಯೇ?
ನಾ. ಗೌಡ : ಜನಸಂಖ್ಯೆಯಲ್ಲಿ ಮರಾಠಿಗರು ಬೆಳಗಾವಿ ಜಿಲ್ಲೆಯಲ್ಲಿ ಪ್ರಾಬಲ್ಯರಾಗಿಲ್ಲ. ಜಿಲ್ಲೆಯ ಎರಡು ತಾಲೂಕಿನಲ್ಲಿ ಬಿಟ್ಟರೆ ಉಳಿದೆಲ್ಲಾ ಕಡೆ ಕನ್ನಡಿಗರೇ ಹೆಚ್ಚು. ಅಲ್ಲಿ ಪ್ರಮುಖವಾಗಿ ಗೆಲುವಿನ ತೀರ್ಮಾನ ಮಾಡುವವರು ಮರಾಠಿಗರು. ನಾವು ಹೋದ ಬಾರಿ ದೊಡ್ಡ ಜವಾಬ್ದಾರಿ ವಹಿಸಿಕೊಂಡು ಮರಾಠಿಗರ ಸೊಕ್ಕು ಅಡಗಿಸುವ ಕೆಲಸಕ್ಕೆ ಮುಂದಾಗಿದ್ದೆವು. ಎಂಇಎಸ್ ವಿರುದ್ದ ಕನ್ನಡಿಗರು ಒಂದಾಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ವಿನಂತಿ ಮಾಡಿಕೊಂಡು ಆಯಾಯ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯದಂತೆ ನೋಡಿಕೊಂಡೆವು. ಆಗ 22ಕ್ಕೆ 22 ಕನ್ನಡಿಗರು ಜಯಗಳಿಸಿದರು.
ಈ ಹಿಂದೆ ನನ್ನ ಭಾಷಣ ಕೇಳಲು ಬಂದಿದ್ದ ಕನ್ನಡದ ಹೆಣ್ಣು ಮಗಳು ಪ್ರಶಾಂತ್ ಬುಡವಿ ಅಲ್ಲಿ ಮೇಯರ್ ಆಗಿ ಆಯ್ಕೆಯಾದರು. ಇದು 25 ವರ್ಷಗಳ ಇತಿಹಾಸದಲ್ಲಿ ಮೊದಲು. ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಬಿಜೆಪಿ ಅಲ್ಲಿ ಮರಾಠಿಗರ ಜೊತೆ ಕರ್ನಾಟಕ ಸರಕಾರವೇ ಒಳ ಒಪ್ಪಂದ ಮಾಡಿಕೊಂಡಿತು. ಸಮ್ಮೇಳನ ಮುಗಿದ ಮರುದಿನವೇ ಮರಾಠಿ ಹೆಣ್ಣುಮಗಳೊಬ್ಬಳು ಅಲ್ಲಿ ಮೇಯರ್ ಅಗಿ ಆಯ್ಕೆಯಾದರು.
ವೋಟ್ ಬ್ಯಾಂಕಿಗೆ ಹೆದರಿ ಬಿಜೆಪಿ ಅಲ್ಲಿ ಮರಾಠಿಗರಿಗೆ ಬೆಂಬಲಿಸಿತು. ಒಬ್ಬರೇ ಒಬ್ಬರು ಮರಾಠಿ ಶಾಸಕರು ಆಯ್ಕೆಯಾದ ಬೆಳಗಾವಿಯಲ್ಲಿ ಕಳೆದ ಚುನಾವಣೆಯಲ್ಲಿ ಇಬ್ಬರು ಮರಾಠಿಗರು ಆಯ್ಕೆಯಾಗಿದ್ದಾರೆ. ಅದರಲ್ಲಿ ಸಂಭಾಜಿ ಪಾಟೀಲ್ ಎನ್ನುವ ಪಾತಕಿ ಕೂಡಾ ಒಬ್ಬ. ಇದು ಬೆಳಗಾವಿಯ ವಸ್ತುಸ್ಥಿತಿ.












Click it and Unblock the Notifications